ಅಮೆರಿಕಕ್ಕೆ ಮಾನವ ಕಳ್ಳಸಾಗಣೆ; ಕಿಂಗ್ ಪಿನ್​ ಬಂಧಿಸಿದ ಎನ್​ಐಎ

ಪಶ್ಚಿಮ ದೆಹಲಿಯ ತಿಲಕ್ ನಗರದ ನಿವಾಸಿ ಗಗನದೀಪ್ ಸಿಂಗ್ ಬಂಧಿತ ಆರೋಪಿ. ಆತನಿಗೆ ''ಗೋಲ್ಡಿ'' ಎಂಬ ಉಪನಾಮವೂ ಇದೆ.;

Update: 2025-03-31 07:52 GMT

ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಾರಿಗೆ ತಂದ ಹೊಸ ವಲಸೆ ನೀತಿಯ ಬಳಿಕ, ಅಲ್ಲಿಂದ  ಹಲವು ಅಕ್ರಮವಾಸಿ ಭಾರತೀಯರನ್ನು ಗಡೀಪಾರು ಮಾಡಲಾಗಿತ್ತು. ಯುಎಸ್​ ವಾಯುಪಡೆಯ ವಿಮಾನದ ಮೂಲಕ ಕೈಕೋಳ ಹಾಕಿಸಿ ಭಾರತದಲ್ಲಿ ತಂದು ಬಿಡಲಾಗಿತ್ತು. ಈ ವೇಳೆ ಭಾರತದಲ್ಲಿ ದೊಡ್ಡ ಪ್ರಮಾಣದ ಮಾನವ ಕಳ್ಳಸಾಗಣೆ ಪ್ರಕರಣ ಬಯಲಿಗೆ ಬಂದಿತ್ತು. ಪ್ರಧಾನಿ ಮೋದಿ, ದುಡ್ಡು ಪಡೆದು ಅಮೆರಿಕಕ್ಕೆ ಮಾನವ ಕಳ್ಳಸಾಗಣೆ ಮಾಡುತ್ತಿರುವ ಜಾಲವನ್ನು ನಿರ್ಮೂಲನೆ ಮಾಡುವುದಾಗಿ ಭರವಸೆ ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಆರಂಭಗೊಂಡಿದ್ದು, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಭಾನುವಾರ ಒಬ್ಬನನ್ನು ಬಂಧಿಸಿದೆ. ಆತ ಅಕ್ರಮ ಮಾರ್ಗದ ಮೂಲಕ ಭಾರತೀಯರನ್ನು ಕರೆದುಕೊಂಡು ಹೋಗುತ್ತಿದ್ದ. ಅದಕ್ಕೆ 'ಡಂಕಿ' ಮಾರ್ಗ ಎಂದು ಕರೆಯಲಾಗುತ್ತದೆ. 

ಪಶ್ಚಿಮ ದೆಹಲಿಯ ತಿಲಕ್ ನಗರದ ನಿವಾಸಿ ಗಗನದೀಪ್ ಸಿಂಗ್ ಬಂಧಿತ ಆರೋಪಿ. ಆತನಿಗೆ ''ಗೋಲ್ಡಿ'' ಎಂಬ ಉಪನಾಮವೂ ಇದೆ. ಪಂಜಾಬ್‌ನ ತಾರನ್ ಜಿಲ್ಲೆಯ ಒಬ್ಬ ವ್ಯಕ್ತಿಯೊಬ್ಬರ ಅಕ್ರಮ ವಲಸೆಗಾಗಿ ಆರೋಪಿ ಗೋಲ್ಡಿ 45 ಲಕ್ಷ ರೂಪಾಯಿಗಳನ್ನು ಪಡೆದಿದ್ದ ಎಂದು ಎನ್​ಐಎ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

