ಅಸ್ಸಾಂನಲ್ಲಿ 6,300 ಕೋಟಿ ರೂಪ ಮೊತ್ತದ ಯೋಜನೆಗಳಿಗೆ ಮೋದಿ ಚಾಲನೆ
ಮಂಗಲ್ದೋಯಿಯಲ್ಲಿ ನಡೆದ ಸಮಾರಂಭದಲ್ಲಿ, 570 ಕೋಟಿ ರೂ. ವೆಚ್ಚದ ದರಾಂಗ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ನರ್ಸಿಂಗ್ ಕಾಲೇಜು ಹಾಗೂ ಜಿಎನ್‌ಎಂ ಶಾಲೆಯ ನಿರ್ಮಾಣಕ್ಕೆ ಚಾಲನೆ ನೀಡಿದರು.;
ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಅಸ್ಸಾಂನ ದರಾಂಗ್ ಜಿಲ್ಲೆಯಲ್ಲಿ, ಆರೋಗ್ಯ ಮತ್ತು ಮೂಲಸೌಕರ್ಯ ಕ್ಷೇತ್ರಗಳಿಗೆ ಸಂಬಂಧಿಸಿದ 6,300 ಕೋಟಿ ರೂಪಾಯಿ ಬೃಹತ್ ಮೊತ್ತದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಮಂಗಲ್ದೋಯಿಯಲ್ಲಿ ನಡೆದ ಸಮಾರಂಭದಲ್ಲಿ, 570 ಕೋಟಿ ರೂ. ವೆಚ್ಚದ ದರಾಂಗ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ನರ್ಸಿಂಗ್ ಕಾಲೇಜು ಹಾಗೂ ಜಿಎನ್‌ಎಂ ಶಾಲೆಯ ನಿರ್ಮಾಣಕ್ಕೆ ಚಾಲನೆ ನೀಡಿದರು.
ಈ ಭಾಗದ ಸಂಪರ್ಕ ವ್ಯವಸ್ಥೆಗೆ ಕ್ರಾಂತಿಕಾರಕ ಬದಲಾವಣೆ ತರಲಿರುವ ಎರಡು ಪ್ರಮುಖ ಯೋಜನೆಗಳಿಗೂ ಪ್ರಧಾನಿ ಅಡಿಗಲ್ಲು ಹಾಕಿದರು. ಅಂದಾಜು 1,200 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ 2.9 ಕಿ.ಮೀ. ಉದ್ದದ ನರೆಂಗಿ-ಕುರುವಾ ಸೇತುವೆ ಮತ್ತು ಅಸ್ಸಾಂನ ಕಾಮ್ರೂಪ್, ದರಾಂಗ್ ಹಾಗೂ ಮೇಘಾಲಯದ ರಿ ಭೋಯಿ ಜಿಲ್ಲೆಯನ್ನು ಸಂಪರ್ಕಿಸುವ 4,530 ಕೋಟಿ ರೂಪಾಯಿ ವೆಚ್ಚದ 118.5 ಕಿ.ಮೀ. ಉದ್ದದ ಗುವಾಹಟಿ ರಿಂಗ್ ರೋಡ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಯೋಜನೆಗಳು ಈ ಪ್ರದೇಶದಲ್ಲಿ ಉಪನಗರಗಳ ಬೆಳವಣಿಗೆಗೆ ಸಹಕಾರಿಯಾಗಲಿವೆ ಎಂದು ನಿರೀಕ್ಷಿಸಲಾಗಿದೆ.
ಗೋಲಾಘಾಟ್ ಜಿಲ್ಲೆಯ ನುಮಾಲಿಗಢ ಸಂಸ್ಕರಣಾಗಾರದಲ್ಲಿ 5,000 ಕೋಟಿ ರೂಪಾಯಿಗೂ ಅಧಿಕ ವೆಚ್ಚದ ಬಿದಿರು ಆಧಾರಿತ ಎಥೆನಾಲ್ ಸ್ಥಾವರ ಮತ್ತು 7,230 ಕೋಟಿ ರೂಪಾಯಿ ವೆಚ್ಚದ ಪೆಟ್ರೋ ಫ್ಲೂಯಿಡೈಸ್ಡ್ ಕೆಟಲಿಟಿಕ್ ಕ್ರ್ಯಾಕರ್ ಘಟಕವನ್ನು ಉದ್ಘಾಟಿಸಲಿದ್ದಾರೆ. ಶನಿವಾರ ಸಂಜೆ ಅಸ್ಸಾಂಗೆ ಆಗಮಿಸಿದ್ದ ಮೋದಿ ಅವರು, ಭಾರತ ರತ್ನ ಭೂಪೇನ್ ಹಜಾರಿಕಾ ಅವರ ಜನ್ಮ ಶತಮಾನೋತ್ಸವ ಆಚರಣೆಯಲ್ಲೂ ಭಾಗವಹಿಸಿದ್ದರು.