ಆಲಮಟ್ಟಿ ಅಣೆಕಟ್ಟು ಎತ್ತರಿಸುವ ನಿರ್ಧಾರದ ವಿರುದ್ಧ ಕೇಂದ್ರಕ್ಕೆ ಮಹಾರಾಷ್ಟ್ರ ಸರ್ಕಾರ ದೂರು

ಕರ್ನಾಟಕ ಸರ್ಕಾರವು ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 519.60. ಮೀಟರ್‌ನಿಂದ 524.256 ಮೀಟರ್‌ಗೆ ಏರಿಸಲು ಪ್ರಸ್ತಾಪಿಸಿದೆ. ಇದರಿಂದ ಮಹಾರಾಷ್ರ್ಟಕ್ಕೆ ಗಂಭೀರ ಪರಿಣಾಮ ಎದುರಾಗಲಿದೆ ಎಂದು ಜಲಸಂಪನ್ಮೂಲ ಸಚಿವ ರಾಧಾಕೃಷ್ಣ ವಿಖೆ ಪಾಟೀಲ ತಿಳಿಸಿದ್ದಾರೆ.;

Update: 2025-08-05 06:43 GMT

ಆಲಮಟ್ಟಿ ಅಣೆಕಟ್ಟು

ಕೃಷ್ಣಾ ನದಿಗೆ ನಿರ್ಮಿಸಿರುವ ಅಲಮಟ್ಟಿ ಅಣೆಕಟ್ಟು ಎತ್ತರಿಸುವ ಕರ್ನಾಟಕದ ನಿರ್ಧಾರ ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರವು ಕೇಂದ್ರಕ್ಕೆ ದೂರು ನೀಡಿದೆ. 

ಅಣೆಕಟ್ಟು ಎತ್ತರಿಸುವುದರಿಂದ ಸಾಂಗ್ಲಿ, ಸತಾರಾ, ಕೊಲ್ಲಾಪುರ ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಲಿದೆ. ಆದ್ದರಿಂದ ಕರ್ನಾಟಕದ ನಿರ್ಧಾರ ತಡೆಯಬೇಕು ಎಂದು ಮಹಾರಾಷ್ಟ್ರ ಸರ್ಕಾರ ಒತ್ತಾಯಿಸಿದೆ.

ನವದೆಹಲಿಯ ಜಲಶಕ್ತಿ ಸಚಿವಾಲಯದಲ್ಲಿ ಸೋಮವಾರ (ಆ.4) ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರನ್ನು ನಿಯೋಗದಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದ ಮಹಾರಾಷ್ಟ್ರ ಜಲಸಂಪನ್ಮೂಲ ಸಚಿವ ರಾಧಾಕೃಷ್ಣ ವಿಖೆ ಪಾಟೀಲ ಅವರು, 'ಕರ್ನಾಟಕ ಸರ್ಕಾರವು ಅಣೆಕಟ್ಟಿನ ಎತ್ತರವನ್ನು 519.60. ಮೀಟರ್‌ನಿಂದ 524.256 ಮೀಟರ್‌ಗೆ ಏರಿಸಲು ಪ್ರಸ್ತಾಪಿಸಿದೆ. ಇದರಿಂದ ಗಂಭೀರ ಪರಿಣಾಮ ಎದುರಾಗಲಿದೆ. ಇದಕ್ಕೆ ಸಂಬಂಧಿಸಿದ ಅಂಕಿ-ಅಂಶಗಳನ್ನು ಸಲ್ಲಿಸುತ್ತಿದ್ದೇವೆ. ಹೀಗಾಗಿ, ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಅಣೆಕಟ್ಟೆ ಹೆಚ್ಚಳ ಪ್ರಸ್ತಾಪ ರದ್ದುಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಕೊಯ್ನಾ, ರಾಜಾಪುರ ಅಣೆಕಟ್ಟಿನಿಂದ ಸಮಸ್ಯೆ: ಎಂ.ಬಿ. ಪಾಟೀಲ್‌ ತಿರುಗೇಟು

