ಶಿವಸೇನೆ ನಾಯಕನ ಹೇಳಿಕೆ: ಮೈತ್ರಿಕೂಟದಿಂದ ಹೊರಬರುವುದಾಗಿ ಅಜಿತ್‌ ಪವಾರ್‌ ಬೆದರಿಕೆ

Update: 2024-03-26 08:36 GMT

ಶಿವಸೇನೆ ನಾಯಕ ವಿಜಯ್‌ ಶಿವತಾರೆ ಅವರನ್ನು ಪಕ್ಷದಿಂದ ಉಚ್ಛಾಟಿಸದಿದ್ದರೆ, ಮೈತ್ರಿಕೂಟದಿಂದ ಹೊರಬರುವುದಾಗಿ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಬೆದರಿಕೆ ಹಾಕಿದೆ. ಇದರಿಂದ ಮಹಾರಾಷ್ಟ್ರ ಮೈತ್ರಿ ಸರ್ಕಾರ ಲೋಕಸಭೆ ಚುನಾವಣೆಗೆ ಮುನ್ನ ಸಂಕಷ್ಟಕ್ಕೆ ಸಿಲುಕಿದೆ.

ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಎನ್‌ಸಿಪಿ ವಕ್ತಾರ ಉಮೇಶ್ ಪಾಟೀಲ್, ಶಿವತಾರೆ ಅವರು ಅಜಿತ್ ಪವಾರ್ ವಿರುದ್ಧ ಬಳಸಿರುವ ಭಾಷೆ ಕೆಟ್ಟ ಅಭಿರುಚಿಯಿಂದ ಕೂಡಿದ್ದು, ಸ್ವಾಭಿಮಾನಿಗಳು ಸಹಿಸುವುದಿಲ್ಲ. ಪಕ್ಷದ ಹಿರಿಯ ನಾಯಕರ ಸಭೆ ಮಂಗಳವಾರ ನಡೆಯಲಿದ್ದು, ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. 

ಎನ್‌ಸಿಪಿಯ ದೃಢವಾದ ನಿಲುವು ಮುಖ್ಯಮಂತ್ರಿಯನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಏಕೆಂದರೆ, ಶಿವತಾರೆ ಅವರು ಪುರಂದರ್‌ ಮತ್ತು ನೆರೆಯ ಪ್ರದೇಶಗಳಲ್ಲಿ ಗಣನೀಯ ಪ್ರಭಾವವನ್ನು ಹೊಂದಿರುವ ಮಾಜಿ ಸಚಿವ. ಚುನಾವಣೆಗೆ ಮುನ್ನ ಅವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡರೆ, ಪಕ್ಷದ ಮೇಲೆ ಹಾನಿಯಾಗುವ ಸಂಭವ ಇದೆ. 

ದೃಢ ನಿಲುವು: ಅಜಿತ್ ಪವಾರ್ ಕುರಿತ ಹೇಳಿಕೆಗೆ ಕ್ಷಮೆಯಾಚಿಸುವುದಿಲ್ಲ ಎಂದು ಶಿವತಾರೆ ಸ್ಪಷ್ಟಪಡಿಸಿದ್ದಾರೆ. ʻನಾನು ಶಿವಲಿಂಗದ ಮೇಲೆ ಕುಳಿತಿರುವ ಚೇಳಿನ ಬಗ್ಗೆ ಇರುವ ಮರಾಠಿ ಹೇಳಿಕೆಯನ್ನು ಬಳಸಿದ್ದೇನೆ.ಅದರ ಪ್ರಕಾರ ಶಿವಲಿಂಗಕ್ಕೆ ಹಾನಿಯಾಗದಂತೆ ಚೇಳನ್ನು ಕೊಲ್ಲಲು ಸಾಧ್ಯವಿಲ್ಲ. ನಾನು ಯಾವುದೇ ಆಕ್ಷೇಪಾರ್ಹ ಭಾಷೆ ಬಳಸಿಲ್ಲ ಮತ್ತು ನನ್ನ ಹೇಳಿಕೆಗೆ ಬದ್ಧನಾಗಿದ್ಧೇನೆʼ ಎಂದು ಹೇಳಿದ್ದಾರೆ. 

ಎನ್‌ಡಿಎ ಪಾಲುದಾರರ ನಡುವಿನ ಸೀಟು ಹಂಚಿಕೆ ಮಾತುಕತೆಗಳ ನಡೆಯುತ್ತಿರುವಾಗಲೇ, ಶಿವತಾರೆ ಪ್ರತಿಷ್ಠಿತ ಬಾರಾಮತಿ ಲೋಕಸಭೆ ಕ್ಷೇತ್ರದಿಂದ ತಮ್ಮ ಉಮೇದುವಾರಿಕೆಯನ್ನು ಏಕಪಕ್ಷೀಯವಾಗಿ ಘೋಷಿಸಿದ್ದಾರೆ. ಈ ಬಗ್ಗೆ ಅಜಿತ್ ಪವಾರ್ ಬಣ ಅಸಮಾಧಾನಗೊಂಡಿದೆ. ಅಜಿತ್ ಪವಾರ್‌ ಬಣ ಸುನೇತ್ರಾ ಪವಾರ್ ಅವರನ್ನು ಕಣಕ್ಕಿಳಿಸಲು ಉತ್ಸುಕವಾಗಿದೆ. 

ಎರಡು ಅವಧಿಗೆ ಶಾಸಕರಾಗಿರುವ ಶಿವತಾರೆ ಅವರು ಬಾರಾಮತಿ ಮೇಲಿನ ಪವಾರ್‌ ಕುಟುಂಬದ ಪ್ರಾಬಲ್ಯವನ್ನು ಕೊನೆಗಾಣಿಸಲು ಬಯಸಿದ್ದು, ಆ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿದ್ದಾರೆ.

Tags:    

Similar News