ವಿಶ್ವದ ಪ್ರತಿ 4 ಮಧುಮೇಹಿಗಳಲ್ಲಿ ಒಬ್ಬ ಭಾರತೀಯ; ಅಧ್ಯಯನ ವರದಿ
82.8 ಕೋಟಿಯ ಅಂಕಿ ಅಂಶವು 1990ರಲ್ಲಿದ್ದ ಸಂಖ್ಯೆಗಿಂತ ನಾಲ್ಕು ಪಟ್ಟು ಹೆಚ್ಚಳಗೊಂಡಿದೆ. ಅದರಲ್ಲೂ ಕಡಿಮೆ ಮತ್ತು ಮಧ್ಯಮ ಆದಾಯ ಹೊಂದಿರುವ ದೇಶಗಳಲ್ಲಿ (ಎಲ್ಎಂಐಸಿ) ಇದರ ಪ್ರಮಾಣ ಗರಿಷ್ಠವಾಗಿದೆ.;
2022ರಲ್ಲಿ ವಿಶ್ವದಾದ್ಯಂತ 82.8 ಕೋಟಿ ಜನರು ಮಧುಮೇಹದಿಂದ ಬಳಲುತ್ತಿದ್ದರು ಎಂದು ಅಧ್ಯಯನ ವರದಿಯೊಂದು ಹೇಳಿದೆ. ಆತಂಕಕಾರಿ ಸಂಗತಿ ಏನೆಂದರೆ ಇದರಲ್ಲಿ ಕಾಲು ಭಾಗದಷ್ಟು ಜನರು ಭಾರತದವರು ಪ್ರತಿ ವರ್ಷ ನವೆಂಬರ್ 14ರಂದು ವಿಶ್ವ ಮಧುಮೇಹ ದಿನಾಚರಣೆ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ʼದಿ ಲ್ಯಾನ್ಸೆಟ್ ಜರ್ನಲ್ʼನಲ್ಲಿ ಅಧ್ಯಯನ ವರದಿಯನ್ನು ಪ್ರಕಟಿಸಿದ್ದು ಅದರಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಭಾರತೀಯರು ಮಧುಮೇಹದಿಂದ ಬಳಲುತ್ತಿರುವ ವಿಷಯ ಗೊತ್ತಾಗಿದೆ..
82.8 ಕೋಟಿಯ ಅಂಕಿ ಅಂಶವು 1990ರಲ್ಲಿದ್ದ ಸಂಖ್ಯೆಗಿಂತ ನಾಲ್ಕು ಪಟ್ಟು ಹೆಚ್ಚಳಗೊಂಡಿದೆ. ಅದರಲ್ಲೂ ಕಡಿಮೆ ಮತ್ತು ಮಧ್ಯಮ ಆದಾಯ ಹೊಂದಿರುವ ದೇಶಗಳಲ್ಲಿ (ಎಲ್ಎಂಐಸಿ) ಇದರ ಪ್ರಮಾಣ ಗರಿಷ್ಠವಿದೆ ಎಂದು ಸಾಂಕ್ರಾಮಿಕವಲ್ಲದ ರೋಗ ಅಪಾಯದ ಅಂಶಗಳ ಕುರಿತ ಸಹಯೋಗದ (NCD-RisC) ಸಂಶೋಧಕರು ತಿಳಿಸಿದ್ದಾರೆ.
1990 ಮತ್ತು 2022ರ ನಡುವೆ ಕಡಿಮೆ ಮತ್ತು ಮಧ್ಯಮ ಆದಾಯ ಪಡೆಯುವ ದೇಶಗಳಲ್ಲಿ ಮಧುಮೇಹಕ್ಕೆ ಚಿಕಿತ್ಸೆ ಪಡೆಯುವವರ ಮಟ್ಟವೂ ಕನಿಷ್ಠ ಪ್ರಮಾಣದಲ್ಲಿದೆ. ಹೀಗಾಗಿ ಅಲ್ಲಿ ರೋಗದ ಪ್ರಕರಣಗಳು ತೀವ್ರಗೊಂಡವು. ಜಾಗತಿಕವಾಗಿ 30 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ 44.5 ಕೋಟಿ ಮಂದಿ (ಶೇಕಡಾ 60) 2022ರಲ್ಲಿ ಸಮಸ್ಯೆಗೆ ಚಿಕಿತ್ಸೆ ಪಡೆದುಕೊಳ್ಳುತ್ತಿರಲಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ.
