ಮಾಲೆಂಗಾವ್​ ಸ್ಫೋಟ ಪ್ರಕರಣ: ಆರೋಪಿಗಳನ್ನು ಖುಲಾಸೆ ಮಾಡಲು ಕೋರ್ಟ್​ ನೀಡಿದ 10 ಕಾರಣಗಳು ಇಲ್ಲಿವೆ

ಪ್ರಕರಣದ ಏಳು ಆರೋಪಿಗಳಾದ ಪ್ರಜ್ಞಾ ಸಿಂಗ್ ಠಾಕೂರ್, ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್, ರಮೇಶ್ ಉಪಾಧ್ಯಾಯ, ಅಜಯ್ ರಹಿರ್ಕರ್, ಸುಧಾಕರ್ ದ್ವಿವೇದಿ, ಸುಧಾಕರ್ ಚತುರ್ವೇದಿ, ಮತ್ತು ಸಮೀರ್ ಕುಲಕರ್ಣಿ ಸಂಶಯದ ಲಾಭದಡಿ ಖುಲಾಸೆಗೊಂಡಿದ್ದಾರೆ.;

Update: 2025-07-31 11:18 GMT

ಸೆಪ್ಟೆಂಬರ್ 2008ರ ಮಾಲೆಂಗಾವ್​ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಮತ್ತು ಇತರ ಆರು ಮಂದಿಯನ್ನು ಮುಂಬೈನ ವಿಶೇಷ ರಾಷ್ಟ್ರೀಯ ತನಿಖಾ ದಳ (NIA) ನ್ಯಾಯಾಲಯ ಗುರುವಾರ (ಜುಲೈ 31) ಖುಲಾಸೆಗೊಳಿಸಿದೆ. ಸಾಕ್ಷ್ಯಾಧಾರಗಳಲ್ಲಿನ ಅಸಂಗತತೆಗಳು ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (UAPA) ಅಡಿಯಲ್ಲಿನ ಆರೋಪಗಳಿಗೆ ಪುರಾವೆಗಳ ಕೊರತೆಯನ್ನು ನ್ಯಾಯಾಲಯ ಎತ್ತಿ ತೋರಿಸಿದೆ. ಈ ಸ್ಫೋಟದಲ್ಲಿ ಆರು ಮಂದಿ ಸಾವನ್ನಪ್ಪಿ 101 ಜನರು ಗಾಯಗೊಂಡಿದ್ದರು.

ಪ್ರಕರಣದ ಏಳು ಆರೋಪಿಗಳಾದ ಪ್ರಜ್ಞಾ ಸಿಂಗ್ ಠಾಕೂರ್, ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಪುರೋಹಿತ್, ರಮೇಶ್ ಉಪಾಧ್ಯಾಯ, ಅಜಯ್ ರಹಿರ್ಕರ್, ಸುಧಾಕರ್ ದ್ವಿವೇದಿ, ಸುಧಾಕರ್ ಚತುರ್ವೇದಿ, ಮತ್ತು ಸಮೀರ್ ಕುಲಕರ್ಣಿ ಅವರಿಗೆ ನ್ಯಾಯಾಧೀಶರು ಸಂಶಯದ ಲಾಭವನ್ನು ನೀಡಿದ್ದಾರೆ. ಪ್ರಾಸಿಕ್ಯೂಷನ್ ಮತ್ತು ತನಿಖೆಯಲ್ಲಿನ ಹಲವಾರು ಲೋಪಗಳನ್ನು ನ್ಯಾಯಾಲಯ ಎತ್ತಿ ತೋರಿಸಿದೆ.

ತೀರ್ಪಿನ 10 ಪ್ರಮುಖಾಂಶಗಳು:

1. ವಿಶೇಷ ನ್ಯಾಯಾಧೀಶ ಎ.ಕೆ. ಲಹೋಟಿ ಅವರು, ಪ್ರಾಸಿಕ್ಯೂಷನ್ ಯಾವುದೇ ಸ್ಪಷ್ಟ ಸಾಕ್ಷ್ಯವನ್ನು ಒದಗಿಸಲು ವಿಫಲವಾಗಿದೆ ಮತ್ತು ಸಾಕ್ಷ್ಯಗಳು ಅಸಂಗತತೆಗಳಿಂದ ಕೂಡಿವೆ ಎಂದು ಹೇಳಿದ್ದಾರೆ.

