ಪಾದಚಾರಿ ಮಾರ್ಗದಲ್ಲಿ ಮಲಗಿದ್ದ ವ್ಯಕ್ತಿ ಮೇಲೆ ಕಾರು ಚಾಲನೆ: ಸಂಸದರ ಪುತ್ರಿಗೆ ಜಾಮೀನು
ವೈಎಸ್‌ಆರ್‌ಸಿಪಿ ರಾಜ್ಯಸಭೆ ಸದಸ್ಯ ಬೀಡಾ ಮಸ್ತಾನ್ ರಾವ್ ಅವರ ಪುತ್ರಿ ಮಾಧುರಿ ಅವರನ್ನು ಚೆನ್ನೈ ಪೊಲೀಸರು ಬಂಧಿಸಿ, ಆನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.;
ಚೆನ್ನೈನಲ್ಲಿ ಆಂಧ್ರಪ್ರದೇಶದ ರಾಜ್ಯಸಭೆ ಸದಸ್ಯರ ಪುತ್ರಿ ಸೋಮವಾರ ಸಂಜೆ (ಜೂನ್ 17) ಪಾದಚಾರಿ ಮಾರ್ಗದಲ್ಲಿ ಮಲಗಿದ್ದ ವ್ಯಕ್ತಿ ಮೇಲೆ ಬಿಎಂಡಬ್ಲ್ಯು ಕಾರು ಓಡಿಸಿ, ಆತನ ಸಾವಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಪಿಟಿಐ ವರದಿ ಪ್ರಕಾರ, ರಾಜ್ಯಸಭೆ ಸದಸ್ಯ ಬೀಡಾ ಮಸ್ತಾನ್ ರಾವ್ ಅವರ ಪುತ್ರಿ ಮಾಧುರಿ, ಬೆಸೆಂಟ್ ನಗರದ ಪಾದಚಾರಿ ಮಾರ್ಗದಲ್ಲಿ ಮಲಗಿದ್ದ 21 ವರ್ಷದ ಸೂರ್ಯ ಎಂಬ ಪೇಂಟರ್ ಮೇಲೆ ಕಾರು ಚಲಾಯಿಸಿದ್ದಾರೆ. ತೀವ್ರವಾಗಿ ಗಾಯಗೊಂಡ ಸೂರ್ಯ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಪ್ರಮುಖ ಕುಟುಂಬದ ಸದಸ್ಯರೊಬ್ಬರು ಹಿಟ್ ಅಂಡ್ ರನ್ ಮಾಡಿದ ಮತ್ತೊಂದು ಪ್ರಕರಣ ಇದಾಗಿದೆ.
ಆಂಬ್ಯುಲೆನ್ಸ್‌ಗೆ ಕರೆ: ಕಾರಿನಲ್ಲಿ ಮಾಧುರಿ ಜೊತೆಯಲ್ಲಿ ಮತ್ತೊಬ್ಬ ಮಹಿಳೆ ಇದ್ದರು. ಅಪಘಾತದ ಬಳಿಕ ಮಾಧುರಿ ಸ್ಥಳದಿಂದ ಪರಾರಿಯಾಗುತ್ತಿದ್ದಾಗ, ಆಕೆಯ ಸ್ನೇಹಿತೆ ಸ್ಥಳದಲ್ಲಿ ನೆರೆದಿದ್ದ ಜನರೊಂದಿಗೆ ವಾಗ್ವಾದ ನಡೆಸಿದ್ದಾರೆ. ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದೇವೆ ಎಂದು ಹೇಳಿದ್ದಾರೆ. ಆನಂತರ ಆಕೆಯೂ ಸ್ಥಳದಿಂದ ನಿರ್ಗಮಿಸಿದರು.
ಮೃತನ ಸಂಬಂಧಿಕರು ಮತ್ತು ಸ್ನೇಹಿತರು ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ, ಸಮೀಪದ ಪೊಲೀಸ್ ಠಾಣೆಗೆ ತೆರಳಿದರು. ಸ್ಥಳದ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು, ಕಾರು ಬೀಡಾ ಮಸ್ತಾನ್ ಗ್ರೂಪ್ (ಬಿಎಂಆರ್ ಗ್ರೂಪ್)ಗೆ ಸೇರಿದ್ದು ಎಂದು ಗುರುತಿಸಿದ್ದಾರೆ. ಪೊಲೀಸರು ಆಂಬ್ಯುಲೆನ್ಸ್‌ಗೆ ಕರೆ ಮಾಡಲು ಬಳಸಿದ ದೂರವಾಣಿ ಸಂಖ್ಯೆಯಿಂದ, ಮಾಧುರಿ ಮತ್ತು ಅವರ ಸ್ನೇಹಿತೆಯನ್ನು ಪತ್ತೆಹಚ್ಚಿದರು. ಸಂಸದರ ಪುತ್ರಿಯನ್ನು ಬಂಧಿಸಿ, ಆನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಜಾಮೀನು ನೀಡಬಹುದಾದ ಅಪರಾಧ: ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304 ಎ (ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾಗುವುದು) ಜಾಮೀನು ನೀಡಬಹುದಾದ ಅಪರಾಧವಾಗಿದ್ದು, ಅಡ್ಯಾರ್ ಸಂಚಾರ ತನಿಖೆ ವಿಭಾಗದ ಪೊಲೀಸರು ಕಾರಿನ ಮಾಲೀಕರಿಗೆ ಸಮನ್ಸ್ ಜಾರಿ ಮಾಡಿದ್ದಾರೆ.
ಬಿಎಂಆರ್ ಸಮೂಹ ಸಮುದ್ರಾಹಾರ ಕ್ಷೇತ್ರದ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿದ್ದು, ಬೀಡಾ ಮಸ್ತಾನ್ ರಾವ್ ಅವರು 2022 ರಿಂದ ವೈಎಸ್ ಆರ್ ಕಾಂಗ್ರೆಸ್ ಪಕ್ಷದಿಂದ ರಾಜ್ಯಸಭೆ ಸದಸ್ಯರಾಗಿದ್ದಾರೆ. ಅದಕ್ಕೂ ಮೊದಲು ಅವರು ಶಾಸಕರಾಗಿದ್ದರು.
ಇತ್ತೀಚೆಗೆ ಪುಣೆಯಲ್ಲಿ ನಡೆದ ಗುದ್ದೋಡು ಪ್ರಕರಣದಲ್ಲಿ ಹದಿಹರೆಯದ ಹುಡುಗನೊಬ್ಬ ಕುಡಿದು ವೇಗವಾಗಿ ಚಲಾಯಿಸಿದ ಪೋರ್ಷ್ ಕಾರು, ಇಬ್ಬರು ಯುವ ಸಾಫ್ಟ್‌ವೇರ್ ವೃತ್ತಿಪರರ ಸಾವಿಗೆ ಕಾರಣವಾಗಿತ್ತು.