ವಯನಾಡ್ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಪರ ಪ್ರಚಾರ ನಡೆಸುವುದಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಕೋಲ್ಕತ್ತಾದಲ್ಲಿ ಮಮತಾ ಬ್ಯಾನರ್ಜಿ ಮತ್ತು ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ ನಡುವಿನ 40 ನಿಮಿಷಗಳ ಸಭೆ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತೃಣಮೂಲ ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಪಶ್ಚಿಮ ಬಂಗಾಳದ 42 ಲೋಕಸಭೆ ಸ್ಥಾನಗಳ ಪೈಕಿ 29 ರಲ್ಲಿ ಪಕ್ಷವನ್ನು ಗೆಲುವಿನತ್ತ ಮುನ್ನಡೆಸಿದ ನಂತರ ಕಾಂಗ್ರೆಸ್ ನಾಯಕರು ಮತ್ತು ತೃಣಮೂಲ ಮುಖ್ಯಸ್ಥರ ನಡುವಿನ ಮೊದಲ ಸಭೆ ಇದಾಗಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಯನಾಡ್ ಕ್ಷೇತ್ರವನ್ನು ತೆರವುಗೊಳಿಸಿ, ಉತ್ತರ ಪ್ರದೇಶದ ರಾಯ್ ಬರೇಲಿಯ ಪ್ರತಿನಿಧಿಯಾಗಿ ಉಳಿಯಲು ನಿರ್ಧರಿಸಿದ ನಂತರ ಪ್ರಿಯಾಂಕಾ, ವಯನಾಡಿನಿಂದ ಸ್ಪರ್ಧಿಸಲು ಸಿದ್ಧರಾಗಿದ್ದಾರೆ.
ರಾಹುಲ್ ಗಾಂಧಿ ರಾಯ್ ಬರೇಲಿಯಲ್ಲಿ ಬಿಜೆಪಿ ಅಭ್ಯರ್ಥಿ ದಿನೇಶ್ ಪ್ರತಾಪ್ ಸಿಂಗ್ ಅವರನ್ನು 3,90,030 ಹಾಗೂ ವಯನಾಡಿನಲ್ಲಿ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿ ಅನ್ನಿ ರಾಜಾ ಅವರನ್ನು 3,64,422 ಮತಗಳಿಂದ ಸೋಲಿಸಿದರು.
ವಯನಾಡಿನಲ್ಲಿ ಪ್ರಿಯಾಂಕಾ ಅವರ ಪ್ರಮುಖ ಎದುರಾಳಿಗಳು ಎಡ ಪಕ್ಷ ಮತ್ತು ಬಿಜೆಪಿ. ಇವೆರಡೂ ಬ್ಯಾನರ್ಜಿ ಅವರಿಗೆ ಅಹಿತಕರವಾಗಿವೆ. ಪ್ರಿಯಾಂಕಾ ಪರ ಪ್ರಚಾರ ಮಾಡುವ ಬ್ಯಾನರ್ಜಿ ಅವರ ನಿರ್ಧಾರದಿಂದ ಕಾಂಗ್ರೆಸ್ ಮತ್ತು ತೃಣಮೂಲ ನಡುವಿನ ಸಂಬಂಧ ಉತ್ತಮಗೊಳ್ಳುವ ಸಾಧ್ಯತೆಯಿದೆ.
ಉತ್ತರ ಪ್ರದೇಶದ ವಾರಣಾಸಿಯಿಂದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸುವಂತೆ ಪ್ರಿಯಾಂಕಾ ಅವರನ್ನು ಬ್ಯಾನರ್ಜಿ ಕಳೆದ ಡಿಸೆಂಬರ್‌ನಲ್ಲಿ ಒತ್ತಾಯಿಸಿದ್ದರು.