ಕೋವ್ಯಾಕ್ಸಿನ್ ತೆಗೆದುಕೊಂಡ ಶೇ.30 ಮಂದಿಗೆ ಒಂದು ವರ್ಷದೊಳಗೆ ಆರೋಗ್ಯ ಸಮಸ್ಯೆ: ಅಧ್ಯಯನ
ಮೊದಲ ಎರಡು ತಿಂಗಳು ಪ್ರತಿ 15 ದಿನಕ್ಕೊಮ್ಮೆ ಸರಿಯಾದ ವಿಶ್ಲೇಷಣೆಯೊಂದಿಗೆ ಕೋವ್ಯಾಕ್ಸಿನ್‌ನ ಸುರಕ್ಷತಾ ದತ್ತಾಂಶವನ್ನು ಸಲ್ಲಿಸಲು ಭಾರತ್ ಬಯೋಟೆಕ್ ಗೆ ಕೇಳಲಾಗಿದೆ;
ಹೊಸದಿಲ್ಲಿ, ಮೇ 16- ಭಾರತ್ ಬಯೋಟೆಕ್‌ನ ಕೋವಿಡ್ ಲಸಿಕೆ ಪಡೆದ ಸುಮಾರು ಮೂರನೇ ಒಂದು ಭಾಗದಷ್ಟು ಜನರು 'ವಿಶೇಷಾಸಕ್ತಿಯ ಪ್ರತಿಕೂಲ ಘಟನೆʼ(ಎಇಎಸ್‌ಐ) ವರದಿ ಮಾಡಿದ್ದಾರೆ ಎಂದು ಬನಾರಸ್ ಹಿಂದು ವಿಶ್ವವಿದ್ಯಾನಿಲಯದ ಅಧ್ಯಯನ ಹೇಳಿದೆ.
ತಂಡ ನಡೆಸಿದ ಒಂದು ವರ್ಷ ಅವಧಿಯ ಅನುಸರಣಾ ಅಧ್ಯಯನದ ಪ್ರಕಾರ, ಅಧ್ಯಯನದಲ್ಲಿ ಭಾಗವಹಿಸಿದ 926 ರಲ್ಲಿ ಸುಮಾರು ಶೇ.50 ರಷ್ಟು ಮಂದಿ ಶ್ವಾಸಕೋಶದ ಮೇಲ್ಭಾಗದ ವೈರಲ್ ಸೋಂಕಿನ ಬಗ್ಗೆ ದೂರು ನೀಡಿದ್ದಾರೆ. ಗಂಭೀರ ಎಇಎಸ್‌ಐ ನಲ್ಲಿ ಪಾರ್ಶ್ವವಾಯು ಮತ್ತು ಗ್ವಿಲೆನ್ ಬಾರ್ ಸಿಂಡ್ರೋಮ್ ಶೇ.1ರಷ್ಟು ಜನರಲ್ಲಿ ವರದಿಯಾಗಿದೆ. ಈ ಅಧ್ಯಯನವು ಹದಿಹರೆಯದವರು ಮತ್ತು ವಯಸ್ಕರಲ್ಲಿ ಬಿಬಿವಿ152 ಲಸಿಕೆಯ ದೀರ್ಘಾವಧಿ ಸುರಕ್ಷತೆ ಬಗ್ಗೆ ಪರಿಶೀಲಿಸಿದೆ.
ಅಧ್ಯಯನವು ಸ್ಪ್ರಿಂಗರ್ ನೇಚರ್ ಜರ್ನಲ್ ನಲ್ಲಿ ಪ್ರಕಟವಾಗಿದೆ. ಇಂಗ್ಲೆಂಡಿನ ಔಷಧ ಸಂಸ್ಥೆ ಅಸ್ಟ್ರಾಜೆನೆಕಾ ತನ್ನ ಕೋವಿಡ್ ಲಸಿಕೆಯು ರಕ್ತ ಹೆಪ್ಪುಗಟ್ಟುವಿಕೆ ಮತ್ತು ಪ್ಲೇಟ್‌ಲೆಟ್ ಸಂಖ್ಯೆಯನ್ನು ಕಡಿಮೆ ಮಾಡುವ ಅಪರೂಪದ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು ಎಂದು ನ್ಯಾಯಾಲಯದಲ್ಲಿ ಒಪ್ಪಿಕೊಂಡ ಬಳಿಕ ಈ ವರದಿ ಬಂದಿದೆ.
ʻಮೂರನೇ ಒಂದು ಭಾಗದಷ್ಟು ವ್ಯಕ್ತಿಗಳಲ್ಲಿ ಎಇಎಸ್‌ಐ ಕಂಡುಬಂದಿದೆ. ಚರ್ಮ ಮತ್ತು ಚರ್ಮದಡಿಯ ಅಸ್ವಸ್ಥತೆ, ಸಾಮಾನ್ಯ ಅಸ್ವಸ್ಥತೆಗಳು ಮತ್ತು ನರಮಂಡಲದ ಅಸ್ವಸ್ಥತೆ ಪತ್ತೆಯಾಗಿದೆʼ ಎಂದು ಜನವರಿ 2022 ರಿಂದ ಆಗಸ್ಟ್ 2023 ವರೆಗೆ ನಡೆಸಿದ ಅಧ್ಯಯನ ಹೇಳಿದೆ.
