ಹೊಸೂರು| ಟಾಟಾ ಎಲೆಕ್ಟ್ರಾನಿಕ್ಸ್ ಘಟಕದಲ್ಲಿ ಬೆಂಕಿ ಅವಘಡ
ಟಾಟಾ ಕಂಪನಿಯ ಮೊಬೈಲ್ ಫೋನ್ ಭಾಗಗಳ ಪೇಂಟಿಂಗ್ ಘಟಕದಲ್ಲಿ ಬೆಳಗ್ಗೆ 6 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ತಮಿಳುನಾಡಿನ ಟಾಟಾ ಎಲೆಕ್ಟ್ರಾನಿಕ್ಸ್ ಘಟಕದ ರಾಸಾಯನಿಕ ಗೋದಾಮಿನಲ್ಲಿ ಶನಿವಾರ ಮುಂಜಾನೆ ಬೆಂಕಿ ಕಾಣಿಸಿಕೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ. ಹೊಸೂರು ಮತ್ತು ಸಮೀಪದ ಜಿಲ್ಲೆಗಳಿಂದ ಏಳು ಅಗ್ನಿಶಾಮಕ ವಾಹನಗಳನ್ನು ತರಿಸಿಕೊಂಡಿದ್ದು, ಗಂಟೆಗಳ ಕಾಲ ಹರಸಾಹಸ ಮಾಡಿ ಬೆಂಕಿ ನಂದಿಸಲಾಯಿತು.
ʻಬೆಳಗ್ಗೆ 6 ಗಂಟೆ ಸುಮಾರಿಗೆ ಕ್ಯಾಂಪಸ್‌ನಲ್ಲಿರುವ ರಾಸಾಯನಿಕ ಗೋದಾಮಿನಲ್ಲಿ ಈ ಘಟನೆ ಸಂಭವಿಸಿದೆ. ಏಳು ಅಗ್ನಿಶಾಮಕ ವಾಹನಗಳು ಬೆಂಕಿಯನ್ನು ನಂದಿಸಿದ್ದು, ಪ್ರಾಣಾಪಾಯ ಅಥವಾ ಗಾಯವಾಗಿಲ್ಲ,ʼ ಎಂದು ಹೊಸೂರು ಅಗ್ನಿಶಾಮಕ ಠಾಣೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉದ್ಯೋಗಿಗಳು ಸುರಕ್ಷಿತವಾಗಿದ್ದು,ಅಧಿಕಾರಿಗಳು ಘಟನೆಗೆ ಕಾರಣ ಗುರುತಿಸುತ್ತಿದ್ದಾರೆ ಎಂದು ಟಾಟಾ ಎಲೆಕ್ಟ್ರಾನಿಕ್ಸ್ ತಿಳಿಸಿದೆ. ʻತಮಿಳುನಾಡಿನ ಹೊಸೂರಿನಲ್ಲಿರುವ ನಮ್ಮ ಘಟಕದಲ್ಲಿ ದುರದೃಷ್ಟಕರ ಘಟನೆ ಸಂಭವಿಸಿದೆ. ಎಲ್ಲ ಉದ್ಯೋಗಿಗಳು ಸುರಕ್ಷಿತವಾಗಿದ್ದಾರೆ. ಬೆಂಕಿಯ ಕಾರಣ ಕುರಿತು ತನಿಖೆ ನಡೆಯುತ್ತಿದ್ದು, ಉದ್ಯೋಗಿಗಳು ಮತ್ತು ಇತರರ ಸುರಕ್ಷೆಗೆ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ,ʼ ಎಂದು ಕಂಪನಿ ಹೇಳಿದೆ.
ಕಂಪನಿಯ ವೆಬ್‌ಸೈಟ್ ಪ್ರಕಾರ, ಟಾಟಾ ಎಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್ ನಿಷ್ಕೃಷ್ಟ ಭಾಗಗಳನ್ನು ತಯಾರಿಸುವಲ್ಲಿ ಪರಿಣತಿ ಹೊಂದಿರುವ ಗ್ರೀನ್‌ಫೀಲ್ಡ್ ಉದ್ಯಮ.