ಇಂಡಿಯಾ' ಬ್ಯಾನರ್‌ನಲ್ಲಿ ತೇಜಸ್ವಿ ಮಾತ್ರ: ಮೈತ್ರಿಯಲ್ಲಿ ಬಿರುಕು? ಬಿಜೆಪಿಯಿಂದ ಟೀಕೆ

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆ ವಿಚಾರದಲ್ಲಿ 'ಇಂಡಿಯಾ' ಮೈತ್ರಿಕೂಟದ ಘಟಕ ಪಕ್ಷಗಳಾದ ಆರ್‌ಜೆಡಿ ಮತ್ತು ಕಾಂಗ್ರೆಸ್ ನಡುವೆ ಭಿನ್ನಾಭಿಪ್ರಾಯ ತಲೆದೋರಿತ್ತು.

Update: 2025-10-23 06:30 GMT

ಕಾರ್ಯಕ್ರಮದ ಬ್ಯಾನರ್‌ನಲ್ಲಿ ತೇಜಸ್ವಿ ಚಿತ್ರ ಮಾತ್ರ ಹಾಕಿರುವುದು.

Click the Play button to listen to article

ಬಿಹಾರ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ, ಸೀಟು ಹಂಚಿಕೆಯ ಗೊಂದಲದ ನಡುವೆಯೇ, ಪಾಟ್ನಾದಲ್ಲಿ ನಡೆದ 'ಮಹಾಘಟಬಂಧನ್' ಮೈತ್ರಿಕೂಟದ ಜಂಟಿ ಪತ್ರಿಕಾಗೋಷ್ಠಿಯ ಬ್ಯಾನರ್‌ನಲ್ಲಿ ಕೇವಲ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರ ಭಾವಚಿತ್ರ ಮಾತ್ರ ರಾರಾಜಿಸಿದ್ದು, ಹೊಸ ವಿವಾದಕ್ಕೆ ಕಾರಣವಾಗಿದೆ. ಈ ಬ್ಯಾನರ್‌ನಿಂದ 'ಇಂಡಿಯಾ' ಮೈತ್ರಿಕೂಟ ಇತರೆ ಪ್ರಮುಖ ನಾಯಕರಾದ ರಾಹುಲ್ ಗಾಂಧಿ, ನಿತೀಶ್ ಕುಮಾರ್ ಅವರ ಚಿತ್ರಗಳನ್ನು ಕೈಬಿಟ್ಟಿರುವುದು, ಮೈತ್ರಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದರ ಸಂಕೇತ ಎಂದು ಬಿಜೆಪಿ ಟೀಕಿಸಿದೆ.

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆ ವಿಚಾರದಲ್ಲಿ 'ಇಂಡಿಯಾ' ಮೈತ್ರಿಕೂಟದ ಘಟಕ ಪಕ್ಷಗಳಾದ ಆರ್‌ಜೆಡಿ ಮತ್ತು ಕಾಂಗ್ರೆಸ್ ನಡುವೆ ಭಿನ್ನಾಭಿಪ್ರಾಯ ತಲೆದೋರಿತ್ತು. ಈ ಗೊಂದಲವನ್ನು ಬಗೆಹರಿಸಲು, ಕಾಂಗ್ರೆಸ್ ಹಿರಿಯ ನಾಯಕ ಅಶೋಕ್ ಗೆಹ್ಲೋಟ್ ಅವರು ಬುಧವಾರ ಪಾಟ್ನಾಗೆ ಆಗಮಿಸಿ, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮತ್ತು ತೇಜಸ್ವಿ ಯಾದವ್ ಅವರೊಂದಿಗೆ ಮಾತುಕತೆ ನಡೆಸಿದ್ದರು. ಈ ಮಾತುಕತೆಯ ನಂತರ, ಎಲ್ಲವೂ ಸುಖಾಂತ್ಯ ಕಂಡಿದ್ದು, ಮೈತ್ರಿಕೂಟ ಒಗ್ಗಟ್ಟಾಗಿದೆ ಎಂದು ಘೋಷಿಸಲಾಗಿತ್ತು.

ಗುರುವಾರ ನಡೆದ ಜಂಟಿ ಪತ್ರಿಕಾಗೋಷ್ಠಿಯ ಸ್ಥಳದಲ್ಲಿ ಹಾಕಲಾಗಿದ್ದ ಬ್ಯಾನರ್‌ನಲ್ಲಿ ಕೇವಲ ತೇಜಸ್ವಿ ಯಾದವ್ ಅವರ ದೊಡ್ಡ ಭಾವಚಿತ್ರವನ್ನು ಮಾತ್ರ ಬಳಸಲಾಗಿತ್ತು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಮೈತ್ರಿಯೊಳಗಿನ ಭಿನ್ನಮತ ಮತ್ತೆ ಬೀದಿಗೆ ಬಂದಿದೆ ಎಂಬ ಚರ್ಚೆಗಳು ಆರಂಭವಾದವು.

'ಮಹಾಘಟಬಂಧನ್' ವಿಘಟನೆಯ ಘೋಷಣೆ ಎಂದ ಬಿಜೆಪಿ

ಈ ಬ್ಯಾನರ್ ವಿವಾದವನ್ನೇ ಅಸ್ತ್ರವಾಗಿಸಿಕೊಂಡಿರುವ ಬಿಜೆಪಿ, 'ಇಂಡಿಯಾ' ಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯ ಮಾಧ್ಯಮ ಉಸ್ತುವಾರಿ ಡ್ಯಾನಿಶ್ ಇಕ್ಬಾಲ್, "ಇಂಡಿಯಾ ಬಣದೊಳಗಿನ ಒಳಜಗಳ ಈಗ ಬಹಿರಂಗವಾಗಿದೆ. ಈ ಹಿಂದೆ ರಾಹುಲ್ ಗಾಂಧಿ ಅವರು ತೇಜಸ್ವಿಯನ್ನು ಮೈತ್ರಿಕೂಟದ ಮುಖವೆಂದು ಪರಿಗಣಿಸಿರಲಿಲ್ಲ. ಈಗ ತೇಜಸ್ವಿ ಅವರು ರಾಹುಲ್ ಗಾಂಧಿಯವರನ್ನೇ ಪೋಸ್ಟರ್‌ನಿಂದ ತೆಗೆದುಹಾಕಿದ್ದಾರೆ. ಈ ಪೋಸ್ಟರ್, ಮಹಾಘಟಬಂಧನ್ ವಿಘಟನೆಯ ಘೋಷಣೆಯಾಗಿದೆ," ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಗೆಹ್ಲೋಟ್ ಅವರಿಂದ ಸಮಾಧಾನದ ಮಾತು

ಬುಧವಾರ ನಡೆದ ಮಾತುಕತೆಯ ನಂತರ ಮಾತನಾಡಿದ್ದ ಅಶೋಕ್ ಗೆಹ್ಲೋಟ್, "ಕೆಲವು ಕ್ಷೇತ್ರಗಳಲ್ಲಿ 'ಸ್ನೇಹಪರ ಸ್ಪರ್ಧೆ' ಇದ್ದರೂ, ನಾವು ಎನ್‌ಡಿಎ ವಿರುದ್ಧ ಒಗ್ಗಟ್ಟಾಗಿ ಹೋರಾಡುತ್ತೇವೆ. ಪತ್ರಿಕಾಗೋಷ್ಠಿಯಲ್ಲಿ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯಲಾಗುವುದು," ಎಂದು ಹೇಳಿದ್ದರು.

Tags:    

Similar News