ಮಹಾರಾಷ್ಟ್ರದ ಭಾಗದಲ್ಲಿ ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ಬರುವ ಸಾಂಗ್ಲಿ, ಸತಾರಾ ಮತ್ತು ಕೊಲ್ಲಾಪುರ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಲು ಆ ರಾಜ್ಯದ ಕೊಯ್ನಾ, ರಾಜಾಪುರ ಮತ್ತಿತರ ಅಣೆಕಟ್ಟುಗಳಿಂದ ಒಂದೇ ಸಲ ಅಪಾರ ಪ್ರಮಾಣದ ನೀರನ್ನು ಬಿಡುಗಡೆ ಮಾಡಿರುವುದೇ ಕಾರಣ. ಇದರಲ್ಲಿ ರಾಜ್ಯದ ಆಲಮಟ್ಟಿ ಮತ್ತು ಹಿಪ್ಪರಗಿ ಅಣೆಕಟ್ಟುಗಳ ಎತ್ತರದ ಪಾತ್ರ ಇಲ್ಲ. ಇದನ್ನು ಆ ರಾಜ್ಯವೇ ನೇಮಿಸಿದ್ದ ತಜ್ಞರ ಸಮಿತಿಯ ವರದಿ ಸ್ಪಷ್ಟವಾಗಿ ಹೇಳಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಇತ್ತೀಚೆಗೆ ಹೇಳಿದ್ದರು.

ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು 519.60 ಮೀಟರ್‌ನಿಂದ 524.256 ಮೀಟರ್‌ಗೆ ಏರಿಸಲು ಕೃಷ್ಣಾ ನ್ಯಾಯಾಧಿಕರಣವೇ ಅವಕಾಶ ನೀಡಿದೆ. ಇದುವರೆಗೂ ಈ ಬಗ್ಗೆ ಪ್ರಶ್ನಿಸದಿದ್ದ ಮಹಾರಾಷ್ಟ್ರ ಸರ್ಕಾರ ಈಗ ಅಣೆಕಟ್ಟೆ ಎತ್ತರದ ಹೆಚ್ಚಳಕ್ಕೆ ತಕರಾರು ತೆಗೆದು, ಕೇಂದ್ರಕ್ಕೆ ಪತ್ರ ಬರೆದಿರುವುದು ದುರುದ್ದೇಶದಿಂದ ಕೂಡಿದೆ ಎಂದು ಆರೋಪಿಸಿದ್ದರು.

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆ ಸೇರಿದಂತೆ ಹಲವೆಡೆಗಳಲ್ಲಿ 2019ರಲ್ಲಿ ಪ್ರವಾಹ ಉಂಟಾಗಿತ್ತು. ಅದರ ಬಗ್ಗೆ ಅಧ್ಯಯನ ಮಾಡಲು ಮತ್ತು ಭವಿಷ್ಯದಲ್ಲಿ ಪ್ರವಾಹವನ್ನು ತಡೆಯಲು ಏನು ಮಾಡಬೇಕೆಂದು ಸೂಚಿಸುವಂತೆ ತಿಳಿಸಿ ಅಲ್ಲಿನ ರಾಜ್ಯ ಸರ್ಕಾರವೇ ತನ್ನ ಜಲಸಂಪನ್ಮೂಲ ಇಲಾಖೆ ನಿವೃತ್ತ ಪ್ರಧಾನ ಕಾರ್ಯದರ್ಶಿ ನಂದಕುಮಾರ್‌ ವಡ್ನೇರೆ ನೇತೃತ್ವದಲ್ಲಿ 10 ಸದಸ್ಯರ ಸಮಿತಿ ರಚಿಸಿತ್ತು.

2020ರ ಮೇ ತಿಂಗಳಲ್ಲಿ ವರದಿ ಸಲ್ಲಿಸಿರುವ ಈ ಸಮಿತಿಯು ತನ್ನ ಭೂಭಾಗದಲ್ಲಿ ಉಂಟಾಗುತ್ತಿರುವ ಪ್ರವಾಹಕ್ಕೆ ಕರ್ನಾಟಕದ ಆಲಮಟ್ಟಿ ಮತ್ತು ಹಿಪ್ಪರಗಿ ಅಣೆಕಟ್ಟುಗಳ ಹಿನ್ನೀರು ಕಾರಣವಲ್ಲ. ಈ ಎರಡೂ ಅಣೆಕಟ್ಟುಗಳ ಹಿನ್ನೀರು ಕರ್ನಾಟಕದೊಳಗೆ ನಿಲ್ಲುತ್ತವೆ. ಮಹಾರಾಷ್ಟ್ರದ ಭೂಪ್ರದೇಶ ಮುಳುಗಡೆ ಆಗುವುದಿಲ್ಲ ಎಂದು ಹೇಳಿತ್ತು ಎಂದು ತಿಳಿಸಿದ್ದರು.

Tags:    

Similar News