ಕರ್ನೂಲ್ ಬಸ್ ದುರಂತ; 16 ಸಂಚಾರ ನಿಯಮ ಉಲ್ಲಂಘನೆ; 23,000 ದಂಡ ಬಾಕಿ!

ದುರಂತಕ್ಕೆ ಕಾರಣವಾದ DD01 N9490 ನೋಂದಣಿ ಸಂಖ್ಯೆಯ ಈ ಬಸ್​​ನ ಮಾಲೀಕರು ಒಟ್ಟು 23,120 ರೂಪಾಯಿ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿದ್ದರು.

Update: 2025-10-24 06:10 GMT

ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ಭೀಕರ ಅಪಘಾತಕ್ಕೀಡಾಗಿ 20ಕ್ಕೂ ಹೆಚ್ಚು ಮಂದಿ ಸಜೀವ ದಹನವಾದ ಘಟನೆ ಹಲವು ಕುಟುಂಬಗಳಲ್ಲಿ ಕತ್ತಲೆ ಆವರಿಸುವಂತೆ ಮಾಡಿದೆ. ಆದರೆ, ಈ ದುರಂತದ ಹಿಂದಿನ ಸತ್ಯಗಳು ಇದೀಗ ಒಂದೊಂದಾಗಿ ಹೊರಬರುತ್ತಿದ್ದು, ಅಪಘಾತಕ್ಕೀಡಾದ 'ವೇಮುರಿ ಕಾವೇರಿ ಟ್ರಾವೆಲ್ಸ್' ಬಸ್ ಈ ಹಿಂದೆ ಬರೋಬ್ಬರಿ 16 ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿತ್ತು ಎಂಬ ಆಘಾತಕಾರಿ ಮಾಹಿತಿ ಲಭ್ಯವಾಗಿದೆ.

ಶುಕ್ರವಾರ ಮುಂಜಾನೆ ಕರ್ನೂಲ್ ಹೊರವಲಯದ ಚಿನ್ನಟೆಕೂರ್ ಬಳಿ, ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಈ ಭೀಕರ ದುರಂತ ಸಂಭವಿಸಿದೆ. ಹೈದರಾಬಾದ್‌ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್, ಉಲಿಂದಕೊಂಡ ಬಳಿ ಮೋಟರ್‌ಸೈಕಲ್‌ಗೆ ರಭಸದಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬಸ್‌ನಲ್ಲಿ ತಕ್ಷಣವೇ ಬೆಂಕಿ ಹೊತ್ತಿಕೊಂಡಿದ್ದು, ನಿದ್ರೆಯಲ್ಲಿದ್ದ ಹಲವು ಪ್ರಯಾಣಿಕರು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸುಟ್ಟು ಕರಕಲಾಗಿದ್ದಾರೆ.

ನಿಯಮ ಉಲ್ಲಂಘನೆಯ ಸರಮಾಲೆ

ದುರಂತಕ್ಕೆ ಕಾರಣವಾದ DD01 N9490 ನೋಂದಣಿ ಸಂಖ್ಯೆಯ ಈ ಬಸ್, ತೆಲಂಗಾಣ ರಾಜ್ಯವೊಂದರಲ್ಲೇ 16 ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿತ್ತು. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 23,120 ರೂಪಾಯಿ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿತ್ತು.

2024ರ ಜನವರಿ 27ರಿಂದ 2025ರ ಅಕ್ಟೋಬರ್ 9ರ ನಡುವೆ ಈ ಬಸ್ 16 ಬಾರಿ ನಿಯಮಗಳನ್ನು ಮುರಿದಿದೆ. ಈ ಪೈಕಿ 9 ಬಾರಿ 'ನೋ ಎಂಟ್ರಿ' ಪ್ರದೇಶಗಳಿಗೆ ಪ್ರವೇಶಿಸಿದ ಆರೋಪವಿದೆ. ಉಳಿದ ಪ್ರಕರಣಗಳು ಅತಿವೇಗ ಮತ್ತು ಅಪಾಯಕಾರಿ ಚಾಲನೆಗೆ ಸಂಬಂಧಿಸಿದ್ದಾಗಿವೆ.