ಬಿಬಿವಿ152 ಲಸಿಕೆ ಪಡೆದ 635 ಹದಿಹರೆಯದವರು ಮತ್ತು 291 ವಯಸ್ಕರನ್ನು1 ವರ್ಷದ ಬಳಿಕ ದೂರವಾಣಿ ಮೂಲಕ ಸಂದರ್ಶಿಸಲಾಗಿದೆ. ಹದಿಹರೆಯದವರಲ್ಲಿ ಚರ್ಮ ಮತ್ತು ಚರ್ಮದಡಿಯ ಅಸ್ವಸ್ಥತೆ ಶೇ. 10.5, ಸಾಮಾನ್ಯ ಅಸ್ವಸ್ಥತೆ ಶೇ. 10.2 ಮತ್ತು ನರಮಂಡಲದ ಅಸ್ವಸ್ಥತೆ ಶೇ. 4.7 ಕಂಡುಬಂದಿದೆ. ವಯಸ್ಕರಲ್ಲಿ ಸಾಮಾನ್ಯ ಅಸ್ವಸ್ಥತೆ (ಶೇ.8.9), ಸ್ನಾಯು-ಮೂಳೆ ಸಂಬಂಧಿತ ಅಸ್ವಸ್ಥತೆ (ಶೇ.5.8) ಮತ್ತು ನರಮಂಡಲದ ಅಸ್ವಸ್ಥತೆ (ಶೇ.5.5) ಪತ್ತೆಯಾಗಿದೆ. ಅಧ್ಯಯನದಲ್ಲಿ ಪಾಲ್ಗೊಂಡ ಶೇ. 4.6 ರಷ್ಟು ಮಹಿಳೆಯರಲ್ಲಿ ಋತುಚಕ್ರದ ಅಸಹಜತೆ ಕಂಡುಬಂದಿದೆ. ಶೇ.2.7 ಮಂದಿಯಲ್ಲಿ ಕಣ್ಣಿನ ದೋಷ ಮತ್ತು ಶೇ.0.6 ಮಂದಿಯಲ್ಲಿ ಹೈಪೋಥೈರಾಯ್ಡಿಸಂ ಗಮನಿಸಲಾಗಿದೆ. ವಯಸ್ಕರಲ್ಲಿ ನಾಲ್ಕು ಸಾವು (ಮೂವರು ಮಹಿಳೆಯರು ಮತ್ತು ಒಬ್ಬರು ಪುರುಷ) ವರದಿಯಾಗಿದೆ. ನಾಲ್ವರಿಗೂ ಮಧುಮೇಹ ಮತ್ತು ಮೂವರಿಗೆ ಅಧಿಕ ರಕ್ತದೊತ್ತಡವಿತ್ತು ಎಂದು ಅಧ್ಯಯನ ಹೇಳಿದೆ.
ಎರಡು ಸಾವಿಗೆ ಪಾರ್ಶ್ವವಾಯು ಕಾರಣ. ಮಿದುಳಿನ ಸಮಸ್ಯೆಯಿಂದ ಒಬ್ಬರು, ಪ್ರಜ್ಞಾಹೀನತೆಯಿಂದ ಮಹಿಳೆ ಮೃತಪಟ್ಟಿದ್ದಾರೆ. ನಾಲ್ಕನೇ ಸಾವಿಗೆ ಕಾರಣ ಗೊತ್ತಾಗಿಲ್ಲ.ಗಂಭೀರವಾದ ಎಇಎಸ್‌ಐಗಳು ಸಾಮಾನ್ಯವಾಗಿರದೆ ಇರಬಹುದು. ಕೋವಿಡ್ ಲಸಿಕೆ ನಂತರದ ವಿದ್ಯಮಾನಗಳನ್ನು ಅರ್ಥಮಾಡಿಕೊಳ್ಳಲು ವಿಸ್ತೃತ ಅಧ್ಯಯನ ಅಗತ್ಯವಿದೆ. ಬಿಬಿವಿ 152 ಮೂರು ಡೋಸ್ ತೆಗೆದುಕೊಂಡ ವಯಸ್ಕರು ಮತ್ತು ಒಂದು ಡೋಸ್ ತೆಗೆದುಕೊಂಡವರು, 2 ಡೋಸ್ ಲಸಿಕೆ ತೆಗೆದುಕೊಂಡವರಿಗೆ ಹೋಲಿಸಿದರೆ ಕ್ರಮವಾಗಿ ನಾಲ್ಕು ಮತ್ತು ಎರಡು ಪಟ್ಟು ಹೆಚ್ಚು ಅಪಾಯ ಎದುರಿಸುತ್ತಾರೆ ಎಂದು ಅಧ್ಯಯನ ಹೇಳಿದೆ.