ಉತ್ತರ ಪ್ರದೇಶದಲ್ಲಿ 350ಕ್ಕೂ ಹೆಚ್ಚು ಅನಧಿಕೃತ ಧಾರ್ಮಿಕ ಸ್ಥಳಗಳ ಮೇಲೆ ಕ್ರಮ

ಪಿಲಿಭೀತ್, ಶ್ರಾವಸ್ತಿ, ಬಲರಾಂಪುರ, ಬಹ್ರೈಚ್, ಸಿದ್ಧಾರ್ಥನಗರ ಮತ್ತು ಮಹಾರಾಜಗಂಜ್, ಲಖೀಮ್‌ಪುರ ಖೇರಿ ಸೇರಿದಂತೆ ವಿವಿಧ ಜಿಲ್ಲೆಗಳ ಆಡಳಿತವು ಈ ಕಾರ್ಯಾಚರಣೆಯನ್ನು ಕೈಗೊಂಡಿದೆ.;

Update: 2025-05-12 05:06 GMT

ಉತ್ತರ ಪ್ರದೇಶ ಸರ್ಕಾರವು ರಾಜ್ಯಾದ್ಯಂತ 350ಕ್ಕೂ ಹೆಚ್ಚು ಅನಧಿಕೃತ ಧಾರ್ಮಿಕ ಸ್ಥಳಗಳನ್ನು ಗುರುತಿಸಿ, ಅವುಗಳನ್ನು ಸೀಲ್ ಮಾಡುವ ಅಥವಾ ಒಡೆದು ಹಾಕುವ ವ್ಯಾಪಕ ಕಾರ್ಯಾಚರಣೆಯನ್ನು ಇತ್ತೀಚಿನ ದಿನಗಳಲ್ಲಿ ನಡೆಸಿದೆ ಎಂದು ಭಾನುವಾರ ಉತ್ತರ ಪ್ರದೇಶ ಸರ್ಕಾರ ಮಾಹಿತಿ ನೀಡಿದೆ.  ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿರ್ದೇಶನದಂತೆ ಈ ಕಾರ್ಯಾಚರಣೆ ಮಾಡಲಾಗಿದೆ ಎಂದು ಹೇಳಲಾಗಿದೆ.

ಪಿಲಿಭೀತ್, ಶ್ರಾವಸ್ತಿ, ಬಲರಾಂಪುರ, ಬಹ್ರೈಚ್, ಸಿದ್ಧಾರ್ಥನಗರ ಮತ್ತು ಮಹಾರಾಜಗಂಜ್, ಲಖೀಮ್‌ಪುರ ಖೇರಿ ಸೇರಿದಂತೆ ವಿವಿಧ ಜಿಲ್ಲೆಗಳ ಆಡಳಿತವು ಈ ಕಾರ್ಯಾಚರಣೆಯನ್ನು ಕೈಗೊಂಡಿದೆ. ಗುರುತಿಸಲಾದ ಅನಧಿಕೃತ ಕಟ್ಟಡಗಳಲ್ಲಿ ಮದರಸಾಗಳು, ಮಸೀದಿಗಳು, ಮಜಾರ್‌ಗಳು ಮತ್ತು ಈದ್ಗಾಹ್‌ಗಳು ಸೇರಿವೆ. ಮುಖ್ಯಮಂತ್ರಿ ಆದಿತ್ಯನಾಥ್ ಅವರು ಮಾನ್ಯತೆ ಪಡೆಯದ ಧಾರ್ಮಿಕ ಸಂಸ್ಥೆಗಳನ್ನು ನಡೆಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಮೇ 10 ಮತ್ತು 11ರಂದು ಶ್ರಾವಸ್ತಿ ಜಿಲ್ಲೆಯಲ್ಲಿ ಸಾರ್ವಜನಿಕ ಮತ್ತು ಖಾಸಗಿ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ 104 ಮದರಸಾಗಳು, ಒಂದು ಮಸೀದಿ, ಐದು ಮಜಾರ್‌ಗಳು ಮತ್ತು ಎರಡು ಈದ್ಗಾಹ್‌ಗಳನ್ನು ಗುರುತಿಸಿ ಸೀಲ್ ಮಾಡಲಾಗಿದೆ. ಸಾರ್ವಜನಿಕ ಭೂಮಿಯಲ್ಲಿದ್ದ ಒಂದು ಮದರಸಾವನ್ನು ಧ್ವಂಸಗೊಳಿಸಲಾಗಿದೆ. ಬಹ್ರೈಚ್‌ನಲ್ಲಿ 13 ಮದರಸಾಗಳು, ಎಂಟು ಮಸೀದಿಗಳು, ಎರಡು ಮಜಾರ್‌ಗಳು ಮತ್ತು ಒಂದು ಈದ್ಗಾಹ್ ಸೇರಿದಂತೆ 11 ಅಕ್ರಮ ನಿರ್ಮಾಣಗಳನ್ನು ನೋಟಿಸ್ ನಂತರ ಧ್ವಂಸಗೊಳಿಸಲಾಗಿದೆ.

