NEET-UG 2024: ಶೇ.0.001 ರಷ್ಟು ನಿರ್ಲಕ್ಷ್ಯ ಕೂಡ ಸಲ್ಲದು-ಸುಪ್ರೀಂ

Update: 2024-06-18 07:28 GMT

ಈ ವರ್ಷ ನೀಟ್‌ ಪರೀಕ್ಷೆಯಲ್ಲಿನ ಅಕ್ರಮಗಳ ಬಗ್ಗೆ ಹೆಚ್ಚುತ್ತಿರುವ ಟೀಕೆಗಳ ನಡುವೆ, ವೈದ್ಯಕೀಯ ಕಾಲೇಜು ಆಕಾಂಕ್ಷಿಗಳಿಗೆ ರಾಷ್ಟ್ರವ್ಯಾಪಿ ನೀಟ್‌ ಪರೀಕ್ಷೆ ನಡೆಸುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ)ಯನ್ನು ಸುಪ್ರೀಂ ಕೋರ್ಟ್ ಎಚ್ಚರಿಸಿದೆ. ʻಯಾರಿಂದಲಾದರೂ ಶೇ.0.001ರಷ್ಟು ನಿರ್ಲಕ್ಷ್ಯವಿದ್ದರೂ, ಅದನ್ನು ಪರಿಗಣಿಸಬೇಕುʼ ಎಂದು ಜೂನ್ 18 ರಂದು ಸುಪ್ರೀಂ ಕೋರ್ಟ್ ಹೇಳಿದೆ.

ʻಪರೀಕ್ಷೆಯನ್ನು ನಡೆಸುತ್ತಿರುವ ಏಜೆನ್ಸಿಯಾಗಿ ಎನ್‌ಟಿಎ, ನ್ಯಾಯಯುತವಾಗಿ ವರ್ತಿಸಬೇಕು,ʼ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ʻತಪ್ಪು ಇದ್ದರೆ, ತಪ್ಪಾಗಿದೆ ಎಂದು ಹೇಳಿ. ಇದು ನಾವು ತೆಗೆದುಕೊಳ್ಳಲಿರುವ ಕ್ರಮ ಎಂದು ವಿವರಿಸಿ. ಇದರಿಂದ ಏಜೆನ್ಸಿಯ ಕಾರ್ಯಕ್ಷಮತೆ ಬಗ್ಗೆ ವಿಶ್ವಾಸ ಮೂಡುತ್ತದೆ,ʼ ಎಂದು ಸುಪ್ರೀಂ ಹೇಳಿದೆ. 

ನೀಟ್‌ ಪರೀಕ್ಷೆ ಬಗ್ಗೆ ಕಳವಳ: ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರಾಥಮಿಕ ಪ್ರವೇಶ ಪರೀಕ್ಷೆಯಾದ ನೀಟ್-ಯುಜಿ ಪರೀಕ್ಷೆಯು ಮೇ 5 ರಂದು ರಾಷ್ಟ್ರದಾದ್ಯಂತ 571 ನಗರಗಳ 4,750 ಕೇಂದ್ರಗಳಲ್ಲಿ ನಡೆಯಿತು. ಜೂನ್ 4 ರಂದು ಫಲಿತಾಂಶ ಪ್ರಕಟಿಸಲಾಯಿತು.

ಆನಂತರ, 1,563 ವಿದ್ಯಾರ್ಥಿಗಳಿಗೆ ನೀಡಲಾದ ಕೃಪಾಂಕಗಳ ಬಗ್ಗೆ ಪೋಷಕರು ಮತ್ತು ಶಿಕ್ಷಕರು ಕಳವಳ ವ್ಯಕ್ತಪಡಿಸಿದರು. ಬಿಹಾರದಂತಹ ರಾಜ್ಯಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷೆಯಲ್ಲಿ ಇತರ ಅಕ್ರಮ ನಡೆದ ಆರೋಪಗಳಿವೆ.

ಮುಂದಿನ ವಿಚಾರಣೆ ಜುಲೈ 8ಕ್ಕೆ: 1,563 ಅಭ್ಯರ್ಥಿಗಳಿಗೆ ನೀಡಲಾಗಿದ್ದ ಕೃಪಾಂಕ ರದ್ದುಗೊಳಿಸಲಾಗುವುದು ಎಂದು ಕಳೆದ ವಾರ ಎನ್‌ಟಿಎ, ಸುಪ್ರೀಂ ಕೋರ್ಟಿಗೆ ತಿಳಿಸಿದೆ. ಅಭ್ಯರ್ಥಿಗಳು ಜೂನ್ 23 ರಂದು ಮತ್ತೊಮ್ಮೆ ಪರೀಕ್ಷೆ ತೆಗೆದುಕೊಳ್ಳಬಹುದು ಮತ್ತು ಮರು ಪರೀಕ್ಷೆಯ ಫಲಿತಾಂಶಗಳನ್ನು ಜೂನ್ 30 ರ ಮೊದಲು ಪ್ರಕಟಿಸಲಾಗುವುದು ಎಂದು ಹೇಳಿತ್ತು.

ಪ್ರಕರಣದ ಮುಂದಿನ ವಿಚಾರಣೆ ಜುಲೈ 8 ರಂದು ನಡೆಯಲಿದೆ.

Tags:    

Similar News