"ಡಂಕಿ" ಎಂಬ ಪದವು "ಕತ್ತೆಗಳ ಗಾಡಿ" ಎಂಬ ಪದದಿಂದ ಉಗಮವಾಗಿದೆ. ಸರಿಯಾದ ದಾಖಲೆಗಳಿಲ್ಲದೆ ಅಮೆರಿಕದಂಥ ಮುಂದುವರಿದ ದೇಶಗಳಿಗೆ ಪ್ರವೇಶಿಸಲು ವಲಸಿಗರು ಬಳಸುವ ಅಕ್ರಮ ಮಾರ್ಗದ ಗುರುತಾಗಿದೆ. ಅಪಾಯಕಾರಿ ಮತ್ತು ಕಷ್ಟದಾಯಕ ಪ್ರಯಾಣಕ್ಕೆ ಏರ್ಪಾಟು ಮಾಡುವುದನ್ನೇ ಹಲವರು ದುಡ್ಡು ಮಾಡುವ ಅಕ್ರಮ ಆದಾಯವನ್ನಾಗಿಸಿದ್ದಾರೆ. ಅಂಥವರ ಮೇಲೆ ಎನ್​ಐಎ ದಾಳಿ ಶುರುವಾಗಿದೆ.

ಘಟನೆಯ ವಿವರ

ಅಮೆರಿಕದಿಂದ ಗಡಿಪಾರಾಗಿರುವ ಬಲಿಪಶುವನ್ನು 2024ರ ಡಿಸೆಂಬರ್‌ನಲ್ಲಿ "ಡಂಕಿ" ಮಾರ್ಗದ ಮೂಲಕ ಅಮೆರಿಕಕ್ಕೆಆರೋಪಿ ಕಳುಹಿಸಿದ್ದ. ಅವರು ಸ್ಪೇನ್, ಎಲ್ ಸಾಲ್ವಡಾರ್, ಗ್ವಾಟೆಮಾಲ ಮತ್ತು ಮೆಕ್ಸಿಕೋ ಮೂಲಕ ಪ್ರಯಾಣಿಸಿದ್ದ. ಆದರೆ ಅಮೆರಿಕ ಗಡಿ ಪ್ರವೇಶ ಮಾಡುವಾಗ ಅಲ್ಲಿನ ಅಧಿಕಾರಿಗಳ ಕೈಗೆ ಸಿಕ್ಕಿ ಹಾಕಿಕೊಂಡಿದ್ದರು. ಅಮೆರಿಕದ ಅಧಿಕಾರಿಗಳು ಫೆಬ್ರವರಿ 15ರಂದು ಅವರನ್ನು ಭಾರತಕ್ಕೆ ಗಡೀಪಾರು ಮಾಡಿದ್ದರು.ಈ ವೇಳೆ ಅವರು ಗೋಲ್ಡಿಯ ಬಗ್ಗೆ ದೂರು ದಾಖಲಿಸಿದ್ದರು. 

ಪ್ರಕರಣವನ್ನು ಮೂಲತಃ ಪಂಜಾಬ್ ಪೊಲೀಸರು ದಾಖಲಿಸಿದ್ದರು. ನಂತರ ಮಾರ್ಚ್ 13ರಂದು ಎನ್‌ಐಎ ಅದನ್ನು ಕೈಗೆತ್ತಿಕೊಂಡಿತ್ತು. ಗೋಲ್ಡಿಯು ವಿದೇಶಕ್ಕೆ ಜನರನ್ನು ಕಳುಹಿಸಲು ಯಾವುದೇ ಪರವಾನಗಿ, ಕಾನೂನು ಅನುಮತಿ ಅಥವಾ ನೋಂದಣಿ ಹೊಂದಿರಲಿಲ್ಲ ಎಂಬುದು ಎನ್‌ಐಎ ತನಿಖೆಯಲ್ಲಿ ಗೊತ್ತಾದ ಬಳಿಕ ಇದೀಗ ಬಂಧಿಸಿದ್ದಾರೆ. 

ಲೋಕಸಭೆಯಲ್ಲಿ ಇತ್ತೀಚೆಗೆ ಮಾತನಾಡಿದ್ದ ಕೇಂದ್ರ ವಿದೇಶಾಂಗ ಸಚಿವಾಲಯದ ಸಹಾಯಕ ಸಚಿವ ಕೀರ್ತಿ ವರ್ಧನ್ ಸಿಂಗ್, 2025ರ ಜನವರಿಯಿಂದ ಇಲ್ಲಿಯವರೆಗೆ ಒಟ್ಟು 636 ಭಾರತೀಯ ನಾಗರಿಕರನ್ನು ಅಮೆರಿಕದಿಂದ ಭಾರತಕ್ಕೆ ಗಡೀಪಾರು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದರು.

Tags:    

Similar News