ದೀಪಾವಳಿಯ 'ಕಾರ್ಬೈಡ್ ಗನ್' ದುರಂತ: ಮಧ್ಯಪ್ರದೇಶದಲ್ಲಿ 14 ಮಕ್ಕಳಿಗೆ ಶಾಶ್ವತ ಅಂಧತ್ವ
ಪ್ಲಾಸ್ಟಿಕ್ ಅಥವಾ ತವರದ ಪೈಪ್‌ಗಳನ್ನು ಬಳಸಿ, ಅದರಲ್ಲಿ ಗನ್‌ಪೌಡರ್, ಬೆಂಕಿ ಕಡ್ಡಿಗಳ ತುದಿಯ ಮದ್ದು ಮತ್ತು ಕ್ಯಾಲ್ಸಿಯಂ ಕಾರ್ಬೈಡ್ ಎಂಬ ರಾಸಾಯನಿಕವನ್ನು ತುಂಬಿ ಈ ಗನ್‌ಗಳನ್ನು ತಯಾರಿಸಲಾಗುತ್ತದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕ
ಪ್ರತಿ ದೀಪಾವಳಿಗೂ ಒಂದೊಂದು ಹೊಸ ರೀತಿಯ ಪಟಾಕಿಗಳು ಮಾರುಕಟ್ಟೆಗೆ ಬರುತ್ತವೆ, ಆದರೆ ಈ ವರ್ಷದ ಹೊಸ ಟ್ರೆಂಡ್ ಆಗಿದ್ದ 'ಕಾರ್ಬೈಡ್ ಗನ್' ಅಥವಾ 'ದೇಸಿ ಪಟಾಕಿ ಗನ್', ಮಧ್ಯಪ್ರದೇಶದ ನೂರಾರು ಮಕ್ಕಳ ಬದುಕಿನಲ್ಲಿ ಕತ್ತಲು ತುಂಬಿದೆ. ಎನ್‌ಡಿಟಿವಿ ವರದಿ ಪ್ರಕಾರ, ಈ ಅಪಾಯಕಾರಿ ಆಟಿಕೆಯಿಂದಾಗಿ ರಾಜ್ಯದಲ್ಲಿ ಕಳೆದ ಮೂರೇ ದಿನಗಳಲ್ಲಿ 122ಕ್ಕೂ ಹೆಚ್ಚು ಮಕ್ಕಳು ಗಂಭೀರ ಕಣ್ಣಿನ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದು, ಅವರಲ್ಲಿ 14 ಮಕ್ಕಳು ತಮ್ಮ ದೃಷ್ಟಿಯನ್ನೇ ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ.
ಪೋಷಕರು ಮತ್ತು ವೈದ್ಯರಿಗೆ ದುಃಸ್ವಪ್ನವಾಗಿ ಕಾಡುತ್ತಿರುವ ಈ 'ಕಾರ್ಬೈಡ್ ಗನ್' ಹಾವಳಿಗೆ ತುತ್ತಾದವರಲ್ಲಿ ವಿದಿಶಾ ಜಿಲ್ಲೆಯವರೇ ಅಧಿಕ. ಸರ್ಕಾರ ಅಕ್ಟೋಬರ್ 18 ರಂದೇ ಈ ಗನ್‌ಗಳನ್ನು ನಿಷೇಧಿಸಿದ್ದರೂ, ವಿದಿಶಾದ ಸ್ಥಳೀಯ ಮಾರುಕಟ್ಟೆಗಳಲ್ಲಿ ಇವುಗಳನ್ನು ಕೇವಲ 150 ರಿಂದ 200 ರೂಪಾಯಿಗೆ ಆಟಿಕೆಗಳಂತೆ ಬಹಿರಂಗವಾಗಿ ಮಾರಾಟ ಮಾಡಲಾಗುತ್ತಿತ್ತು ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಪ್ಲಾಸ್ಟಿಕ್ ಅಥವಾ ತವರದ ಪೈಪ್‌ಗಳನ್ನು ಬಳಸಿ, ಅದರಲ್ಲಿ ಗನ್‌ಪೌಡರ್, ಬೆಂಕಿ ಕಡ್ಡಿಗಳ ತುದಿಯ ಮದ್ದು ಮತ್ತು ಕ್ಯಾಲ್ಸಿಯಂ ಕಾರ್ಬೈಡ್ ಎಂಬ ರಾಸಾಯನಿಕವನ್ನು ತುಂಬಿ ಈ ಗನ್‌ಗಳನ್ನು ತಯಾರಿಸಲಾಗುತ್ತದೆ. ಇದಕ್ಕೆ ನೀರು ಸೇರಿಸಿ ಬೆಂಕಿ ಹಚ್ಚಿದಾಗ, ಅದು ತೀವ್ರವಾಗಿ ಸ್ಫೋಟಗೊಂಡು, ಅದರೊಳಗಿನ ಲೋಹದ ಚೂರುಗಳು ಮತ್ತು ಉರಿಯುವ ರಾಸಾಯನಿಕ ಅನಿಲವು ನೇರವಾಗಿ ಮುಖ ಮತ್ತು ಕಣ್ಣುಗಳಿಗೆ ಬಡಿದು, ಘೋರ ಅನಾಹುತವನ್ನು ಸೃಷ್ಟಿಸುತ್ತಿದೆ.
ಹಮೀದಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 17 ವರ್ಷದ ನೇಹಾ, "ನಾವು ಮನೆಯಲ್ಲಿ ತಯಾರಿಸಿದ ಕಾರ್ಬೈಡ್ ಗನ್ ಖರೀದಿಸಿದ್ದೆವು. ಅದು ಸ್ಫೋಟಗೊಂಡಾಗ, ನನ್ನ ಒಂದು ಕಣ್ಣು ಸಂಪೂರ್ಣವಾಗಿ ಹೋಯಿತು. ಈಗ ನನಗೆ ಏನೂ ಕಾಣಿಸುತ್ತಿಲ್ಲ," ಎಂದು ಎನ್‌ಡಿಟಿವಿಗೆ ಕಣ್ಣೀರು ಹಾಕುತ್ತಾ ಹೇಳಿದ್ದಾಳೆ. ಮತ್ತೊಬ್ಬ ಬಾಲಕ ರಾಜ್ ವಿಶ್ವಕರ್ಮ, "ನಾನು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ನೋಡಿ ಮನೆಯಲ್ಲೇ ಪಟಾಕಿ ಗನ್ ಮಾಡಲು ಪ್ರಯತ್ನಿಸಿದೆ. ಅದು ನನ್ನ ಮುಖದಲ್ಲೇ ಸ್ಫೋಟಗೊಂಡು, ಈಗ ನನ್ನ ಕಣ್ಣನ್ನೇ ಕಳೆದುಕೊಂಡೆ," ಎಂದು ನೋವಿನಿಂದ ಹೇಳಿಕೊಂಡಿದ್ದಾನೆ.
"ಇದು ಆಟಿಕೆಯಲ್ಲ, ಒಂದು ಸುಧಾರಿತ ಸ್ಫೋಟಕ. ಸ್ಫೋಟದಿಂದಾಗಿ ಲೋಹದ ಚೂರುಗಳು ಮತ್ತು ಕಾರ್ಬೈಡ್ ಆವಿ ಬಿಡುಗಡೆಯಾಗಿ ಕಣ್ಣಿನ ರೆಟಿನಾವನ್ನು ಸುಡುತ್ತವೆ. ಅನೇಕ ಮಕ್ಕಳ ಕಣ್ಣಿನ ಪಾಪೆಗಳು ಒಡೆದು ಹೋಗಿ, ಶಾಶ್ವತ ಅಂಧತ್ವಕ್ಕೆ ಕಾರಣವಾಗಿದೆ," ಎಂದು ಭೋಪಾಲ್‌ನ ಹಮೀದಿಯಾ ಆಸ್ಪತ್ರೆಯ ಸಿಎಮ್‌ಎಚ್‌ಒ ಡಾ. ಮನೀಶ್ ಶರ್ಮಾ ಎನ್‌ಡಿಟಿವಿಗೆ ತಿಳಿಸಿದ್ದಾರೆ.
ಈ ಅಪಾಯಕಾರಿ ಪ್ರವೃತ್ತಿಯ ಹಿಂದೆ ಇನ್‌ಸ್ಟಾಗ್ರಾಮ್ ರೀಲ್ಸ್ ಮತ್ತು ಯೂಟ್ಯೂಬ್ ಶಾರ್ಟ್ಸ್‌ನ ದೊಡ್ಡ ಪಾತ್ರವಿದೆ. 'ಫೈರ್‌ಕ್ರ್ಯಾಕರ್ ಗನ್ ಚಾಲೆಂಜ್' ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಹದಿಹರೆಯದವರು ಈ ಗನ್‌ಗಳನ್ನು ಸಿಡಿಸುವ ವಿಡಿಯೋಗಳು ವೈರಲ್ ಆಗಿದ್ದು, ಲೈಕ್ಸ್ ಮತ್ತು ವೀವ್ಸ್‌ಗಾಗಿ ಮಕ್ಕಳು ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಿದ್ದಾರೆ ಎಂದು ವರದಿಯಾಗಿದೆ. ಈ ಭೀಕರ ಘಟನೆಯ ನಂತರ ಎಚ್ಚೆತ್ತಿರುವ ವಿದಿಶಾ ಪೊಲೀಸರು, ಈ ಸಾಧನಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರು ಜನರನ್ನು ಬಂಧಿಸಿದ್ದಾರೆ.