New Passport Rule : ಪಾಸ್​ಪೋರ್ಟ್​ ಮಾಡಿಸಲು ಹೊಸ ನಿಯಮ ಜಾರಿ; ಈ ದಾಖಲೆ ಇನ್ನು ಕಡ್ಡಾಯ

New Passport Rule : ಹೊಸ ಪಾಸ್​ಪೋರ್ಟ್​ ಮಾಡಲು ನಿಗದಿ ಮಾಡಿರುವ ಹೊಸ ನಿಯಮವನ್ನು ವಿದೇಶಾಂಗ ಸಚಿವಾಲಯವು ಫೆಬ್ರವರಿ 24, 2025 ರಂದು ಹೊರಡಿಸಿದೆ. ನಿಯಮಗಳನ್ನು ಏಕೆ ತಿದ್ದುಪಡಿ ಮಾಡಲಾಗಿದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.;

Update: 2025-03-02 07:30 GMT

ಪಾಸ್​​ಪೋರ್ಟ್ ಪಡೆಯಲು ಅರ್ಜಿ ಸಲ್ಲಿಸುವ ನಿಯಮಗಳಲ್ಲಿ ಕೇಂದ್ರ ಸರ್ಕಾರ ಬದಲಾವಣೆಯೊಂದನ್ನು ಮಾಡಿದೆ. ನೀಡಬೇಕಾಗಿರುವ ದಾಖಲೆಗಳ ವಿಚಾರದಲ್ಲಿ ಈ ಬದಲಾವಣೆ ಮಾಡಲಾಗಿದೆ. ಅದರಂತೆ 2023ರ ಅಕ್ಟೋಬರ್ 1ರಂದು ಅಥವಾ ಅದರ ನಂತರ ಜನಿಸಿದವರು ಪಾಸ್ಪೋರ್ಟ್​​ಗೆ (Passport Rules) ಅರ್ಜಿ ಸಲ್ಲಿಸುವಾಗ ಹುಟ್ಟಿದ ದಿನಾಂಕ ದೃಢಪಡಿಸಲು ಜನನ ಪ್ರಮಾಣಪತ್ರ ಕೊಡಲೇಬೇಕು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಮೂಲಕ ಪಾಸ್​ ಅಕ್ರಮಗಳಿಗೆ ಕಡಿವಾಣ ಹಾಕುವ ಉದ್ದೇಶವನ್ನು ಹೊಂದಿದೆ.

ಜನನ ಮತ್ತು ಮರಣ ನೋಂದಣಿ ಕಾಯ್ದೆ, 1969ರ ಅಡಿ ಅಧಿಕಾರ ಹೊಂದಿರುವ ಅಧಿಕೃತ ಪ್ರಾಧಿಕಾರ ನೀಡುವ ಜನನ ಪ್ರಮಾಣಪತ್ರ ಸಲ್ಲಿಸಿದರೆ ಮಾತ್ರ ಪಾಸ್​ಪೋರ್ಟ್​ ವಿತರಣೆ ಮಾಡಲಾಗುವುದ ಎಂದು ಹೊಸ ನಿಯಮದಲ್ಲಿ ಹೇಳಲಾಗಿದೆ.

ಫೆಬ್ರವರಿ 24, 2025 ರಂದು ವಿದೇಶಾಂಗ ಸಚಿವಾಲಯವು ಈ ಸುತ್ತೊಲೆ ಹೊರಡಿಸಿದ್ದು 1967ರ ಪಾಸ್ಪೋರ್ಟ್ ಕಾಯ್ದೆಯ ಸೆಕ್ಷನ್ 24 ರ ನಿಬಂಧನೆಗಳ ಪ್ರಕಾರ ರಚಿಸಲಾಗಿದ್ದ 1980ರ ಪಾಸ್​ಪೋರ್ಟ್​​ ನಿಯಮಗಳಿಗೆ ತಿದ್ದುಪಡಿ ತರಲಾಗಿದೆ ಎಂದು ಹೇಳಿದೆ.

ನಿಯಮ ಬದಲಾವಣೆಗೆ ಕಾರಣಗಳೇನು?

