ಬಿಹಾರದ 'ಸಿಗ್ಮಾ ಗ್ಯಾಂಗ್​ನ ನಾಲ್ವರು ಕುಖ್ಯಾತ ರೌಡಿಗಳು ಪೊಲೀಸ್​ ಎನ್​ಕೌಂಟರ್​​ನಲ್ಲಿ ಹತ್ಯೆ

ಬುಧವಾರ ಮತ್ತು ಗುರುವಾರದ ಮಧ್ಯರಾತ್ರಿ ಸುಮಾರು 2.20ರ ಸುಮಾರಿಗೆ, ದೆಹಲಿ ಪೊಲೀಸ್‌ನ ಕ್ರೈಂ ಬ್ರಾಂಚ್ ಮತ್ತು ಬಿಹಾರ ಪೊಲೀಸರ ಜಂಟಿ ತಂಡವು ರೋಹಿಣಿ ಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆಸಿದೆ.

Update: 2025-10-23 07:16 GMT

 ಸಿಗ್ಮಾ ಗ್ಯಾಂಗ್‌ನ ಮೃತ ರೌಡಿಗಳು

Click the Play button to listen to article

ಬಿಹಾರ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ, ರಾಜ್ಯದಲ್ಲಿ ಭೀತಿ ಸೃಷ್ಟಿಸಲು ಸಂಚು ರೂಪಿಸಿದ್ದ ನಾಲ್ವರು ಕುಖ್ಯಾತ ರೌಡಿಗಳನ್ನು ದೆಹಲಿ ಮತ್ತು ಬಿಹಾರ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ದೆಹಲಿಯ ರೋಹಿಣಿ ಪ್ರದೇಶದಲ್ಲಿ ಬುಧವಾರ ತಡರಾತ್ರಿ ನಡೆದ ಈ ಭೀಕರ ಗುಂಡಿನ ಚಕಮಕಿಯಲ್ಲಿ, ಬಿಹಾರದ ಕುಖ್ಯಾತ 'ಸಿಗ್ಮಾ ಗ್ಯಾಂಗ್'ನ ನಾಯಕ ರಂಜನ್ ಪಾಠಕ್ ಸೇರಿದಂತೆ ನಾಲ್ವರು ಹತರಾಗಿದ್ದಾರೆ.

ಬುಧವಾರ ಮತ್ತು ಗುರುವಾರದ ಮಧ್ಯರಾತ್ರಿ ಸುಮಾರು 2.20ರ ಸುಮಾರಿಗೆ, ದೆಹಲಿ ಪೊಲೀಸ್‌ನ ಕ್ರೈಂ ಬ್ರಾಂಚ್ ಮತ್ತು ಬಿಹಾರ ಪೊಲೀಸರ ಜಂಟಿ ತಂಡವು ರೋಹಿಣಿ ಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆಸಿದೆ. ಖಚಿತ ಮಾಹಿತಿಯ ಮೇರೆಗೆ, ರೌಡಿಗಳಿದ್ದ ಕಾರನ್ನು ಪೊಲೀಸರು ಅಡ್ಡಗಟ್ಟಿದ್ದಾರೆ. ಈ ವೇಳೆ, ಶರಣಾಗುವಂತೆ ನೀಡಿದ ಎಚ್ಚರಿಕೆಯನ್ನು ನಿರ್ಲಕ್ಷಿಸಿದ ರೌಡಿಗಳು, ಪೊಲೀಸರ ಮೇಲೆ ಗುಂಡಿನ ದಾಳಿ ಆರಂಭಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರೂ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು.

ಹತರಾದ ರೌಡಿಗಳನ್ನು 'ಸಿಗ್ಮಾ ಗ್ಯಾಂಗ್'ನ ನಾಯಕ ರಂಜನ್ ಪಾಠಕ್ (25), ಬಿಮ್ಲೇಶ್ ಮಹ್ತೋ (25), ಮನೀಶ್ ಪಾಠಕ್ (33), ಮತ್ತು ಅಮನ್ ಠಾಕೂರ್ (21) ಎಂದು ಗುರುತಿಸಲಾಗಿದೆ.

ಯಾರಿದು 'ಸಿಗ್ಮಾ ಗ್ಯಾಂಗ್'?

