Rahul Gandhi : ಕಾಂಗ್ರೆಸ್ನಲ್ಲಿದ್ದು ಬಿಜೆಪಿಗೆ ಕೆಲಸ ಮಾಡುವವರನ್ನು ಉಚ್ಛಾಟನೆ ಮಾಡಬೇಕಾಗಿದೆ; ರಾಹುಲ್ ಗಾಂಧಿ
ಮುಂಬರುವ ದಿನಗಳಲ್ಲಿ ಪಕ್ಷದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳು ಆಗುವುದಾಗಿಯೂ ಸೂಚನೆ ನೀಡಿದರು. ಬಿಜೆಪಿಯನ್ನು ಸೋಲಿಸಲು ಪಕ್ಷ ಬಲಿಷ್ಠ ಯೋಜನೆ ಹಾಕಿಕೊಂಡಿರುವುದಾಗಿ ರಾಹುಲ್ ತಿಳಿಸಿದರು.;
ಗುಜರಾತ್‌ನಲ್ಲಿ ನಡೆದ ಸಭೆಯಲ್ಲಿ ರಾಹುಲ್ ಗಾಂಧಿ ಮಾತನಾಡಿದರು.
ತಮ್ಮ ಪಕ್ಷದಲ್ಲಿ ಬಿಜೆಪಿ ಪರ ಕೆಲಸ ಮಾಡುತ್ತಿರುವ ನಾಯಕರನ್ನು ಮತ್ತು ಕಾರ್ಯಕರ್ತರನ್ನು ಗುರುತಿಸಿ ತೆಗೆದುಹಾಕಬೇಕಾದ ಅಗತ್ಯವಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಹೇಳಿದ್ದಾರೆ. ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಜತೆಗೆ ನೇರವಾಗಿ ಪಕ್ಷದಿಂದ ತೆಗೆದುಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಗಾಂಧಿ ಅವರು ತಮ್ಮ ಎರಡು ದಿನಗಳ ಗುಜರಾತ್ ಭೇಟಿಯ ಎರಡನೇ ದಿನದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರನ್ನು ಎರಡು ಗುಂಪುಗಳಾಗಿ ವಿಭಜಿಸುವ ಕೆಲಸ ನಡೆಯುತ್ತಿದೆ. ಕೆಲವರು ಪಕ್ಷದ ಸಿದ್ಧಾಂತವನ್ನು ಮನಸ್ಸಿನಲ್ಲಿ ಇಟ್ಟು ಜನರೊಂದಿಗೆ ನಿಂತಿರುತ್ತಾರೆ. ಇನ್ನೂ ಕೆಲವರು ಜನರೊಂದಿಗೆ ಸಂಪರ್ಕ ಸಾಧಿಸದೇ ಕಾಂಗ್ರೆಸ್ನಲ್ಲಿದ್ದು ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಗುಜರಾತ್ ವಿಧಾನಸಭಾ ಚುನಾವಣೆಗೆ ತಯಾರಿ
2027ರಲ್ಲಿ ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸುವ ಉದ್ದೇಶದಿಂದ ರಾಹುಲ್ ಈ ಭೇಟಿ ನಿಗದಿ ಮಾಡಿದ್ದಾರೆ. ಸಭೆಯಲ್ಲಿ ಅವರು ಮುಂಬರುವ ದಿನಗಳಲ್ಲಿ ಪಕ್ಷದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳು ಆಗುವುದಾಗಿಯೂ ಸೂಚನೆ ನೀಡಿದರು. ಬಿಜೆಪಿಯನ್ನು ಸೋಲಿಸಲು ಪಕ್ಷ ಬಲಿಷ್ಠ ಯೋಜನೆ ಹಾಕಿಕೊಂಡಿರುವುದಾಗಿ ತಿಳಿಸಿದರು.
