Pahalgam Terror Attack | ಪಹಲ್ಗಾಮ್ ಭಯೋತ್ಪಾದಕರ ದಾಳಿ; ತಿರುಪತಿಯಲ್ಲಿ ಬಿಗಿ ಭದ್ರತೆ
ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆಸಿದ ಉಗ್ರರ ದಾಳಿ ಬೆನ್ನಲ್ಲೇ ಸಾವಿರಾರು ಭಕ್ತರು ಬರುವ ತಿರುಪತಿ ದೇವಾಲಯಕ್ಕೆ ಮುಂಜಾಗ್ರತ ಕ್ರಮವಾಗಿ ಹೆಚ್ಚಿನ ಭದ್ರತೆ ನೀಡಲಾಗಿದೆ.;
ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯ(ಎಕ್ಸ್ ಖಾತೆಯಿಂದ)
ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.
ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆಸಿದ ಉಗ್ರರ ದಾಳಿ ಬೆನ್ನಲ್ಲೇ ತಿರುಪತಿಯಲ್ಲೂ ಸಂಭಾವ್ಯ ದಾಳಿ ಕುರಿತು ಗುಪ್ತಚರ ಮಾಹಿತಿ ಆಧರಿಸಿ ಭದ್ರತೆ ಹೆಚ್ಚಿಸಲಾಗಿದೆ. ತಿರುಪತಿಗೆ ಪ್ರತಿದಿನ ಸಾವಿರಾರು ಭಕ್ತರು ಬರುವ ಹಿನ್ನೆಲೆಯಲ್ಲಿ ತಿರುಪತಿ, ತಿರುಮಲ ಬೆಟ್ಟ ಸೇರಿದಂತೆ ದೇವಾಲಯ ಸುತ್ತ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.
ತಿರುಪತಿ ತಿರುಮಲ ದೇವಸ್ಥಾನ ಮಂಡಳಿಯ ನೇತೃತ್ವದಲ್ಲಿ ಎಲ್ಲೆಡೆ ತೀವ್ರ ತಪಾಸಣೆ ನಡೆಸಲಾಗುತ್ತಿದ್ದು, ಬೆಟ್ಟಕ್ಕೆ ಹೋಗುವ ಮಾರ್ಗದಲ್ಲಿ ಪ್ರವಾಸಿಗರ ಮೇಲೆ ನಿಗಾ ಇರಿಸಲಾಗಿದೆ. ಸರ್ಕಾರಿ ಬಸ್ ಸೇರಿದಂತೆ ಎಲ್ಲಾ ವಾಹನಗಳನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಬೆಟ್ಟ ಹತ್ತುವ ʼಅಲಿಪಿರಿ ತಪಾಸಣಾ ಕೇಂದ್ರದಲ್ಲಿ ಮೆಟಲ್ ಡಿಟೆಕ್ಟರ್ ಮೂಲಕ ತಪಾಸಣೆ ಮಾಡಲಾಗುತ್ತಿದೆ.
ದೇವಾಲಯದ ಆವರಣ ಹಾಗೂ ಸುತ್ತಮುತ್ತಲಿನ ಸ್ಥಳಗಳ ಮೇಲೂ ನಿಗಾ ಇಡಲಾಗಿದೆ. ಗುಪ್ತಚರ ಸಂಸ್ಥೆಗಳ ಎಚ್ಚರಿಕೆಯಿಂದಾಗಿ ಭದ್ರತಾ ಉಪಕರಣಗಳನ್ನು ಹೆಚ್ಚುವರಿಯಾಗಿ ಬಳಸಲಾಗುತ್ತಿದೆ.
ಅಲಿಪಿರಿ ಮೆಟ್ಟಿಲು, ಶ್ರೀವಾರಿ ಮೆಟ್ಟಿಲು ಹಾಗೂ ಪಾದಾಚಾರಿ ಮಾರ್ಗಗಳಲ್ಲಿ ಸಂಚರಿಸುವ ಭಕ್ತರನ್ನು ತಪಾಸಣೆ ಮಾಡಲಾಗುತ್ತಿದೆ. ಯಾವುದೇ ಅನಾಹುತ ಸಂಭವಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.