ಫ್ರೆಶರ್ಸ್ ಪಾರ್ಟಿಯಲ್ಲಿ ಜಗಳ: ವಿದ್ಯಾರ್ಥಿ ಬರ್ಬರ ಹತ್ಯೆ, ಆರು ಮಂದಿ ಅರೆಸ್ಟ್
ಅಕ್ಟೋಬರ್ 8 ರಂದು ಲಾತೂರ್‌ನ ಎಂಐಡಿಸಿ ಪ್ರದೇಶದಲ್ಲಿರುವ ಖಾಸಗಿ ಕಾಲೇಜಿನಲ್ಲಿ ಫ್ರೆಶರ್ಸ್ ಪಾರ್ಟಿ ಆಯೋಜಿಸಲಾಗಿತ್ತು. ಪಾರ್ಟಿಯಲ್ಲಿ ಡ್ಯಾನ್ಸ್ ಮಾಡುವಾಗ ಸೂರಜ್ ಶಿಂಧೆ ಮತ್ತು ಮತ್ತೊಂದು ವಿದ್ಯಾರ್ಥಿಗಳ ಗುಂಪಿನ ನಡುವೆ ಸಣ್ಣ ಜಗಳ ಆರಂಭವಾಗಿತ್ತು.
ಸಾಂದರ್ಭಿಕ ಚಿತ್ರ
ಕಾಲೇಜಿನ ಫ್ರೆಶರ್ಸ್ ಪಾರ್ಟಿಯಲ್ಲಿ (ಹೊಸದಾಗಿ ಕಾಲೇಜಿಗೆ ಸೇರಿಕೊಂಡ ವಿದ್ಯಾರ್ಥಿಗಳ ವಿನೋದ ಕೂಟ) ನಡೆದ ಒಂದು ಕ್ಷುಲ್ಲಕ ಜಗಳ, ವಿದ್ಯಾರ್ಥಿಯೊಬ್ಬನ ಬರ್ಬರ ಹತ್ಯೆಯಲ್ಲಿ ಅಂತ್ಯಗೊಂಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಲಾತೂರ್ ಜಿಲ್ಲೆಯಲ್ಲಿ ನಡೆದಿದೆ. ಡ್ಯಾನ್ಸ್ ಮಾಡುವಾಗ ಉಂಟಾದ ಸಣ್ಣ ವಿವಾದವು ತಾರಕಕ್ಕೇರಿ, ಸಹಪಾಠಿಗಳೇ ಕೋಲು ಮತ್ತು ಕೈಗಳಿಂದ ಬಡಿದು ಸೂರಜ್ ಶಿಂಧೆ ಎಂಬ ವಿದ್ಯಾರ್ಥಿಯನ್ನು ಕೊಲೆ ಮಾಡಿದ್ದಾರೆ. ಈ ಸಂಬಂಧ ಪೊಲೀಸರು ಆರು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.
ಅಕ್ಟೋಬರ್ 8 ರಂದು ಲಾತೂರ್‌ನ ಎಂಐಡಿಸಿ ಪ್ರದೇಶದಲ್ಲಿರುವ ಖಾಸಗಿ ಕಾಲೇಜಿನಲ್ಲಿ ಫ್ರೆಶರ್ಸ್ ಪಾರ್ಟಿ ಆಯೋಜಿಸಲಾಗಿತ್ತು. ಪಾರ್ಟಿಯಲ್ಲಿ ಡ್ಯಾನ್ಸ್ ಮಾಡುವಾಗ ಸೂರಜ್ ಶಿಂಧೆ ಮತ್ತು ಮತ್ತೊಂದು ವಿದ್ಯಾರ್ಥಿಗಳ ಗುಂಪಿನ ನಡುವೆ ಸಣ್ಣ ಜಗಳ ಆರಂಭವಾಗಿದೆ. ಕೆಲವೇ ಕ್ಷಣಗಳಲ್ಲಿ ಮಾತಿಗೆ ಮಾತು ಬೆಳೆದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಕೋಪಗೊಂಡ ವಿದ್ಯಾರ್ಥಿಗಳ ಗುಂಪು, ಸೂರಜ್ ಮೇಲೆ ಕೋಲು ಮತ್ತು ಕೈಗಳಿಂದ ಮನಬಂದಂತೆ ಹಲ್ಲೆ ನಡೆಸಿದೆ.
ತೀವ್ರವಾಗಿ ಗಾಯಗೊಂಡ ಸೂರಜ್‌ನನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಆತ ಕೊನೆಯುಸಿರೆಳೆದಿದ್ದಾನೆ.
ಆರು ಮಂದಿಯ ಬಂಧನ
ಘಟನೆಯ ನಂತರ, ಕಾಲೇಜಿನ ವಿದ್ಯಾರ್ಥಿಯೊಬ್ಬ ನೀಡಿದ ದೂರಿನ ಮೇರೆಗೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು. ತನಿಖೆ ಆರಂಭಿಸಿದ ಪೊಲೀಸರು, ಅಕ್ಟೋಬರ್ 16ರೊಳಗೆ ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಿದ್ದರು. ತನಿಖೆ ಮುಂದುವರೆದಂತೆ, ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳ ಪಾತ್ರವಿರುವುದು ಬೆಳಕಿಗೆ ಬಂದಿದ್ದು, ಅವರನ್ನು ಅಕ್ಟೋಬರ್ 21ರಂದು ಬಂಧಿಸಲಾಗಿದೆ. ಇದರೊಂದಿಗೆ ಬಂಧಿತರ ಸಂಖ್ಯೆ ಆರಕ್ಕೆ ಏರಿದೆ.
ಬಂಧಿತ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಅಡಿಯಲ್ಲಿ ಕೊಲೆ, ಮಾರಕಾಸ್ತ್ರಗಳಿಂದ ಹಲ್ಲೆ, ಕ್ರಿಮಿನಲ್ ಬೆದರಿಕೆ, ಮತ್ತು ಶಾಂತಿ ಭಂಗ ಉಂಟುಮಾಡುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಅವಮಾನಿಸಿದ ಆರೋಪಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ಸುರೇಶ್ ಪೊಗುಲ್ವಾರ್ ಅವರ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.