"ಗುಜರಾತ್ ಕಾಂಗ್ರೆಸ್ನಲ್ಲಿ ಕಾರ್ಯಕರ್ತರ ನಡುವೆ ಎರಡು ವಿಧದ ಜನರಿದ್ದಾರೆ. ಕೆಲವರು ಜನರೊಂದಿಗೆ ನಿಷ್ಠೆಯಿಂದ ನಿಂತು ಅವರ ಹಿತಾಸಕ್ತಿಗಾಗಿ ಹೋರಾಡುವವರು. ಅವರು ಕಾಂಗ್ರೆಸ್ ತತ್ವಗಳನ್ನು ಹೃದಯದಲ್ಲಿ ಇಟ್ಟುಕೊಂಡಿರುವವರು. ಮತ್ತೊಂದೆಡೆ, ಜನರೊಂದಿಗೆ ಸಂಪರ್ಕವೇ ಇಲ್ಲದೆ ಇರುವವರು. ಅವರು ಜನರನ್ನು ಗೌರವಿಸುವವರಲ್ಲ ಮತ್ತು ಅರ್ಧ ಭಾಗ ಬಿಜೆಪಿಯವರೊಂದಿಗೆ ಇರುತ್ತಾರೆ," ಎಂದು ಅವರು ಹೇಳಿದರು.
"ಈ ಎರಡು ಗುಂಪುಗಳ ನಡುವಿನ ಭೇದವನ್ನು ಪ್ರತ್ಯಕ್ಷವಾಗಿ ಗುರುತಿಸಿ, ಕಠಿಣ ಕ್ರಮ ಕೈಗೊಳ್ಳಬೇಕು. ಯಾರಿಗಾದರೂ ಪಕ್ಷದ ಸಿದ್ಧಾಂತದ ಜತೆ ಸಾಗುವ ಇಚ್ಛೆ ಇಲ್ಲದಿದ್ದರೆ, ತಕ್ಷಣವೇ ಹೊರಗೆ ಹೋಗಬೇಕು" ಎಂದು ಅವರು ಸೂಚನೆ ಕೊಟ್ಟರು.
"ಗುಜರಾತ್ ಜನರು ನಮ್ಮನ್ನು ನಂಬಬೇಕಾದರೆ ಈ ಎರಡು ಗುಂಪುಗಳ ವ್ಯತ್ಯಾಸ ಸ್ಪಷ್ಟವಾಗಬೇಕು" ಎಂದು ಅವರು ಹೇಳಿದರು.
ಕಾಂಗ್ರೆಸ್ ಪಕ್ಷದ ಬದಲಾವಣೆ ಅಗತ್ಯ
"ನಮ್ಮ ಜಿಲ್ಲಾ, ಬ್ಲಾಕ್ ಅಧ್ಯಕ್ಷರು ಮತ್ತು ಹಿರಿಯ ನಾಯಕರ ಹೃದಯದಲ್ಲಿ ಕಾಂಗ್ರೆಸ್‌ಗಾಗಿ ಸ್ಥಳವಿರಬೇಕು. ಅವರ ರಕ್ತದಲ್ಲಿಯೇ ಕಾಂಗ್ರೆಸ್ ತತ್ವಗಳು ಇರಬೇಕು. ಚುನಾವಣೆ ಗೆಲುವು ಅಥವಾ ಸೋಲು ಎಂಬುದನ್ನು ಪಕ್ಕಕ್ಕೆ ಇರಿಸಿ, ನಾವು ಇದನ್ನು ಮಾಡಿದಾಗಲೇ ಗುಜರಾತ್ ಜನರು ನಮ್ಮ ಪಕ್ಷವನ್ನು ಒಪ್ಪಿಕೊಳ್ಳಲು ಪ್ರಾರಂಭಿಸುತ್ತಾರೆ" ಎಂದು ರಾಹುಲ್ ಹೇಳಿದರು.
"ಗುಜರಾತ್ ಜನರು ಕಷ್ಟದಲ್ಲಿದ್ದಾರೆ. ಡೈಮಂಡ್, ಜವಳಿ ಮತ್ತು ಸೆರಾಮಿಕ್ ಉದ್ಯಮ ಕುಸಿತಕ್ಕೆ ಒಳಗಾಗಿದೆ. . ರೈತರು ಹೊಸ ಆದಾಯಕ್ಕಾಗಿ ಅಳುವಂತಾಗಿದೆ. ಕಳೆದ 20-25 ವರ್ಷಗಳ ಆಡಳಿತ ವಿಫಲವಾಗಿದೆ. ಕಾಂಗ್ರೆಸ್ ಬಳಿ ಇದಕ್ಕೆಲ್ಲ ಪರಿಹಾರ ಇದೆ. ಆದರೆ, ಮೊದಲು ಪಕ್ಷವನ್ನು ಜನರು ಒಪ್ಪಿಕೊಳ್ಳುವಂತೆ ಮಾಡಬೇಕು,'' ಎಂದು ಹೇಳಿದರು.