ಅಧಿಕಾರಿಯೊಬ್ಬರು ನೀಡಿದ ಮಾಹಿತಿಯನ್ನು ಸುದ್ದಿಸಂಸ್ಥೆ ಪಿಟಿಐ ಉಲ್ಲೇಖಿಸಿದ್ದು , ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಅನೇಕರ ಬಳಿ ಜನನ ಪ್ರಮಾಣಪತ್ರಗಳು ಇರಲಿಲ್ಲ. ಹೀಗಾಗಿ ಹುಟ್ಟಿದ ದಿನಾಂಕಕ್ಕೆ ಸಂಬಂಧಿಸಿದ ಪಾಸ್ಪೋರ್ಟ್ ನಿಯಮಗಳನ್ನು ದೀರ್ಘಕಾಲದವರೆಗೆ ತಿದ್ದುಪಡಿ ಮಾಡಲಾಗಿರಲಿಲ್ಲ. ಆದರೆ ಭವಿಷ್ಯದಲ್ಲಿ ಅಷ್ಟೊಂದು ವಿನಾಯಿತಿ ನೀಡಲು ಸಾಧ್ಯವಾಗುವುದಿಲ್ಲ.

ಇದೀಗ ಜನನ ಮತ್ತು ಮರಣ ನೋಂದಣಿ ಕಾಯ್ದೆ, 1969ರ ಕಾಯಿದೆಯನ್ನು ಕಡ್ಡಾಯವಾಗಿ ಜಾರಿಗೆ ತರಲಾಗುತ್ತಿದೆ. ಅದರ ಪ್ರಕಾರ ಜನನ ಪ್ರಮಾಣಪತ್ರ ಹುಟ್ಟಿದ ದಿನಾಂಕದ ಏಕೈಕ ಪುರಾವೆ ಎಂದು ಪರಿಗಣಿಸಲಾಗಿದೆ. ಹೀಗಾಗಿ ಪಾಸ್​ಪೋರ್ಟ್​​ಗೂ ಅದೇ ನಿಯವನ್ನು ಅನ್ವಯ ಮಾಡಲಾಗುತ್ತಿದೆ.

ಅಕ್ಟೋಬರ್ 1, 2023ಕ್ಕಿಂತ ಮೊದಲು ಜನಿಸಿದವರಿಗೆ ನಿಯಮವೇನು?

ಅಕ್ಟೋಬರ್​ 1,2023ಕ್ಕಿಂತ ಮೊದಲು ಮೊದಲು ಜನಿಸಿದ ಅರ್ಜಿದಾರರು ಹಿಂದಿನಂತೆಯೇ, ಚಾಲನಾ ಪರವಾನಗಿ ಅಥವಾ ಶಾಲೆಯ ಪ್ರಮಾಣ ಪತ್ರಗಳು ಮತ್ತು ಪರ್ಯಾಯ ದಾಖಲೆಗಳನ್ನು ನೀಡುವುದನ್ನು ಮುಂದುವರಿಸಬಹುದು. ಹೀಗಾಗಿ ಪಾಸ್​ಪೋರ್ಟ್​ ಮಾಡಿಸಲು ಅವರಿಗೆ ಬರ್ತ್​ ಸರ್ಟಿಫಿಕೇಟ್​ ಕಡ್ಡಾಯವಲ್ಲ.

ಅವರು ಜನ್ಮ ದಿನಾಂಕ ದಾಖಲು ಮಾಡಿರುವ ಮಾನ್ಯತೆ ಪಡೆದ ಶಿಕ್ಷಣ ಮಂಡಳಿಗಳ ಅಡಿಯಲ್ಲಿ ಬರುವ ಶಾಲೆಗಳು ನೀಡುವ ವರ್ಗಾವಣೆ ಪ್ರಮಾಣಪತ್ರಗಳು ಅಥವಾ ಮೆಟ್ರಿಕ್ಯುಲೇಷನ್ ಪ್ರಮಾಣಪತ್ರಗಳು.

ಆದಾಯ ತೆರಿಗೆ ಇಲಾಖೆಯಿಂದ ನೀಡಲಾದ ಪ್ಯಾನ್ ಕಾರ್ಡ್.