2. ಈ ಪ್ರಕರಣಕ್ಕೆ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (UAPA) ಅನ್ವಯವಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

3. ಸ್ಫೋಟಕ್ಕೆ ಬಳಸಲಾದ ಮೋಟಾರ್‌ಬೈಕ್ ಠಾಕೂರ್ ಹೆಸರಿನಲ್ಲಿ ನೋಂದಣಿಯಾಗಿತ್ತು ಎಂಬುದನ್ನು ಪ್ರಾಸಿಕ್ಯೂಷನ್ ಸಾಬೀತುಪಡಿಸಲು ವಿಫಲವಾಗಿದೆ. ಬೈಕ್‌ನಲ್ಲಿ ಇರಿಸಲಾಗಿದ್ದ ಬಾಂಬ್‌ನಿಂದಲೇ ಸ್ಫೋಟ ನಡೆದಿದೆ ಎಂಬುದನ್ನೂ ಸಾಬೀತುಪಡಿಸಲಾಗಿಲ್ಲ.

4. ಗಾಯಗೊಂಡವರ ಸಂಖ್ಯೆ 101 ಅಲ್ಲ, ಕೇವಲ 95 ಮಾತ್ರ ಎಂದು ನ್ಯಾಯಾಲಯ ತೀರ್ಮಾನಕ್ಕೆ ಬಂದಿದೆ ಮತ್ತು ಕೆಲವು ವೈದ್ಯಕೀಯ ಪ್ರಮಾಣಪತ್ರಗಳಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಉಲ್ಲೇಖಿಸಿದೆ.

5. ಮತ್ತೋರ್ವ ಆರೋಪಿ ಪ್ರಸಾದ್ ಪುರೋಹಿತ್ ಅವರ ನಿವಾಸದಲ್ಲಿ ಸ್ಫೋಟಕಗಳನ್ನು ಸಂಗ್ರಹಿಸಿಟ್ಟಿದ್ದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

6. ತನಿಖಾಧಿಕಾರಿಯು ಸ್ಫೋಟ ಸ್ಥಳದ ಪಂಚನಾಮೆ ಮಾಡುವಾಗ ನಕ್ಷೆಯನ್ನು ಸಿದ್ಧಪಡಿಸಿಲ್ಲ ಅಥವಾ ಸ್ಥಳದಿಂದ ಯಾವುದೇ ಬೆರಳಚ್ಚುಗಳನ್ನು ಸಂಗ್ರಹಿಸಿಲ್ಲ. "ಮಾದರಿಗಳು ಕಲುಷಿತಗೊಂಡಿದ್ದವು, ಆದ್ದರಿಂದ ವರದಿಗಳು ನಿರ್ಣಾಯಕವಲ್ಲ ಮತ್ತು ಅವಲಂಬಿಸಲಾಗುವುದಿಲ್ಲ" ಎಂದು ನ್ಯಾಯಾಲಯ ಹೇಳಿದೆ.

7. ಅಭಿನವ್ ಭಾರತ್ ಸಂಘಟನೆಯ ನಿಧಿಯನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ನ್ಯಾಯಾಲಯ ಹೇಳಿದೆ.

8. ಪುರೋಹಿತ್ ಮತ್ತು ಇನ್ನೊಬ್ಬ ಆರೋಪಿ ಅಜಯ್ ರಹಿರ್ಕರ್ ನಡುವೆ ಅಭಿನವ್ ಭಾರತ್‌ನ ಅಧಿಕಾರಿಗಳಾಗಿ ಹಣಕಾಸಿನ ವಹಿವಾಟು ನಡೆದಿದ್ದರೂ, ಪುರೋಹಿತ್ ಆ ಹಣವನ್ನು ತಮ್ಮ ಮನೆ ನಿರ್ಮಾಣ ಮತ್ತು ಎಲ್‌ಐಸಿ ಪಾಲಿಸಿಗೆ ಬಳಸಿದ್ದಾರೆ ಹೊರತು ಯಾವುದೇ ಭಯೋತ್ಪಾದಕ ಚಟುವಟಿಕೆಗೆ ಬಳಸಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

9. ಮೃತರ ಕುಟುಂಬಗಳಿಗೆ ತಲಾ ₹2 ಲಕ್ಷ ಮತ್ತು ಗಾಯಾಳುಗಳಿಗೆ ₹50,000 ಪರಿಹಾರವನ್ನು ನೀಡುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ಎನ್‌ಐಎ ನ್ಯಾಯಾಲಯ ಆದೇಶಿಸಿದೆ.

10. "ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ, ಆದರೆ ನೈತಿಕ ಆಧಾರದ ಮೇಲೆ ಶಿಕ್ಷೆ ನೀಡಲು ಸಾಧ್ಯವಿಲ್ಲ" ಎಂದು ನ್ಯಾಯಾಲಯ ಹೇಳಿದೆ.  

Tags:    

Similar News