ಇನ್ನು ಗೋವಾಕ್ಕೆ ಹೋಗಿ ಗೋಬಿ ಮಂಚೂರಿ ಕೇಳಬೇಡಿ!

ವಾಷಿಂಗ್‌ ಪೌಡರ್‌ ನಂತಹ ರಾಸಾಯನಿಕ ವಸ್ತು ಬಳಸಿ ಗೋಬಿಯನ್ನು ಗರಿಗರಿ ಮಾಡುವುದರ ವಿರುದ್ಧ ಬಿಗಿ ಕ್ರಮ ಜರುಗಿಸಿರುವ ಗೋವಾದ ಸ್ಥಳೀಯ ಆಡಳಿತಗಳು ಆ ತಿನಿಸು ಮಾರಾಟವನ್ನೇ ನಿಷೇಧಿಸಿವೆ

Update: 2024-02-07 10:51 GMT
ಗೋಬಿ ಮಚೂರಿಯನ್ ಆಹಾರ ಮಳಿಗೆಗಳಲ್ಲಿ ಮತ್ತು ಇತರ ತಿನಿಸುಗಳಲ್ಲಿ ನಿಷೇಧಿಸಲಾಗಿದೆ.
Click the Play button to listen to article

ಗೋಬಿ ಮಂಚೂರಿ ಎಂಬುದು ದೇಶದ ಉದ್ದಗಲಕ್ಕೆ ಎಲ್ಲರ ಬಾಯಲ್ಲೂ ನೀರೂರಿಸುವ ಹೈಬ್ರಿಡ್‌ ತಿನಿಸು. ಆದರೆ, ಗೋವಾದಲ್ಲಿ ಮಾತ್ರ ಈಗ ಈ ಗೋಬಿ ಬಾಯಲ್ಲಿ ನೀರೂರಿಸುವ ಬದಲು ಆಡಳಿತದ ಕಣ್ಣು ಕೆಂಪಾಗಿಸಿದೆ! 

ಹೌದು, ಗೋಬಿ ಮಂಚೂರಿ ವಿರುದ್ಧ ಗೋವಾದ ಸ್ಥಳೀಯ ಆಡಳಿತ ಸಂಸ್ಥೆಗಳ ಅಕ್ಷರಶಃ ಸಮರ ಸಾರಿವೆ. ಗೋವನ್ನರ ಪಾಲಿಗೆ ಕಳೆದ ಎರಡು ಮೂರು ದಶಕಗಳಿಂದ ಅತ್ಯಂತ ಮೆಚ್ಚಿನ ತಿನಿಸಾಗಿದ್ದರೂ, ಅಲ್ಲಿನ ಆಡಳಿತ ಯಾಕೆ ಈ ಚೀನಾ- ಭಾರತ ಹೈಬ್ರಿಡ್‌ ತಿನಿಸಿನ ವಿರುದ್ಧ ತಿರುಗಿಬಿದ್ದಿದೆ ಎಂಬುದೇ ಈಗ ಚರ್ಚೆಯಲ್ಲಿರುವ ಸಂಗತಿ.

ಹೂ ಕೋಸನ್ನು ಡೀಪ್‌ ಫ್ರೈ ಮಾಡಿ ಅದಕ್ಕೆ ಸಾಸ್‌ ಹಾಕಿ ತಯಾರಿಸುವ ಗೋಬಿ ಮಂಚೂರಿ, ಕರ್ನಾಟಕವೂ ಸೇರಿದಂತೆ ದೇಶದ ಉದ್ದಗಲಕ್ಕೆ ಜನ ಇಷ್ಟಪಟ್ಟು ತಿನ್ನುವ ತಿನಿಸು. ಸ್ಪೈಸಿ ಮತ್ತು ಕರಂಕರಂ ರುಚಿಯಿಂದಾಗಿ ಇದು ಆಡುವ ಮಕ್ಕಳಿಂದ ಓಲಾಡುವ ಮುದುಕರವರೆಗೆ ಎಲ್ಲರ ಪ್ರಿಯ ಆಹಾರ. ಅದರಲ್ಲೂ ಕಡಲ ತಡಿಯ ಗೋವಾದಲ್ಲಿ ಕಳೆದ ಹಲವು ವರ್ಷಗಳಿಂದ ಗೋವನ್ನರ ಅಚ್ಚುಮೆಚ್ಚಿನ ಸಂಜೆಯ ತಿನಿಸು. ಹಾಗಾಗಿ ಅಲ್ಲಿನ ಜಾತ್ರೆ, ಮೇಳ, ಪ್ರದರ್ಶನ, ಶೋಗಳಲ್ಲಿ ಏನಿಲ್ಲದಿದ್ದರೂ ಗೋಬಿ ಮಂಚೂರಿ ಗಾಡಿಗಳಂತೂ ನೂರಾರು ಸಂಖ್ಯೆಯಲ್ಲಿ ನೆರೆಯುವುದು ಸಾಮಾನ್ಯ. ಕಡಲ ತಡಿಯಲ್ಲೂ ಗೋಬಿ ಅಂಗಡಿಗಳ ಸಾಲು ಸದಾ ಕಾಣುವ ನೋಟ.