  • ಸಂಬಂಧಪಟ್ಟ ಸಚಿವಾಲಯ ಅಥವಾ ಇಲಾಖೆಯ ಆಡಳಿತದ ಉಸ್ತುವಾರಿ ಅಧಿಕಾರಿಯಿಂದ ದೃಢೀಕರಿಸಲ್ಪಟ್ಟ ಸರ್ಕಾರಿ ನೌಕರರ ಸೇವಾ ದಾಖಲೆ ಅಥವಾ ನಿವೃತ್ತ ಸರ್ಕಾರಿ ನೌಕರರ ವೇತನ ಪಿಂಚಣಿಯ ಪ್ರತಿ.
  • ರಾಜ್ಯ ಸಾರಿಗೆ ಇಲಾಖೆಯಿಂದ ನೀಡಲಾದ ಚಾಲನಾ ಪರವಾನಗಿ
  • ಭಾರತದ ಚುನಾವಣಾ ಆಯೋಗದಿಂದ ನೀಡಲಾದ ಚುನಾವಣಾ ಫೋಟೋ ಗುರುತಿನ ಚೀಟಿ
  • ಭಾರತೀಯ ಜೀವ ವಿಮಾ ನಿಗಮಗಳು ಅಥವಾ ಸಾರ್ವಜನಿಕ ಕಂಪನಿಗಳು ನೀಡುವ ಪಾಲಿಸಿ ಬಾಂಡ್

1980ರ ಪಾಸ್ಪೋರ್ಟ್ ನಿಯಮಗಳ ಉದ್ದೇಶವೇನು?

1980ರ ಪಾಸ್​ಪೋರ್ಟ್​​ ನಿಯಮಗಳು ಅಧಿಕೃತ ಗೆಜೆಟ್​ನಲ್ಲಿ ಪ್ರಕಟವಾದ ಡಿಸೆಂಬರ್ 11, 1980ರಿಂದ ಜಾರಿಗೆ ಬಂದಿದೆ ಈ ನಿಯಮಗಳ ಉದ್ದೇಶವು ಹೀಗಿದೆ...

  • ಪಾಸ್​​ಪೋರ್ಟ್​ ವಿತರಣೆಯ ಉದ್ದೇಶವನ್ನು ಖಚಿತಪಡಿಸಿಕೊಳ್ಳುವುದು.
  • ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ಪಾಸ್​ಪೋರ್ಟ್​ ವಿತರಣೆಗೆ ನಿರ್ಬಂಧ.
  • ದೇಶದ ಭದ್ರತೆ ಬೆದರಿಕೆಗಳನ್ನು ಒಡ್ಡುವ ಜನರು ಮುಕ್ತವಾಗಿ ಬೇರೆ ದೇಶಗಳಿಗೆ ಹೋಗದಂತೆ ಮಾಡುವುದು.
  • ವಂಚನೆ, ದುರುಪಯೋಗ ಮತ್ತು ವಂಚನೆಗಳನ್ನು ತಡೆಯುವುದು.
  • ಅಂತರರಾಷ್ಟ್ರೀಯ ಪ್ರಯಾಣ ನಿಯಮಗಳಿಗೆ ಬದ್ಧವಾಗಿರುವುದು ಮತ್ತು ಭಾರತೀಯ ನಾಗರಿಕರಿಗೆ ಸುರಕ್ಷಿತ ಪ್ರಯಾಣ ದಾಖಲೆಗಳೊಂದಿಗೆ ಸುಗಮ ಅಂತರರಾಷ್ಟ್ರೀಯ ಪ್ರಯಾಣಕ್ಕೆ ಹೋಗಲು ನೆರವಾಗುವುದು.
  • ಕಾನೂನುಬದ್ಧವಾಗಿ ವಿದೇಶಕ್ಕೆ ಪ್ರಯಾಣಿಸಲು ಭಾರತೀಯ ಪ್ರಜೆಗಳಿಗೆ ಅನುಕೂಲ ಮಾಡಿಕೊಡುವುದು.
  • ಪಾಸ್​ಪೋರ್ಟ್​​ ನವೀಕರಣ ಮತ್ತು ಮರು-ವಿತರಣೆಗೆ ರಚನಾತ್ಮಕ ವ್ಯವಸ್ಥೆ ಸೃಷ್ಟಿಸುವುದು. 
Tags:    

Similar News