ಬಿಹಾರದಲ್ಲಿ ಮಹಿಳೆಯರಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ.35 ಮೀಸಲಾತಿ ಘೋಷಿಸಿದ ನಿತೀಶ್ ಕುಮಾರ್

ಯುವಜನರಿಗೆ ಮತ್ತಷ್ಟು ಸೌಲಭ್ಯ ಒದಗಿಸುವ ಉದ್ದೇಶದಿಂದ, ರಾಜ್ಯ ಕ್ಯಾಬಿನೆಟ್‌ನಿಂದ ಇತ್ತೀಚೆಗೆ ಅನುಮೋದನೆಗೊಂಡ ಬಿಹಾರ ಯುವ ಆಯೋಗದ ಸ್ಥಾಪನೆಯನ್ನು ನಿತೀಶ್ ಕುಮಾರ್ ಘೋಷಿಸಿದ್ದಾರೆ.;

Update: 2025-07-08 08:43 GMT

ಬಿಹಾರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯದಲ್ಲಿ ಮಹಿಳಾ ಸಬಲೀಕರಣ ಮತ್ತು ಯುವಜನರ ಕಲ್ಯಾಣಕ್ಕೆ ಒತ್ತು ನೀಡುವ ಮಹತ್ವದ ಎರಡು ಘೋಷಣೆಗಳನ್ನು ಮಾಡಿದ್ದಾರೆ. ರಾಜ್ಯ ಸರ್ಕಾರದ ಎಲ್ಲ ವಿಭಾಗಗಳ ಉದ್ಯೋಗಗಳಲ್ಲಿ ಬಿಹಾರದ ಶಾಶ್ವತ ನಿವಾಸಿಯಾದ ಮಹಿಳೆಯರಿಗೆ ಶೇ.35 ರಷ್ಟು ಮೀಸಲಾತಿ ನೀಡುವುದಾಗಿ ಘೋಷಿಸಿದ್ದಾರೆ. ಜೊತೆಗೆ ಬಿಹಾರ ಯುವ ಆಯೋಗ ಸ್ಥಾಪನೆಗೂ ಅನುಮೋದನೆ ನೀಡಿದ್ದಾರೆ.

ಜುಲೈ 8ರಂದು ನಿತೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ರಾಜ್ಯ ಸರ್ಕಾರಿ ಸೇವೆಗಳ ಎಲ್ಲ ವಿಭಾಗಗಳು, ಹಂತಗಳು ಮತ್ತು ಪ್ರಕಾರದ ಉದ್ಯೋಗಗಳ ನೇರ ನೇಮಕಾತಿಯಲ್ಲಿ ಬಿಹಾರದ ಮೂಲ ನಿವಾಸಿಯಾದ ಮಹಿಳಾ ಅಭ್ಯರ್ಥಿಗಳಿಗೆ ಶೇ.35 ಮೀಸಲಾತಿ ನೀಡಲಾಗುವುದು ಎಂದು ನಿತೀಶ್ ಕುಮಾರ್ ಘೋಷಿಸಿದ್ದಾರೆ. ಈ ಮೂಲಕ ಮಹಿಳೆಯರು ಕಾರ್ಯಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಆಡಳಿತ ಮತ್ತು ರಾಜ್ಯ ಆಡಳಿತದಲ್ಲಿ ದೊಡ್ಡ ಪಾತ್ರ ವಹಿಸಲು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ ಎಂದು ನಿತೀಶ್ ಕುಮಾರ್ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಯುವಜನರಿಗೆ ಮತ್ತಷ್ಟು ಸೌಲಭ್ಯ ಒದಗಿಸುವ ಉದ್ದೇಶದಿಂದ, ರಾಜ್ಯ ಕ್ಯಾಬಿನೆಟ್‌ನಿಂದ ಇತ್ತೀಚೆಗೆ ಅನುಮೋದನೆಗೊಂಡ ಬಿಹಾರ ಯುವ ಆಯೋಗದ ಸ್ಥಾಪನೆಯನ್ನು ನಿತೀಶ್ ಕುಮಾರ್ ಘೋಷಿಸಿದ್ದಾರೆ. ಈ ಹೊಸ ಶಾಸನಬದ್ಧ ಸಂಸ್ಥೆಯು ಯುವಜನರ ಒಳಿತಿಗಾಗಿ ಕಾರ್ಯನಿರ್ವಹಿಸಲಿದೆ.

