Operation Sindoor |ಡ್ರೋಣ್‌ ದಾಳಿಯಲ್ಲಿ ತನ್ನ ಪಾತ್ರವಿಲ್ಲ; ಉಲ್ಟಾ ಹೊಡೆದ ಪಾಕಿಸ್ತಾನ

"ಪಠಾಣ್‌ಕೋಟ್, ಜೈಸಲ್ಮೇರ್ ಮತ್ತು ಶ್ರೀನಗರದ ಮೇಲೆ ಪಾಕಿಸ್ತಾನ ದಾಳಿ ಪ್ರಾರಂಭಿಸಿದೆ ಎಂಬ ಭಾರತದ ಆರೋಪವನ್ನು ಸ್ಪಷ್ಟವಾಗಿ ತಿರಸ್ಕರಿಸುತ್ತೇವೆ" ಎಂದು ಪಾಕ್‌ ವಿದೇಶಾಂಗ ಕಚೇರಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.;

Update: 2025-05-09 10:04 GMT

ಡ್ರೋಣ್‌ನ ಅವಷೇಶಗಳು.

ಭಾರತದ ಹಲವು ಸ್ಥಳಗಳ ಮೇಲೆ ನಡೆದ ಡ್ರೋಣ್‌ ದಾಳಿಯ ಆರೋಪವನ್ನು ಪಾಕಿಸ್ತಾನ ತಳ್ಳಿಹಾಕಿದೆ. ಡ್ರೋಣ್‌ ದಾಳಿಯಲ್ಲಿ ತನ್ನ ಪಾತ್ರವಿಲ್ಲ. ಮಾಧ್ಯಮ ವರದಿಗಳು ಸಂಪೂರ್ಣ ಆಧಾರರಹಿತ. ಅಲ್ಲದೇ ದುರ್ಬಲ ಪ್ರಚಾರದ ಅಭಿಯಾನವಾಗಿದೆ. ಇಂತಹ ವರದಿಗಳಿಂದ ಪ್ರಾದೇಶಿಕ ಶಾಂತಿಗೆ ಅಪಾಯ ಎದುರಾಗಲಿದೆ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿ ಹೇಳಿದೆ.

ಜಮ್ಮು, ಪಠಾಣ್‌ಕೋಟ್, ಉಧಮ್‌ಪುರ ಸೇನಾ ನೆಲೆಗಳ ಮೇಲೆ ದಾಳಿ ಮಾಡುವ ಪಾಕಿಸ್ತಾನ ಸೇನೆಯ ಪ್ರಯತ್ನವನ್ನು ಭಾರತ ಗುರುವಾರ ರಾತ್ರಿ ಭಾರತೀಯ ಸೇನೆ ವಿಫಲಗೊಳಿಸಿದ್ದಾಗಿ ರಕ್ಷಣಾ ಸಚಿವಾಲಯ ಹೇಳಿತ್ತು. ಭಾರತದ ಈ ಆರೋಪದ ಬೆನ್ನಲ್ಲೇ ಪ್ರಕ್ರಿಯಿಸಿರುವ ಪಾಕಿಸ್ತಾನವು ತನಗೂ, ಡ್ರೋಣ್‌ ದಾಳಿಗೂ ಸಂಬಂಧವಿಲ್ಲ ಎಂದು ತಿಳಿಸಿದೆ. 

"ಭಾರತೀಯ ಮಾಧ್ಯಮಗಳು ಆಧಾರರಹಿತ ಮತ್ತು ಬೇಜವಾಬ್ದಾರಿಯುತ ಆರೋಪಗಳನ್ನು ಪ್ರಚಾರ ಮಾಡುತ್ತಿವೆ. ಪಠಾಣ್‌ಕೋಟ್, ಜೈಸಲ್ಮೇರ್ ಮತ್ತು ಶ್ರೀನಗರದ ಮೇಲೆ ದಾಳಿಯ ಆರೋಪವನ್ನು ಸ್ಪಷ್ಟವಾಗಿ ತಿರಸ್ಕರಿಸುತ್ತೇವೆ. ಪಾಕಿಸ್ತಾನವನ್ನು ಕೆಣಕುವ ರೀತಿಯ ಈ ಆರೋಪಗಳನ್ನು ಪ್ರಬಲವಾಗಿ ತಿರಸ್ಕರಿಸುತ್ತೇವೆʼ ಎಂದು ಹೇಳಿದ್ದಾರೆ. 

ಪಾಕಿಸ್ತಾನದ ವಿರುದ್ಧ ಯಾವುದೇ ಸೂಕ್ತ ಕಾರಣವಿಲ್ಲದೇ ಆರೋಪ ಹೊರಿಸಲಾಗುತ್ತಿದೆ. ಇಂತಹ ಕ್ರಮಗಳು ಪ್ರಾದೇಶಿಕ ಶಾಂತಿಗೆ ಅಪಾಯ ಉಂಟು ಮಾಡುವುದಲ್ಲದೇ ತೊಂದರೆ ನೀಡುವಂತಿವೆ. ರಾಜಕೀಯ ಮತ್ತು ಮಿಲಿಟರಿ ಉದ್ದೇಶಗಳಿಗಾಗಿ ತಪ್ಪು ಮಾಹಿತಿ ನೀಡಲಾಗುತ್ತಿದೆ. ಈ "ಅಪಾಯಕಾರಿ ನಡವಳಿಕೆ"ಯನ್ನು ಗಂಭೀರವಾಗಿ ಪರಿಗಣಿಸುವಂತೆ ಹಾಗೂ ಭಾರತಕ್ಕೆ ಸಂಯಮ ಮತ್ತು ಜವಾಬ್ದಾರಿಯಿಂದ ವರ್ತಿಸುವಂತೆ ಸಲಹೆ ನೀಡಲು ಪಾಕಿಸ್ತಾನವು ಅಂತರರಾಷ್ಟ್ರೀಯ ಸಮುದಾಯವನ್ನು ಒತ್ತಾಯಿಸಿದೆ.

ಸುಳ್ಳು ನೆಪಗಳನ್ನು ಆಧರಿಸಿ ಪಾಕಿಸ್ತಾನದ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ಉಂಟಾದರೆ ದೃಢಸಂಕಲ್ಪದೊಂದಿಗೆ ಎದುರಿಸಲಾಗುವುದು. ನಾವು ಶಾಂತಿಗೆ ಬದ್ಧವಾಗಿದ್ದೇವೆ. ಪ್ರಚೋದಿಸುವುದು, ಬೆದರಿಸುವುದು, ದಾರಿತಪ್ಪಿಸುವುದು ಮತ್ತು ಆಕ್ರಮಣಕಾರಿ ಕೃತ್ಯಗಳಿಗೆ ಪ್ರತಿಕ್ರಿಯಿಸುವ ಹಕ್ಕನ್ನು ಹೊಂದಿದ್ದೇವೆ ಎಂದು ಪಾಕಿಸ್ತಾನ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಜಮ್ಮುಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು 26 ಪ್ರವಾಸಿಗರ ಮೇಲೆ ದಾಳಿ ಮಾಡಿದ್ದರು. ಪಹಲ್ಗಾಮ್ ಹತ್ಯಾಕಾಂಡಕ್ಕೆ ಪ್ರತೀಕಾರವಾಗಿ ಭಾರತೀಯ ಸಶಸ್ತ್ರ ಪಡೆಗಳು ಬುಧವಾರ (ಮೇ7) ಮುಂಜಾನೆ ಭಯೋತ್ಪಾದಕ ಅಡಗುತಾಣಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದವು. ದಾಳಿ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ.

Tags:    

Similar News