ಸಿದ್ಧಾರ್ಥನಗರದಲ್ಲಿ 23 ಅಕ್ರಮ ಕಟ್ಟಡಗಳ ಮೇಲೆ ಕ್ರಮ ಕೈಗೊಳ್ಳಲಾಗಿದ್ದು, ಇದರಲ್ಲಿ ಮಸೀದಿಗಳು ಮತ್ತು ಮದರಸಾಗಳು ಸೇರಿವೆ. ಮಹಾರಾಜಗಂಜ್ ಜಿಲ್ಲೆಯಲ್ಲಿ ಸಾರ್ವಜನಿಕ ಮತ್ತು ಖಾಸಗಿ ಭೂಮಿಯಲ್ಲಿ ಅತಿಕ್ರಮಣದ ಮೂಲಕ ನಿರ್ಮಿಸಲಾಗಿದ್ದ 29 ಮದರಸಾಗಳು ಮತ್ತು ಐದು ಮಜಾರ್‌ಗಳನ್ನು ಧ್ವಂಸಗೊಳಿಸಲಾಗಿದೆ. ಲಖೀಮ್‌ಪುರ ಖೇರಿಯಲ್ಲಿ ಒಟ್ಟು 13 ಅಕ್ರಮ ಕಟ್ಟಡಗಳನ್ನು ಗುರುತಿಸಿ, ಒಂಬತ್ತನ್ನು ಸೀಲ್ ಮಾಡಲಾಗಿದೆ ಮತ್ತು ಮೂರನ್ನು ಧ್ವಂಸಗೊಳಿಸಲಾಗಿದೆ.

ಪಿಲಿಭೀತ್ ಜಿಲ್ಲೆಯಲ್ಲಿ ಸಾರ್ವಜನಿಕ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಲಾದ ಒಂದು ಮಸೀದಿಗೆ ಸಂಬಂಧಿಸಿದಂತೆ ನೋಟಿಸ್ ನೀಡಲಾಗಿದ್ದು, 15 ದಿನಗಳ ಒಳಗೆ ಪ್ರತಿಕ್ರಿಯೆ ನೀಡದಿದ್ದರೆ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಬಲರಾಂಪುರದಲ್ಲಿ ಭಾನುವಾರ ಸಾರ್ವಜನಿಕ ಭೂಮಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಒಂದು ಮದರಸಾವನ್ನು ಧ್ವಂಸಗೊಳಿಸಲಾಗಿದ್ದು, ಇಲ್ಲಿಯವರೆಗೆ ಜಿಲ್ಲೆಯಲ್ಲಿ 30 ಮದರಸಾಗಳು, 10 ಮಜಾರ್‌ಗಳು ಮತ್ತು ಒಂದು ಈದ್ಗಾಹ್ ಅನ್ನು ಧ್ವಂಸಗೊಳಿಸಲಾಗಿದೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಭೂಮಿಯ ರಕ್ಷಣೆಯನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಈ ಕಾರ್ಯಾಚರಣೆ ಮುಂದುವರಿದಿದೆ. ಯಾವುದೇ ಧಾರ್ಮಿಕ ಸಂಸ್ಥೆಗಳು ಅಕ್ರಮವಾಗಿ ನಿರ್ಮಿಸಿದ್ದರೆ ಅಥವಾ ಮಾನ್ಯತೆ ಪಡೆಯದಿದ್ದರೆ ಅವುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಪುನರುಚ್ಚರಿಸಿದೆ.

Tags:    

Similar News