ಇಂತಹ ಜನಪ್ರಿಯ ತಿನಿಸಿನ ವಿರುದ್ಧ ಗೋವಾದ ವಿವಿಧ ಪಟ್ಟಣಗಳ ನಗರಸಭೆ, ಪುರಸಭೆಗಳು ಕಳೆದ ಮೂರ್ನಾಲ್ಕು ವರ್ಷಗಳಿಂದ ನೇರ ಸಮರ ಸಾರಿವೆ. ಅಂತಹ ಸಮರದ ಮುಂದುವರಿದ ಭಾಗವಾಗಿ ಇದೀಗ ಮಪುಸಾ ನಗರಸಭೆ ತನ್ನ ವ್ಯಾಪ್ತಿಯಲ್ಲಿ ಗೋಬಿ ಮಂಚೂರಿ ಮಾರಾಟವನ್ನು ಸಂಪೂರ್ಣ ನಿಷೇಧಿಸಿ ಆದೇಶ ಹೊರಡಿಸಿದೆ! ಒಂದು ವೇಳೆ ತನ್ನ ಆದೇಶವನ್ನು ಮೀರಿ ಯಾವುದೇ ಅಂಗಡಿ-ಮಂಗಟ್ಟಿನಲ್ಲಿ ಗೋಬಿ ಮಂಚೂರಿ ಮಾರಾಟ ಮಾಡಿರುವುದು ಕಂಡುಬಂದರೆ ಅಂತಹ ಅಂಗಡಿಗಳ ಪರವಾನಗಿಯನ್ನೇ ರದ್ದು ಮಾಡುವುದಾಗಿಯೂ ನಗರಸಭೆ ಎಚ್ಚರಿಕೆ ನೀಡಿದೆ!

ಗೋಬಿ ಮಂಚೂರಿ ಮೇಲೇಕೆ ಕೆಂಗಣ್ಣು?

ಸಾಮಾನ್ಯವಾಗಿ ಗೋಬಿ ಮಂಚೂರಿಯನ್ನು ಹೂ ಕೋಸು ಹಾಕಿ ಡೀಪ್ ಫ್ರೈ ಮಾಡಿ ಮಸಾಲೆಯುಕ್ತ ಕೆಂಪು ಸಾಸ್ ಹಾಕಿ ತಯಾರಿಸಲಾಗುತ್ತದೆ. ಈ ಖಾದ್ಯವನ್ನು ಮೊದಲು ಕೋಲ್ಕತ್ತಾ ಮೂಲದ ಚೆಫ್ ನೆಲ್ಸನ್ ವಾಂಗ್ ಅವರು ಹೂ ಕೋಸಿನ ತುಂಡುಗಳನ್ನು ವಿನೆಗರ್, ಸೋಯಾ ಸಾಸ್ ಮತ್ತು ಜೋಳದಗಂಜಿ(ಕಾರ್ನ್‌ ಸ್ಟಾರ್ಚ್) ಜೊತೆಗೆ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ ಮತ್ತು ಹಸಿರು ಮೆಣಸಿನಕಾಯಿ‌ ಬೆರೆಸಿ ತಯಾರಿಸಿದ್ದರು ಎಂದು ಕೆಲವು ವರದಿಗಳು ಹೇಳುತ್ತವೆ.

ಆದರೆ ಗೋವಾದ ಸ್ಥಳೀಯ ಆಡಳಿತಗಳು ತಮ್ಮ ಊರಿನ ಬೀದಿ ಬದಿಯ ಸ್ಟಾಲ್‌ಗಳಲ್ಲಿ ಕೆಂಪಗೆ ಮಿರಿಮಿರಿ ಮಿನುಗುವ ಮತ್ತು ಪಂಚತಾರಾ ಹೋಟೆಲ್‌ಗಳ ಅಲಂಕಾರಿಕ ಮೆನುಗಳಲ್ಲಿ ಕಣ್ಸೆಳೆಯುವ ಈ ಖಾದ್ಯದ ವಿರುದ್ಧ ಯುದ್ಧ ಸಾರಿರುವುದಕ್ಕೆ ಸಕಾರಣಗಳೂ ಉಂಟು.