ಭಾರತದ ಸಿಂಹಪಾಲು
ಜಾಗತಿಕವಾಗಿ 82 .8 ಕೋಟಿ ಮಧುಮೇಹಿಗಳಲ್ಲಿ ಭಾರತದ ಪಾಲು ಕಾಲು ಭಾಗದಷ್ಟು (21.2 ಕೋಟಿ) ಜನರಿದ್ದಾರೆ. ಚೀನಾದಲ್ಲಿ 14.8 ಕೋಟಿ, ಅಮೆರಿಕ, ಪಾಕಿಸ್ತಾನ ಮತ್ತು ಬ್ರೆಜಿಲ್‌ನಲ್ಲಿ ಕ್ರಮವಾಗಿ 4.2 ಕೋಟಿ, 3.6 ಕೋಟಿ ಮತ್ತು 2.2 ಕೋಟಿ ಜನರು ಮಧುಮೇಹದೊಂದಿಗೆ ವಾಸಿಸುತ್ತಿದ್ದಾರೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.
ಎನ್‌ಸಿಡಿ -ಆರ್‌ಐಎಸ್ಸಿ ಜಾಗತಿಕ ನೆಟ್ವರ್ಕ್ ಆಗಿದ್ದು, ವಿಶ್ವ ಆರೋಗ್ಯ ಸಂಸ್ಥೆಯ ಸಮನ್ವಯದೊಂದಿಗೆ, 1,500 ಕ್ಕೂ ಹೆಚ್ಚು ಸಂಶೋಧಕರು ಮತ್ತು ವೈದ್ಯರು ದೇಶಗಳಾದ್ಯಂತ ಸಾಂಕ್ರಾಮಿಕವಲ್ಲದ ರೋಗದ ಅಪಾಯದ ಅಂಶಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಅವರ ಪ್ರಕಾರ 2022ರಲ್ಲಿ, ಚಿಕಿತ್ಸೆ ಪಡೆಯದ ಮಧುಮೇಹಿಗಳಲ್ಲಿ 44.5 ಕೋಟಿ ವಯಸ್ಕರಲ್ಲಿ (13.3 ಕೋಟಿ) ಸುಮಾರು ಮೂರನೇ ಒಂದು ಭಾಗದಷ್ಟು ಭಾರತೀಯರು ಎಂಬುದೂ ಆತಂಕದ ವಿಷಯ.
"ಮಧುಮೇಹ ಹೊಂದಿರುವವರು, ವಿಶೇಷವಾಗಿ ಚಿಕಿತ್ಸೆ ಪಡೆಯದ ಮಧುಮೇಹಿಗಳು ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದಾರೆ ಎಂದು ನಮ್ಮ ಸಂಶೋಧನೆಗಳು ಸೂಚಿಸುತ್ತವೆ" ಎಂದು ಕ್ಯಾಮರೂನ್ ನ ಯೌಂಡೆ 1 ವಿಶ್ವವಿದ್ಯಾಲಯದ ಲೇಖಕ ಜೀನ್ ಕ್ಲಾಡ್ ಎಂಬಾನ್ಯಾ ಅಭಿಪ್ರಾಯಪಡುತ್ತಾರೆ .
"ಚಿಕಿತ್ಸೆ ಪಡೆಯದ ಮಧುಮೇಹ ಹೊಂದಿರುವ ಹೆಚ್ಚಿನ ಜನರು ರೋಗಪತ್ತೆ ಮಾಡಿಕೊಳ್ಳುವುದಿಲ್ಲ. ಆದ್ದರಿಂದ ಮಧುಮೇಹದ ಪತ್ತೆ ಕಾರ್ಯ ಹೆಚ್ಚಿಸುದು ತುರ್ತು ಆದ್ಯತೆ" ಎಂದು ಅವರು ಹೇಳಿದ್ದಾರೆ.
ರೆಟಿನೋಪತಿ ಸಮಸ್ಯೆ
ರೋಗನಿರ್ಣಯ ಮಾಡಿಸಿಕೊಳ್ಳದ ಮಧುಮೇಹಿಗಳು ಡಯಾಬಿಟಿಕ್ ರೆಟಿನೋಪತಿಯಂತಹ ಸಮಸ್ಯೆ ಎದುರಿಸುತ್ತಾರೆ. ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ಕಣ್ಣಿನ ರೆಟಿನಾವನ್ನು ಹಾನಿಗೊಳಿಸುತ್ತದೆ. ಇದು ದೃಷ್ಟಿ ನಷ್ಟ ಮತ್ತು ಕುರುಡುತನಕ್ಕೆ ಕಾರಣವಾಗುತ್ತದೆ.
ʼಇಂಟರ್‌ನ್ಯಾಷನಲ್ ಜರ್ನಲ್ ಆಫ್ ಡಯಾಬಿಟಿಸ್ ಇನ್ ಡೆವಲಪಿಂಗ್ ಕಂಟ್ರಿಸ್‌ನಲ್ಲಿ ಪ್ರಕಟವಾದ 2022ರ ಅಧ್ಯಯನವು, ಭಾರತದಲ್ಲಿ, ಮಧುಮೇಹ ಹೊಂದಿರುವ 12.5 ಪ್ರತಿಶತದಷ್ಟು ಜನರು (30 ಲಕ್ಷ) ಡಯಾಬಿಟಿಕ್ ರೆಟಿನೋಪತಿ ಹೊಂದಿದ್ದಾರೆ ಎಂದು ಹೇಳಿದ್ದಾರೆ.