ಸಾರಿಗೆ ಇಲಾಖೆ ಹೇಳುವುದೇನು?

ಈ ಘಟನೆ ಬಗ್ಗೆ ಆಂಧ್ರಪ್ರದೇಶ ಸಾರಿಗೆ ಇಲಾಖೆ ಸ್ಪಷ್ಟನೆ ನೀಡಿದೆ. ಬಸ್ ಯಾಂತ್ರಿಕವಾಗಿ ಸುಸ್ಥಿತಿಯಲ್ಲಿತ್ತು ಮತ್ತು ಮೋಟರ್‌ಸೈಕಲ್‌ಗೆ ಬಲವಾಗಿ ಡಿಕ್ಕಿ ಹೊಡೆದ ಪರಿಣಾಮವಾಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಿದೆ.

"ಬಸ್ ಅನ್ನು ಕಾವೇರಿ ಟ್ರಾವೆಲ್ಸ್ ಹೆಸರಿನಲ್ಲಿ ನಿರ್ವಹಿಸಲಾಗುತ್ತಿತ್ತು. ಇದನ್ನು ಮೂಲತಃ 2018ರ ಮೇ 2ರಂದು ದಮನ್ ಮತ್ತು ದಿಯು ನಲ್ಲಿ ನೋಂದಾಯಿಸಲಾಗಿದೆ. ವಾಹನವು 2030ರ ಏಪ್ರಿಲ್ 30ರವರೆಗೆ ಪ್ರವಾಸಿ ಪರವಾನಗಿ, 2027ರ ಮಾರ್ಚ್ 31ರವರೆಗೆ ಫಿಟ್‌ನೆಸ್ ಪ್ರಮಾಣಪತ್ರ ಮತ್ತು 2026ರ ಏಪ್ರಿಲ್ 20ರವರೆಗೆ ವಿಮೆಯನ್ನು ಹೊಂದಿತ್ತು. ಮೋಟರ್‌ಸೈಕಲ್‌ಗೆ ರಭಸವಾಗಿ ಡಿಕ್ಕಿ ಹೊಡೆದ ಕಾರಣ ಬೆಂಕಿ ಹೊತ್ತಿಕೊಂಡಿದೆ. ಈ ಬಗ್ಗೆ ಎಲ್ಲಾ ಆಯಾಮಗಳಿಂದ ಸಮಗ್ರ ತನಿಖೆ ನಡೆಯುತ್ತಿದ್ದು, ವರದಿಯ ಆಧಾರದ ಮೇಲೆ ಭವಿಷ್ಯದಲ್ಲಿ ಇಂತಹ ಅಪಘಾತಗಳನ್ನು ತಡೆಯಲು ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು," ಎಂದು ಸಾರಿಗೆ ಇಲಾಖೆ ತಿಳಿಸಿದೆ.

, ಸಾರಿಗೆ ಇಲಾಖೆಯು ಬಸ್‌ನ ದಾಖಲೆಗಳು ಸರಿಯಾಗಿವೆ ಎಂದು ಹೇಳುತ್ತಿದ್ದರೂ, ಪದೇ ಪದೇ ಸಂಚಾರ ನಿಯಮಗಳನ್ನು ಉಲ್ಲಂಘಿಸಿ, ಸಾವಿರಾರು ರೂಪಾಯಿ ದಂಡ ಬಾಕಿ ಉಳಿಸಿಕೊಂಡಿದ್ದ ಬಸ್ ಯಾವುದೇ ಅಡೆತಡೆಯಿಲ್ಲದೆ ರಾಜ್ಯದಿಂದ ರಾಜ್ಯಕ್ಕೆ ಹೇಗೆ ಸಂಚರಿಸುತ್ತಿತ್ತು ಎಂಬ ಗಂಭೀರ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ.  

Tags:    

Similar News