Guillain-Barre Syndrome : ಶಂಕಿತ ಗಿಲ್ಲೈನ್ ಬರ್ರೆ ಸಿಂಡ್ರೋಮ್‌ನಿಂದ ಮೊದಲ ಸಾವು

Guillain-Barre Syndrome : ಮೃತರ ಮೆದುಳು, ರಕ್ತ ಮತ್ತು ಕರುಳಿನ ಅಂಗಾಂಶಗಳು ಸೇರಿದಂತೆ ಹಲವು ಮಾದರಿಗಳನ್ನು ವಿಶ್ಲೇಷಣೆಗಾಗಿ ಕಳುಹಿಸಲಾಗಿದೆ. ವರದಿಗಳು ಬಂದ ನಂತರ ಸಾವಿಗೆ ಅಂತಿಮ ಕಾರಣವನ್ನು ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.;

Update: 2025-01-27 06:50 GMT
ಸಾಂದರ್ಭಿಕ ಚಿತ್ರ.

ಮಹಾರಾಷ್ಟ್ರದಲ್ಲಿ ಹೊಸ ಮಾದರಿಯ ಜಿಬಿಎಸ್ ಸಿಂಡ್ರೋಮ್‌ (Guillain-Barre Syndrome ) ಕಾಣಿಸಿಕೊಂಡಿದ್ದು ಸೋಲಾಪುರದ ಖಾಸಗಿ ಆಸ್ಪತ್ರೆಯಲ್ಲಿ ರೋಗಿಯೊಬ್ಬರು ಮೃತಪಟ್ಟಿದ್ದಾರೆ. ಇದು ಗುಲ್ಲೆನ್-ಬರ್ರೆ ಸಿಂಡ್ರೋಮ್‌ನ (ಜಿಬಿಎಸ್) ಮೊದಲ ಸಾವಿನ ಪ್ರಕರಣವಾಗಿದೆ. ಏತನ್ಮಧ್ಯೆ, ಪುಣೆಯಲ್ಲಿ ಜಿಬಿಎಸ್ ಪ್ರಕರಣಗಳು ಈಗ 101 ಕ್ಕೆ ಏರಿದ್ದು, ಆರೋಗ್ಯ ಅಧಿಕಾರಿಗಳಲ್ಲಿ ಆತಂಕವನ್ನು ಹೆಚ್ಚಿಸಿದೆ.

ಮೃತಪಟ್ಟವರು 40 ವರ್ಷದವರು ಎಂದು ಮೂಲಗಳು ತಿಳಿಸಿವೆ. ಅವರು ಅತಿಸಾರದಿಂದ ಬಳಲುತ್ತಿದ್ದರು ಮತ್ತು ಕೆಮ್ಮು ಮತ್ತು ಶೀತದ ಲಕ್ಷಣಗಳನ್ನು ಸಹ ಹೊಂದಿದ್ದರು ಎಂದು ವರದಿಗಳು ತಿಳಿಸಿವೆ. ಜನವರಿ 18ರಂದು ಅವರನ್ನು ಖಾಸಗಿ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿತ್ತು. ಅವರ ಸ್ಥಿತಿ ಸುಧಾರಿಸಿದ ನಂತರ ಅವರನ್ನು ಜನರಲ್‌ ವಾರ್ಡ್‌ಗೆ ಸ್ಥಳಾಂತರಿಸಲಾಗಿತ್ತು. ಆದಾಗ್ಯೂ, ಅವರು ಉಸಿರಾಟದ ತೊಂದರೆ ಎದುರಾಗಿ ಆರೋಗ್ಯ ಹದಗೆಟ್ಟಿತು. ಮತ್ತೆ ಐಸಿಯು ವಾರ್ಡ್‌ಗೆ ದಾಖಲಿಸಿರೂ ಅವರು ನಿಧನ ಹೊಂದಿದರು.

ಸೋಲಾಪುರ ಸರ್ಕಾರಿ ವೈದ್ಯಕೀಯ ಕಾಲೇಜಿನ ವೈದ್ಯರು ಶವಪರೀಕ್ಷೆ ನಡೆಸಿದ್ದು, ಸಾವಿಗೆ ಆರಂಭಿಕ ಕಾರಣ ಜಿಬಿಎಸ್ ಎಂದು ಎಂದು ಅಭಿಪ್ರಾಯಪಡಲಾಗಿದೆ. ಮೃತರ ಮೆದುಳು, ರಕ್ತ ಮತ್ತು ಕರುಳಿನ ಅಂಗಾಂಶಗಳು ಸೇರಿದಂತೆ ಹಲವು ಮಾದರಿಗಳನ್ನು ವಿಶ್ಲೇಷಣೆಗಾಗಿ ಕಳುಹಿಸಲಾಗಿದೆ. ವರದಿಗಳು ಬಂದ ನಂತರ ಸಾವಿಗೆ ಅಂತಿಮ ಕಾರಣವನ್ನು ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.