ಚೆನ್ನೈನ ಸನಕಾರ ನೇತ್ರಾಲಯ ಮತ್ತು ಸ್ಮಾರ್ಟ್ ಇಂಡಿಯಾದ 10 ಭಾರತೀಯ ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಅಧ್ಯಯನ ನಡೆಸಿದೆ. ಅದರ ಪ್ರಕಾರ 40 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಧುಮೇಹ ಹೊಂದಿರುವ 6,000ಕ್ಕೂ ಹೆಚ್ಚು ರೋಗಿಗಳು ಡಯಾಬಿಟಿಕ್ ರೆಟಿನೋಪತಿಗೆ ಒಳಗಾಗಿದ್ದಾರೆ.
"ಮಧುಮೇಹದ ಕಡಿಮೆ ಮಾಡುವ ಮತ್ತು ಮಾರಣಾಂತಿಕ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು, ಆರೋಗ್ಯಕರ ಆಹಾರ ಮತ್ತು ವ್ಯಾಯಾಮದ ಮೂಲಕ ಮಧುಮೇಹ ತಡೆಗಟ್ಟುವುದು ವಿಶ್ವದಾದ್ಯಂತ ಉತ್ತಮ ಆರೋಗ್ಯಕ್ಕೆ ಅತ್ಯಗತ್ಯ" ಎಂದು ಮದ್ರಾಸ್ ಡಯಾಬಿಟಿಸ್ ರಿಸರ್ಚ್ ಫೌಂಡೇಶನ್, ಇಂಡಿಯಾದ ಲೇಖಕ ರಂಜಿತ್ ಮೋಹನ್ ಅಂಜನಾ ಹೇಳಿದ್ದಾರೆ.
ಅನಾರೋಗ್ಯಕರ ಆಹಾರಗಳನ್ನು ನಿರ್ಬಂಧಿಸುವ ಮತ್ತು ಪೌಷ್ಟಿಕಾಂಶ ಇರುವ ಆಹಾರ ಜನರ ಕೈಗೆಟುಕುವಂತೆ ಮಾಡುವ ಮಹತ್ವಾಕಾಂಕ್ಷೆಯ ಸರ್ಕಾರಿ ನೀತಿಗಳ ಅಗತ್ಯವನ್ನು ಈ ಸಂಶೋಧನೆಗಳು ಎತ್ತಿ ತೋರಿಸಿವೆ ಎಂದು ಅವರು ಹೇಳಿದರು.
"ಆರೋಗ್ಯಕರ ಆಹಾರಗಳಿಗೆ ಸಬ್ಸಿಡಿಗಳು. ಉಚಿತ ಆರೋಗ್ಯಕರ ಆಹಾರದ ಪೂರೈಕೆ, ವ್ಯಾಯಾಮ ಮಾಡುವ ಮೂಲಕ ಆರೋಗ್ಯ ಸುಧಾರಿಸಿಕೊಳ್ಳುವುದಕ್ಕೆ ಪ್ರೇರಣೆಯ ಅವಶ್ಯಕತೆಯಿದೆ. ಸಾರ್ವಜನಿಕ ಉದ್ಯಾನವನಗಳು ಮತ್ತು ಫಿಟ್ನೆಸ್ ಕೇಂದ್ರಗಳಿಗೆ ಉಚಿತ ಪ್ರವೇಶದಂಥ ಹೊಸ ಉಪಕ್ರಮಗಳನ್ನು ಸಾಧಿಸಬೇಕಾಗಿದೆ ಎಂದುಮೋಹನ್ ಅಂಜನಾ ಹೇಳಿದರು.
"ಮಧುಮೇಹದ ಉತ್ತಮ ರೋಗನಿರ್ಣಯಕ್ಕೆ ಕೆಲಸದ ಸ್ಥಳ ಮತ್ತು ಸಾಮೂಹಿಕ ತಪಾಸಣೆ ಕಾರ್ಯಕ್ರಮಗಳನ್ನು ಆಯೋಜಿಸುವುದು ಅಗತ್ಯ. ಎಚ್ಐವಿ / ಏಡ್ಸ್ ಮತ್ತು ಟಿಬಿಯಂತಹ ರೋಗಗಳ ತಪಾಸಣೆ ಜತೆಗೆ ಮಧುಮೇಹ ತಪಾಸಣೆಯೂ ಅಗತ್ಯ ಎಂದು ಅವರು ಹೇಳಿದ್ದಾರೆ.