ಕಳೆದ ಆರು ವರ್ಷಗಳಿಂದ ಬಿಹಾರದಲ್ಲಿ ಸಕ್ರಿಯವಾಗಿದ್ದ 'ಸಿಗ್ಮಾ ಆ್ಯಂಡ್ ಕಂಪನಿ' ಗ್ಯಾಂಗ್, ಸುಪಾರಿ ಹತ್ಯೆ ಮತ್ತು ಸುಲಿಗೆಯಂತಹ ಹೇಯ ಕೃತ್ಯಗಳಲ್ಲಿ ಭಾಗಿಯಾಗಿತ್ತು. ನೇಪಾಳದ ಗಡಿಭಾಗದಲ್ಲಿ ಅಡಗಿಕೊಂಡು ಕಾರ್ಯನಿರ್ವಹಿಸುತ್ತಿದ್ದ ಈ ಗ್ಯಾಂಗ್, ಬಿಹಾರದ ಸೀತಾಮರ್ಹಿ ಜಿಲ್ಲೆಯಲ್ಲಿ ಭೀತಿಯ ವಾತಾವರಣವನ್ನು ಸೃಷ್ಟಿಸಿತ್ತು. ಇತ್ತೀಚೆಗೆ, ಈ ಗ್ಯಾಂಗ್ ಒಂದರ ಹಿಂದೆ ಒಂದರಂತೆ ಐದು ಕೊಲೆಗಳನ್ನು ಮಾಡಿ, ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿತ್ತು. ಸುಮಾರು 20-25 ದಿನಗಳ ಹಿಂದೆ, ಬ್ರಹ್ಮರ್ಷಿ ಸಮಾಜದ ಜಿಲ್ಲಾಧ್ಯಕ್ಷ ಗಣೇಶ್ ಶರ್ಮಾ ಅವರನ್ನು ಈ ಗ್ಯಾಂಗ್ ಹತ್ಯೆ ಮಾಡಿತ್ತು.

ಚುನಾವಣಾ ಹಿಂಸಾಚಾರಕ್ಕೆ ಸಂಚು

"ಚುನಾವಣೆಗೆ ಮುನ್ನ ಬಿಹಾರದಲ್ಲಿ ಭಯೋತ್ಪಾದನೆ ಸೃಷ್ಟಿಸಲು" ಈ ಗ್ಯಾಂಗ್ ಸಂಚು ರೂಪಿಸಿರುವ ಬಗ್ಗೆ ಆಡಿಯೋ ಕ್ಲಿಪ್ ಒಂದು ಪೊಲೀಸರಿಗೆ ಲಭ್ಯವಾಗಿತ್ತು. "ಇವರು ಕಾಂಟ್ರಾಕ್ಟ್ ಕಿಲ್ಲರ್‌ಗಳಾಗಿದ್ದು, ಚುನಾವಣೆಯ ಸಮಯದಲ್ಲಿ ದೊಡ್ಡ ಅನಾಹುತವನ್ನು ನಡೆಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ," ಎಂದು ಬಿಹಾರ ಡಿಜಿಪಿ ವಿನಯ್ ಕುಮಾರ್ ತಿಳಿಸಿದ್ದಾರೆ. ಕೊಲೆಗಳನ್ನು ಮಾಡಿದ ನಂತರ, ಈ ಗ್ಯಾಂಗ್ ದೆಹಲಿಯಲ್ಲಿ ಆಶ್ರಯ ಪಡೆದಿರುವ ಬಗ್ಗೆ ಮಾಹಿತಿ ಪಡೆದ ಬಿಹಾರ ಪೊಲೀಸರು, ದೆಹಲಿ ಪೊಲೀಸರ ಸಹಕಾರದೊಂದಿಗೆ ಈ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.

ಕುಖ್ಯಾತ ರೌಡಿ ರಂಜನ್ ಪಾಠಕ್, ಕೊಲೆ ಮಾಡಿದ ನಂತರ ಮಾಧ್ಯಮಗಳಿಗೆ ತನ್ನ ಬಯೋಡೇಟಾವನ್ನು ಕಳುಹಿಸುವಷ್ಟು ಧೈರ್ಯ ತೋರಿದ್ದ. ಈ ಎನ್‌ಕೌಂಟರ್, ಬಿಹಾರದ ಸಂಘಟಿತ ಅಪರಾಧ ಜಾಲಕ್ಕೆ ಬಿದ್ದ ದೊಡ್ಡ ಹೊಡೆತವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Tags:    

Similar News