ಸೀತಾರಾಂ ಯೆಚೂರಿ ಉತ್ತರಾಧಿಕಾರಿ ಎಂ.ಎ. ಬೇಬಿ?

ಎಂ.ಎ. ಬೇಬಿ ಅವರ ವ್ಯಾಪಕ ಅನುಭವ, ರಾಜ್ಯಸಭೆ ಸದಸ್ಯರಾಗಿ ಸೇವೆ ಮತ್ತು ಪಕ್ಷದ ದೆಹಲಿ ಕೇಂದ್ರದೊಂದಿಗೆ ದೀರ್ಘ ಕಾಲದ ಒಡನಾಟವು ಅವರನ್ನು ಪ್ರಬಲ ಅಭ್ಯರ್ಥಿಯನ್ನಾಗಿ ಮಾಡಿದೆ.

Update: 2024-09-14 07:27 GMT

ಸೀತಾರಾಂ ಯೆಚೂರಿ ಅವರ ನಿಧನದ ನಂತರ ಕೇರಳದ ಪಾಲಿಟ್‌ಬ್ಯೂರೋ ಸದಸ್ಯ ಮತ್ತು ಮಾಜಿ ಶಿಕ್ಷಣ ಸಚಿವ ಎಂ.ಎ. ಬೇಬಿ ಅವರು ತಾತ್ಕಾಲಿಕವಾಗಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ವಹಿಸಿಕೊಳ್ಳುವ ಸಾಧ್ಯತೆಯಿದೆ. ಯೆಚೂರಿ ಅವರು 1970 ರ ದಶಕದ ಅಂತ್ಯದಲ್ಲಿ ಜಂಟಿ ಕಾರ್ಯದರ್ಶಿಯಾಗಿ ಪ್ರವರ್ಧಮಾನಕ್ಕೆ ಬಂದಾಗ ಬೇಬಿ ಅವರು ಭಾರತೀಯ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಅಧ್ಯಕ್ಷರಾಗಿದ್ದರು.

ಚಲಾವಣೆಯಲ್ಲಿರುವ ಇತರ ಹೆಸರುಗಳೆಂದರೆ ಬೃಂದಾ ಕಾರಟ್, ಮೊಹಮ್ಮದ್ ಸಲೀಂ ಮತ್ತು ಬಿ.ವಿ. ರಾಘವಲು. ಆದರೆ, ಬೇಬಿ ಮುಂಚೂಣಿಯಲ್ಲಿದ್ದಾರೆ. 

ಬೇಬಿ ಪರ ಅಂಶಗಳು: ವ್ಯಾಪಕ ಅನುಭವ, ರಾಜ್ಯಸಭೆ ಸದಸ್ಯರಾಗಿ ಸೇವೆ ಮತ್ತು ಪಕ್ಷದ ದೆಹಲಿ ಕೇಂದ್ರದೊಂದಿಗೆ ದೀರ್ಘ ಕಾಲದ ಒಡನಾಟ ಅವರನ್ನು ಪ್ರಬಲ ಅಭ್ಯರ್ಥಿಯನ್ನಾಗಿ ಮಾಡಿದೆ.

ʻ ಸೇವೆಯಲ್ಲಿರುವಾಗಲೇ ಪ್ರಧಾನ ಕಾರ್ಯದರ್ಶಿಯೊಬ್ಬರು ನಿಧನರಾಗಿರುವುದು ಇದೇ ಮೊದಲು. ಆದ್ದರಿಂದ, ಬದಲಿ ಬಗ್ಗೆ ಇನ್ನೂ ಚರ್ಚಿಸಿಲ್ಲ; ಮೊದಲು ವಿದಾಯ ಹೇಳೋಣ,ʼ ಎಂದು ಬೇಬಿ ಹೇಳಿದರು. ಆದರೆ, ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಂದ ಬೇಬಿ ಆಯ್ಕೆಗೆ ವಿರೋಧ ಬರಬಹುದು. ಸುಧಾರಣೆ ಮತ್ತು ಸ್ವಲ್ಪ ಉದಾರ ನಿಲುವಿನ ಬೇಬಿ, ಇತ್ತೀಚೆಗೆ ಕೇರಳದ ನಾಯಕತ್ವದೊಂದಿಗೆ ಸರಿಯಾಗಿ ಹೊಂದಿಕೊಂಡಿಲ್ಲ. 