"ಗುಜರಾತ್ ಮುಂದೆ ಸಾಗಲು ಬಯಸುತ್ತಿದೆ. ಆದರೆ ಪಥ ಕಾಣುತ್ತಿಲ್ಲ. ಕಾಂಗ್ರೆಸ್ ಪಕ್ಷವು ಆ ಮಾರ್ಗವನ್ನು ತೋರಿಸುವಲ್ಲಿ ವಿಫಲವಾಗಿದೆ" ಎಂದೂ ರಾಹುಲ್ ಒಪ್ಪಿಕೊಂಡರು.
"ನಾನು ಭಯದಿಂದ ಅಥವಾ ಹಿನ್ನಡೆ ಕಾರಣಕ್ಕೆ ಹೇಳುತ್ತಿಲ್ಲ. ನಾವು ನಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸದೆ ಇರುವುದರಿಂದ, ಗುಜರಾತ್ ಜನರು ನಮ್ಮನ್ನು ಒಪ್ಪಿಕೊಳ್ಳುತ್ತಿಲ್ಲ" ಎಂದು ನುಡಿದರು.
"ಪಕ್ಷವು 30 ವರ್ಷಗಳಿಂದ ಗುಜರಾತ್‌ನಲ್ಲಿ ಅಧಿಕಾರಕ್ಕೆ ಬಾರದಿರುವುದರಿಂದ, ನಾವು ಪ್ರತಿ ಸಲ ಚುನಾವಣೆಯ ಕುರಿತು ಮಾತ್ರ ಮಾತನಾಡುತ್ತಿದ್ದೇವೆ. ಆದರೆ ನಾವು ನಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ" ಎಂದು ಅವರು ಅಭಿಪ್ರಾಯಪಟ್ಟರು.
ಶೇಕಡಾ 5% ಮತ ಪ್ರಮಾಣ ಹೆಚ್ಚಿಸಬೇಕು
"ನಾವು ನಮ್ಮ ಮತದ ಪ್ರಮಾಣದಲ್ಲಿ ಶೇ.5 ರಷ್ಟು ಹೆಚ್ಚಿಸಿದರೆ, ಗುಜರಾತ್‌ನಲ್ಲಿ ಅಧಿಕಾರಕ್ಕೆ ಬರಬಹುದು. ತೆಲಂಗಾಣ ಚುನಾವಣೆಯಲ್ಲಿ ನಾವು ಶೇ.22 ರಷ್ಟು ಮತಗಳನ್ನು ಹೆಚ್ಚಿಸಿಕೊಂಡೆವು. ಅದೇ ರೀತಿ ಇಲ್ಲಿ ಪ್ರಯತ್ನಿಸಬಹುದು" ಎಂದು ಗಾಂಧಿ ಅಭಿಪ್ರಾಯಪಟ್ಟರು.
ಗುಜರಾತ್ ಪ್ರವಾಸದ ಮೊದಲ ದಿನವಾದ ಶುಕ್ರವಾರ, ಜಿಲ್ಲಾ ಮತ್ತು ಬ್ಲಾಕ್ ಮಟ್ಟದ ನಾಯಕರೊಂದಿಗೆ ರಾಹುಲ್ ಚರ್ಚೆ ನಡೆಸಿದರು. ಅಖಿಲ ಭಾರತ ಕಾಂಗ್ರೆಸ್ ಸಮಿತಿ (AICC)ಯ ಮಹತ್ವದ ಸಭೆಯು ಏಪ್ರಿಲ್ 8-9 ರಂದು ಅಹಮದಾಬಾದ್‌ನಲ್ಲಿ ನಡೆಯಲಿದೆ. ಈ ಸಭೆಯು 64 ವರ್ಷಗಳ ನಂತರ ಗುಜರಾತ್‌ನಲ್ಲಿ ನಡೆಯುತ್ತಿದೆ.
2022 ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ, ಕಾಂಗ್ರೆಸ್ ಕೇವಲ 17 ಕ್ಷೇತ್ರಗಳನ್ನು ಗೆದ್ದಿತು (ಒಟ್ಟು 182 ಸ್ಥಾನಗಳಲ್ಲಿ). ನಂತರ 5 ಶಾಸಕರು ರಾಜೀನಾಮೆ ನೀಡಿದ ಪರಿಣಾಮ ಪಕ್ಷದ ಸದಸ್ಯತ್ವ 12ಕ್ಕಿಳಿಯಿತು.