Bihar Election 2025| ʼರಾಹುಲ್‌ಗಾಂಧಿಯ 95 ಸೋಲುʼ; ಸೋಲಿನ ಪಟ್ಟಿ ಹಂಚಿಕೊಂಡು ವ್ಯಂಗ್ಯವಾಡಿದ ಬಿಜೆಪಿ
ಅಮಿತ್ ಮಾಳವಿಯಾ ಅವರು ʼಎಕ್ಸ್ʼ ಖಾತೆಯಲ್ಲಿ 2004 ರಿಂದ 2025 ರವರೆಗಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡ ಸಂದರ್ಭ, ರಾಜಕೀಯ ಲಾಭ ಪಡೆಯದ ಸಂದರ್ಭಗಳ ಗ್ರಾಫಿಕ್ ಪಟ್ಟಿಯನ್ನು ಪೋಸ್ಟ್ ಮಾಡಿದ್ದಾರೆ.
ಬಿಹಾರದಲ್ಲಿ ಎರಡನೇ ಸತತ ಅವಧಿಗೆ ಎನ್‌ಡಿಎ ನೇತೃತ್ವದ ಸರ್ಕಾರ ಅಧಿಕಾರದ ಗದ್ದುಗೆ ಏರುವ ಸಾಧ್ಯತೆ ನಿಚ್ಚಳವಾದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿದ್ದ ʼವೋಟ್ ಚೋರಿʼ ಪ್ರಕರಣವನ್ನು ಬಿಜೆಪಿ ನಾಯಕರು ಫ್ಲ್ಯಾಪ್ ಶೋ ಎಂದು ವ್ಯಂಗ್ಯವಾಡಿದ್ದಾರೆ.
ಬಿಹಾರದ 243 ವಿಧಾನಸಭಾ ಸ್ಥಾನಗಳ ಮತ ಎಣಿಕೆಯಲ್ಲಿ ಎನ್‌ಡಿಎ 200 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ 34 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಈ ಫಲಿತಾಂಶವನ್ನೇ ಮುಂದಿಟ್ಟುಕೊಂಡು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಈವರೆಗೆ ಕಾಂಗ್ರೆಸ್ ಅನುಭವಿಸಿರುವ ʼ95 ಸೋಲುʼಗಳ ನಕ್ಷೆಯ ಪಟ್ಟಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಅಮಿತ್ ಮಾಳವಿಯಾ ಅವರು ʼಎಕ್ಸ್ʼ ಖಾತೆಯಲ್ಲಿ 2004 ರಿಂದ 2025 ರವರೆಗಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡ ಸಂದರ್ಭ, ರಾಜಕೀಯ ಲಾಭ ಪಡೆಯದ ಸಂದರ್ಭಗಳ ಗ್ರಾಫಿಕ್ ಪಟ್ಟಿಯನ್ನು ಪೋಸ್ಟ್ ಮಾಡಿದ್ದಾರೆ.
ಅದರಲ್ಲಿ “ರಾಹುಲ್ ಗಾಂಧಿ!, ಮತ್ತೊಂದು ಚುನಾವಣೆ, ಮತ್ತೊಂದು ಸೋಲು!. ಚುನಾವಣಾ ಸ್ಥಿರತೆಯಿಗಾಗಿ ಪ್ರಶಸ್ತಿ ಇದ್ದಿದ್ದರೆ ಅವರು ಅವನ್ನೆಲ್ಲ ಗೆಲ್ಲುತ್ತಿದ್ದರು. ಇಷ್ಟು ವೇಗವಾಗಿ ಸೋಲುವ ಒಳ್ಳೆಯ ಅವಕಾಶಗಳನ್ನೇ ಹುಡುಕಿಕೊಂಡು ಬರುತ್ತಾರೆ,” ಎಂದು ಪೋಸ್ಟ್‌ನಲ್ಲಿ ಬರೆದಿದ್ದಾರೆ.
ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ತಾರಾ ಪ್ರಚಾರಕರಾಗಿ ಕಾಣಿಸಿಕೊಂಡ ನಂತರ ಅನುಭವಿಸಿದ 95 ಚುನಾವಣಾ ಹಿನ್ನಡೆಗಳನ್ನು ಪಟ್ಟಿ ಮಾಡಲಾಗಿದೆ. ಹಿಮಾಚಲ ಪ್ರದೇಶ (2007, 2017), ಪಂಜಾಬ್ (2007, 2012, 2022), ಗುಜರಾತ್ (2007, 2012, 2017, 2022), ಮಧ್ಯಪ್ರದೇಶ (2008, 2013, 2018, 2023), ಮಹಾರಾಷ್ಟ್ರ (2014, 2019, 2024) ಸೇರಿ ಅನೇಕ ರಾಜ್ಯಗಳ ಚುನಾವಣೆಗಳ ಸೋಲುಗಳು ಇದರಲ್ಲಿವೆ.
ಎನ್‌ಡಿಎ ತೆಕ್ಕೆಗೆ ಬಿಹಾರ
ಈ ನಡುವೆ, ಎನ್‌ಡಿಎ ಭಾರೀ ಗೆಲುವಿನತ್ತ ಸಾಗುತ್ತಿದೆ. ರಾಹುಲ್ ಗಾಂಧಿ ಮಾಡಿದ “ವೋಟ್ ಚೋರಿ” ಆರೋಪವನ್ನು ಮೆಟ್ಟಿ ನಿಂತು ನಿತೀಶ್‌ಕುಮಾರ್ ಗೆಲುವಿನ ನಗೆ ಬೀರುತ್ತಿದ್ದಾರೆ.
ಎನ್‌ಡಿಎ ಮೈತ್ರಿಕೂಟದಲ್ಲೇ ಬಿಜೆಪಿ ಮತ್ತು ಜೆಡಿಯು ಅತಿ ದೊಡ್ಡ ಪಕ್ಷವಾಗಲು ಪೈಪೋಟಿ ನಡೆಸಿದ್ದವು. ಅಂತಿಮವಾಗಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊರಮ್ಮಿತು.
ಮಹಾಘಟಬಂಧನ್‌ನಲ್ಲಿ ಆರ್‌ಜೆಡಿ ಸ್ವಲ್ಪ ಮಟ್ಟಿನ ಪ್ರತಿಸ್ಪರ್ಧೆ ತೋರಿಸಿದ್ದರೆ, ಕಾಂಗ್ರೆಸ್ ಮತ್ತು ಎಡಪಕ್ಷಗಳು ಭಾರೀ ಹಿನ್ನಡೆ ಅನುಭವಿಸಿವೆ. ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ನೇತೃತ್ವದ ಜನ್ ಸುರಾಜ್ ಪಕ್ಷವು ಇದೇ ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಧುಮುಕಿದ್ದು, ಆರಂಭಿಕ ಹಂತದಲ್ಲಿ ಮಾತ್ರ ಕೆಲ ಸ್ಥಾನಗಳಲ್ಲಿ ಮುನ್ನಡೆ ಪಡೆದಿತ್ತು. ನಂತರ ಹಿನ್ನೆಡೆಯಲ್ಲೇ ಸಾಗಿತು.