"ಬಿಹಾರದ ಯುವಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು, ತರಬೇತಿ ನೀಡಲು ಮತ್ತು ಅವರನ್ನು ಸಬಲರನ್ನಾಗಿಸಲು, ಬಿಹಾರ ಯುವ ಆಯೋಗವನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ಈ ನಿರ್ಧಾರಕ್ಕೆ ಕ್ಯಾಬಿನೆಟ್ ಇಂದು ಅನುಮೋದನೆ ನೀಡಿದೆ" ಎಂದು ಮುಖ್ಯಮಂತ್ರಿ ಘೋಷಿಸಿದ್ದಾರೆ.

ಬಿಹಾರ ಯುವ ಆಯೋಗವು ರಾಜ್ಯದ ಯುವಜನರ ಕಲ್ಯಾಣ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಎಲ್ಲ ವಿಷಯಗಳಿಗೆ ಸರ್ಕಾರಕ್ಕೆ ಸಲಹೆ ನೀಡುವ ಸಂಸ್ಥೆಯಾಗಿ ಕಾರ್ಯನಿರ್ವಹಿಸಲಿದೆ. ಇದು ವಿವಿಧ ಸರ್ಕಾರಿ ಇಲಾಖೆಗಳೊಂದಿಗೆ ಸಮನ್ವಯದಲ್ಲಿ ಕಾರ್ಯನಿರ್ವಹಿಸಿ ಯುವಕರಿಗೆ ಶಿಕ್ಷಣ ಮತ್ತು ಉದ್ಯೋಗಾವಕಾಶಗಳನ್ನು ವೃದ್ಧಿಸಲಿದೆ.

ಆಯೋಗವು ಒಬ್ಬ ಅಧ್ಯಕ್ಷ, ಇಬ್ಬರು ಉಪಾಧ್ಯಕ್ಷರು ಮತ್ತು ಏಳು ಸದಸ್ಯರನ್ನು ಒಳಗೊಂಡಿರುತ್ತದೆ, ಇವರೆಲ್ಲರೂ 45 ವರ್ಷದೊಳಗಿನವರಾಗಿರುತ್ತಾರೆ. ಈ ಆಯೋಗವು ರಾಜ್ಯದ ಖಾಸಗಿ ವಲಯದ ಉದ್ಯೋಗಗಳಲ್ಲಿ ಸ್ಥಳೀಯ ಯುವಕರಿಗೆ ಆದ್ಯತೆ ನೀಡುವುದರ ಜೊತೆಗೆ, ರಾಜ್ಯದಿಂದ ಹೊರಗಡೆ ಓದುತ್ತಿರುವ ಅಥವಾ ಕೆಲಸ ಮಾಡುತ್ತಿರುವ ವಿದ್ಯಾರ್ಥಿಗಳು ಮತ್ತು ಕಾರ್ಮಿಕರ ಹಿತಾಸಕ್ತಿಗಳನ್ನು ರಕ್ಷಿಸಲಿದೆ.

ಮದ್ಯಪಾನ ಮತ್ತು ಮಾದಕ ದ್ರವ್ಯ ಸೇವನೆಯಂತಹ ಸಾಮಾಜಿಕ ಸಮಸ್ಯೆಗಳನ್ನು ಎದುರಿಸಲು ಆಯೋಗವು ಕಾರ್ಯಕ್ರಮಗಳನ್ನು ರೂಪಿಸಲಿದೆ ಮತ್ತು ಈ ವಿಷಯಗಳ ಬಗ್ಗೆ ಸರ್ಕಾರಕ್ಕೆ ಶಿಫಾರಸುಗಳನ್ನು ನೀಡಲಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ರಾಜ್ಯ ಸರ್ಕಾರದ ಪ್ರಕಾರ, ಈ ಉಪಕ್ರಮವು ಬಿಹಾರದ ಯುವಜನರನ್ನು ಸ್ವಾವಲಂಬಿಗಳನ್ನಾಗಿ, ಕೌಶಲ್ಯಯುಕ್ತರನ್ನಾಗಿ ಮತ್ತು ಉದ್ಯೋಗಕ್ಕೆ ಸಿದ್ಧರನ್ನಾಗಿಸುವ ಗುರಿಯನ್ನು ಹೊಂದಿದ್ದು, ಮುಂದಿನ ಪೀಳಿಗೆಗೆ ಸುರಕ್ಷಿತ ಭವಿಷ್ಯವನ್ನು ಖಾತರಿಪಡಿಸುವ ಉದ್ದೇಶವನ್ನು ಹೊಂದಿದೆ.

Tags:    

Similar News