ಗೋಬಿ ಮಂಚೂರಿ ತಯಾರಿಸಲು ಬಳಸುವ ಅಗ್ಗದ ಸಾಸ್‌ ಮತ್ತು ಬಣ್ಣಗಳು ಮನುಷ್ಯರ ಆರೋಗ್ಯದ ಮೇಲೆ ಅಡ್ಡಪರಿಣಾಮ ಉಂಟುಮಾಡುತ್ತಿವೆ. ದೇಹಕ್ಕೆ ಅಪಾಯಕಾರಿಯಾದ ರಾಸಾಯನಿಕಗಳನ್ನು ಈ ತಿನಿಸಿಗೆ ಬೆರೆಸಲಾಗುತ್ತಿದೆ. ಅದರಲ್ಲೂ ಬಟ್ಟೆ ತೊಳೆಯಲು ಬಳಸುವ ವಾಷಿಂಗ್‌ ಪೌಡರ್‌ ಮತ್ತು ಜೋಳದ ಪುಡಿಯೊಂದಿಗೆ ಕಲಸಿ ಹೂ ಕೋಸಿನ ತುಂಡುಗಳನ್ನು ಡೀಪ್‌ ಫ್ರೈ ಮಾಡಲಾಗುತ್ತಿದೆ. ಹೆಚ್ಚು ಹೊತ್ತು ಕರಂಕರಂ ಎನ್ನುವಂತೆ ಇಡಲು ವಾಷಿಂಗ್‌ ಪೌಡರ್‌ ಬಳಸಲಾಗುತ್ತಿದೆ. ಜೊತೆಗೆ ತೀರಾ ಅಗ್ಗದ ಸಾಸ್‌ ಬಳಸುತ್ತಿರುವುದರಿಂದ ತಿನ್ನುವವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಜೊತೆಗೆ ಜಾತ್ರೆ- ಉತ್ಸವಗಳಲ್ಲಿ ಗೋಬಿ ಮಂಚೂರಿ ಮಾಡುವವರು ಶುಚಿತ್ವ ಕಾಪಾಡುತ್ತಿಲ್ಲ. ಕೊಳಚೆ ಪ್ರದೇಶದಲ್ಲಿ, ಗಲೀಜು ಪಾತ್ರೆಗಳಲ್ಲಿ, ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಿ ತಿನಿಸು ತಯಾರಿಸಿ ಮಾರುತ್ತಿರುವುದರಿಂದ ವಿಶೇಷವಾಗಿ ಮಕ್ಕಳ ಆರೋಗ್ಯದಲ್ಲಿ ಏರುಪೇರಾಗುತ್ತಿದೆ. ಹಾಗಾಗಿ ಜನರ ಆರೋಗ್ಯದ ಹಿತದೃಷ್ಟಿಯಿಂದ ಗೋಬಿ ಮಂಚೂರಿಯನ್ನುನಿಷೇಧಿಸಲಾಗಿದೆ ಎಂಬುದು ಮಪುಸಾ ನಗರಸಭೆಯ ಸಮರ್ಥನೆ.

ಇದೇ ಕಾರಣವನ್ನು ಮುಂದೊಡ್ಡಿ ಕಳೆದ ತಿಂಗಳು ಬೋಡ್ಗೇಶ್ವರ ದೇವಸ್ಥಾನದ ಉತ್ಸವದಲ್ಲಿ ಗೋಬಿ ಮಂಚೂರಿಯನ್ನು ನಿಷೇಧಿಸುವಂತೆ ಮಪುಸಾ ಕೌನ್ಸಿಲರ್ ತಾರಕ್ ಅರೋಲ್ಕರ್ ಕರೆ ನೀಡಿದ್ದರು.

ಹಾಗೆ ನೋಡಿದರೆ, ಪ್ರವಾಸಿಗರ ಸ್ವರ್ಗ ಗೋವಾದಲ್ಲಿ ಗೋಬಿ ಮಂಚೂರಿ ಬ್ಯಾನ್‌ ಆಗಿದ್ದು ಇದೇ ಮೊದಲೇನಲ್ಲ.

ಕಳೆದ ಎರಡು ವರ್ಷಗಳ ಹಿಂದೆ 2022 ರಲ್ಲಿ ವಾಸ್ಕೋ ಸಪ್ತಾಹ ಮೇಳದಲ್ಲಿ ಗೋಬಿ ಮಂಚೂರಿ ಸ್ಟಾಲ್‌ಗಳ ಮೇಲೆ ಎಫ್‌ಡಿಎ ದಾಳಿ ನಡೆಸಿ ಮಳಿಗೆಗಳನ್ನು ನಿಷೇಧಿಸುವಂತೆ ಸೂಚನೆ ನೀಡಿತ್ತು. ಆ ಸಮಯದಲ್ಲೇ ಗೋಬಿ ಮಂಚೂರಿಯನ್ನು ಮಾರಾಟ ಮಾಡುವ ಸ್ಟಾಲ್‌ಗಳನ್ನು ನಿರ್ಬಂಧಿಸಲು ಎಫ್‌ಡಿಎ ಮೊರ್ಮುಗೋವ್ ಮುನಿಸಿಫಲ್ ಕೌನ್ಸಿಲ್‌ಗೆ ತಿಳಿಸಿತ್ತು.

Tags:    

Similar News