ಪುಣೆಯಲ್ಲಿ ಸಮಸ್ಯೆ

ಪುಣೆಯಲ್ಲಿ ಜಿಬಿಎಸ್ ಪ್ರಕರಣಗಳು ಉಲ್ಬಣಗೊಂಡಿದೆ. ಕಳೆದ 24 ಗಂಟೆಗಳಲ್ಲಿ ಪ್ರಕರಣಗಳ ಸಂಖ್ಯೆ 28 ಏರಿಕೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 101ಕ್ಕೆ ತಲುಪಿದೆ.

ಸೋಂಕು ಪತ್ತೆಯಾದ 16 ರೋಗಿಗಳು ಪ್ರಸ್ತುತ ವೆಂಟಿಲೇಟರ್ ಬೆಂಬಲದಲ್ಲಿದ್ದಾರೆ. 9 ವರ್ಷಕ್ಕಿಂತ ಕಡಿಮೆ ವಯಸ್ಸಿನ 19 ಮಕ್ಕಳಲ್ಲಿ ರೋಗಲಕ್ಷಣಗಳು ಕಂಡುಬಂದರೆ, 50-80 ವಯಸ್ಸಿನವರಲ್ಲಿ 23 ಪ್ರಕರಣಗಳು ವರದಿಯಾಗಿವೆ. ಕ್ಯಾಂಪೈಲೋಬ್ಯಾಕ್ಟರ್ ಜೆಜುನಿ ಬ್ಯಾಕ್ಟೀರಿಯಾವು ಅವರ ದೇಹದಲ್ಲಿರುವುದು ಪತ್ತೆಯಾಗಿದೆ.

ಗುಲ್ಲೆನ್-ಬರ್ರೆ ಸಿಂಡ್ರೋಮ್ (ಜಿಬಿಎಸ್) ಎಂದರೇನು?

ಜಿಬಿಎಸ್ ಎಂಬುದು ಬ್ಯಾಕ್ಟೀರಿಯಾ ಅಥವಾ ವೈರಲ್ ಸೋಂಕಿನಿಂದ ಆಗುವ ಪರಿಣಾಮ. ನಮ್ಮ ದೇಹದ ಪ್ರತಿಕಾಯಗಳು ತಪ್ಪಾಗಿ ಗ್ರಹಿಸಿ ನರ ಮಂಡಲದ ಮೇಲೆ ದಾಳಿ ಮಾಡುವುದರಿಂದ ಅನಾರೋಗ್ಯಗಳು ಉಂಟಾಗುತ್ತವೆ. ನಿಶ್ಯಕ್ತಿ , ಪಾರ್ಶ್ವವಾಯು ಮತ್ತು ಇತರ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಶೇ.80ರಷ್ಟು ರೋಗಿಗಳು ಆಸ್ಪತ್ರೆಯಿಂದ ಬಿಡುಗಡೆಯಾದ ಆರು ತಿಂಗಳೊಳಗೆ ಸ್ವತಂತ್ರವಾಗಿ ನಡೆಯುವ ಸಾಮರ್ಥ್ಯ ಮರಳಿ ಪಡೆಯುತ್ತಾರೆ. ಆದಾಗ್ಯೂ, ಕೆಲವು ರೋಗಿಗಳು ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ.

ಜಿಬಿಎಸ್‌ಗೆ ಚಿಕಿತ್ಸೆಯು ದುಬಾರಿ. ರೋಗಿಗಳಿಗೆ ಇಮ್ಯುನೊಗ್ಲೋಬುಲಿನ್ (ಐವಿಐಜಿ) ಚುಚ್ಚುಮದ್ದಿನ ಅಗತ್ಯವಿರುತ್ತದೆ. ಒಂದು ಚುಚ್ಚು ಮದ್ದಿಗೆ 20,000 ರೂಪಾಯಿ ಇದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಜಿಬಿಎಸ್ ಚಿಕಿತ್ಸೆ ನೀಡಲಾಗುವುದು ಎಂದು ಮಹಾರಾಷ್ಟ್ರ ಹಣಕಾಸು ಸಚಿವ ಅಜಿತ್ ಪವಾರ್ ಘೋಷಿಸಿದ್ದಾರೆ.

Tags:    

Similar News