ನವದೆಹಲಿ: ಐಎಎಸ್ ಮಾಜಿ ಪ್ರೊಬೇಷನರಿ ಅಧಿಕಾರಿ ಪೂಜಾ ಖೇಡ್ಕರ್ ಅವರ ಉಮೇದುವಾರಿಕೆ ರದ್ದು ಆದೇಶವನ್ನು ಎರಡು ದಿನಗಳೊಳಗೆ ತಿಳಿಸಲಾಗುತ್ತದೆ ಎಂದು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ)ವು ದೆಹಲಿ ಹೈಕೋರ್ಟ್‌ಗೆ ಬುಧವಾರ ತಿಳಿಸಿದೆ.
ಯುಪಿಎಸ್‌ಸಿ ಸಲ್ಲಿಕೆಯನ್ನು ಪರಿಗಣಿಸಿದ ನ್ಯಾ.ಜ್ಯೋತಿ ಸಿಂಗ್ ಅವರು ತಮ್ಮ ಉಮೇದುವಾರಿಕೆಯನ್ನು ವಜಾಗೊಳಿಸಲಾಗಿದೆ ಎಂಬ ಆಯೋಗದ ಪತ್ರಿಕಾ ಪ್ರಕಟಣೆಯನ್ನು ಪ್ರಶ್ನಿಸಿ, ಖೇಡ್ಕರ್ ಸಲ್ಲಿಸಿದ್ದ ಮನವಿಯನ್ನು ವಿಲೇವಾರಿ ಮಾಡಿದರು.
ʻಕಾನೂನಿಗೆ ಅನುಸಾರವಾಗಿ ಸೂಕ್ತ ವೇದಿಕೆಯನ್ನು ಸಂಪರ್ಕಿಸಲು ಅರ್ಜಿದಾರರಿಗೆ ಸ್ವಾತಂತ್ರ್ಯ ನೀಡಲು ಅರ್ಜಿಯನ್ನು ವಿಲೇವಾರಿ ಮಾಡಲಾಗಿದೆ. ನ್ಯಾಯಾಲಯವು ಪ್ರಕರಣದ ಅರ್ಹತೆ ಬಗ್ಗೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ,ʼ ಎಂದು ನ್ಯಾಯಾಲಯ ಹೇಳಿದೆ.
ಯುಪಿಎಸ್‌ಸಿಗೆ ವಿಳಾಸವನ್ನು ನೀಡುವಂತೆ ಖೇಡ್ಕರ್ ಅವರಿಗೆ ಹೇಳಿದ್ದು, ಆದೇಶವನ್ನು ಭೌತಿಕವಾಗಿ ಮತ್ತು ವಿದ್ಯುನ್ಮಾನ ರೂಪದಲ್ಲಿ ಅವರಿಗೆ ಒದಗಿಸುವಂತೆ ಸೂಚಿಸಿದೆ.
ರದ್ದು ಆದೇಶ ಕುರಿತು ಖೇಡ್ಕರ್ ಅವರು ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ (ಸಿಎಟಿ) ಗೆ ಹೋಗಬೇಕಾಗುತ್ತದೆ ಎಂದು ಹೇಳಿದೆ.
ಖೇಡ್ಕರ್ ಪರ ವಾದ ಮಂಡಿಸಿದ ಹಿರಿಯ ವಕೀಲೆ ಇಂದಿರಾ ಜೈಸಿಂಗ್, ಐಎಎಸ್ ರದ್ದು ಆದೇಶವನ್ನು ತಮಗೆ ತಿಳಿಸಿಲ್ಲ ಮತ್ತು ಪತ್ರಿಕಾ ಪ್ರಕಟಣೆ ಮೂಲಕವೇ ಈ ಬಗ್ಗೆ ನನಗೆ ತಿಳಿದು ಬಂದಿದೆ,ʼ ಎಂದು ಹೇಳಿದರು. ಸಿಎಟಿಯನ್ನು ಏಕೆ ಸಂಪರ್ಕಿಸಿಲ್ಲ ಎಂದು ಪ್ರಶೆಗೆ, ಯುಪಿಎಸ್‌ಸಿ ಅಧಿಕೃತ ಆದೇಶ ನೀಡದ ಕಾರಣ, ಹೈಕೋರ್ಟ್‌ಗೆ ಮನವಿ ಸಲ್ಲಿಸಲಾಗಿದೆ ಎಂದು ಇಂದಿರಾ ಜೈಸಿಂಗ್ ಹೇಳಿದರು.
ಯುಪಿಎಸ್‌ಸಿ ವಕೀಲ ನರೇಶ್ ಕೌಶಿಕ್, ಆಯೋಗವು ಎರಡು ದಿನಗಳಲ್ಲಿ ಖೇಡ್ಕರ್ ಅವರಿಗೆ ಇಮೇಲ್ ಮತ್ತು ಅವರ ಮನೆ ವಿಳಾಸಕ್ಕೆ ಮಾಹಿತಿ ತಿಳಿಸುತ್ತದೆ ಎಂದು ಹೇಳಿದರು.