ʻತಕ್ಷಣವೇ ಹೊಸ ಪ್ರಧಾನ ಕಾರ್ಯದರ್ಶಿ ನೇಮಕವಾಗುವುದಿಲ್ಲ.ಪಾಲಿಟ್‌ ಬ್ಯೂರೋದ ಹಿರಿಯ ಸದಸ್ಯರು ತಾತ್ಕಾಲಿಕವಾಗಿ ಜವಾಬ್ದಾರಿ ತೆಗೆದುಕೊಳ್ಳುತ್ತಾರೆ. ಏಪ್ರಿಲ್ 2025ರಲ್ಲಿ ಮಧುರೈನಲ್ಲಿ ಆಯ್ಕೆ ನಡೆಯಲಿದೆ,ʼ ಎಂದು ಇನ್ನೊಬ್ಬ ಹಿರಿಯ ನಾಯಕ ಹೇಳಿದರು. 

ಬೃಂದಾ ಕಾರಟ್:‌ ಸಿಪಿಐ(ಎಂ) ಮಾಜಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಅವರ ಪತ್ನಿ ಬೃಂದಾ ಕಾರಟ್ ಅವರು 2005ರಲ್ಲಿ ಪಾಲಿಟ್‌ ಬ್ಯೂರೊದ ಮೊದಲ ಮಹಿಳಾ ಸದಸ್ಯೆ. ಅವರು 2005 ರಿಂದ 2011 ರವರೆಗೆ ರಾಜ್ಯಸಭೆ ಸದಸ್ಯೆ ಆಗಿದ್ದರು.

1947 ರಲ್ಲಿ ಜನಿಸಿದ ಬೃಂದಾ, ಕೋಲ್ಕತ್ತಾ ಮತ್ತು ದೆಹಲಿಯಲ್ಲಿ ಶಿಕ್ಷಣ ಪಡೆದಿದ್ದು, ನಾಲ್ಕು ವರ್ಷ ಲಂಡನ್‌ನಲ್ಲಿ ಏರ್ ಇಂಡಿಯಾದಲ್ಲಿ ಕೆಲಸ ಮಾಡಿದರು. ವಿಯೆಟ್ನಾಂ ಯುದ್ಧ ವಿರೋಧಿ ಪ್ರತಿಭಟನೆಗಳು ಅವರನ್ನು ರಾಜಕೀಯಕ್ಕೆ ಎಳೆದವು. ದೆಹಲಿಗೆ ಹಿಂದಿರುಗಿದ ನಂತರ, ಸಿಪಿಐ(ಎಂ) ಸೇರಿ, 1975 ರಲ್ಲಿ ಪ್ರಕಾಶ್ ಅವರನ್ನು ವಿವಾಹವಾದರು. ಆದರೆ, ಅವರು ವಿರೋಧ ಪಕ್ಷದ ನಾಯಕರೊಂದಿಗೆ ಹೆಚ್ಚಿನ ಬಾಂಧವ್ಯ ಹೊಂದಿಲ್ಲ.

ಮೊಹಮ್ಮದ್ ಸಲೀಂ: ಮೊಹಮ್ಮದ್ ಸಲೀಂ(1957) ಅವರು ಪಶ್ಚಿಮ ಬಂಗಾಳದ ಹಿರಿಯ ನಾಯಕ. ಸಚಿವರಾಗಿ ಸೇವೆ ಸಲ್ಲಿಸಿರುವುದಲ್ಲದೆ, ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಸಲೀಂ ತುರ್ತು ಪರಿಸ್ಥಿತಿಯಲ್ಲಿ 1975-77ರಲ್ಲಿ ರಾಜಕೀಯಕ್ಕೆ ಬಂದರು. 1998 ರಲ್ಲಿ ಕೇಂದ್ರ ಸಮಿತಿ, 2015 ರಲ್ಲಿ ಪಾಲಿಟ್‌ ಬ್ಯೂರೋ ಹಾಗೂ 2022 ರಲ್ಲಿ ಪಶ್ಚಿಮ ಬಂಗಾಳ ಪಕ್ಷದ ಘಟಕದ ಕಾರ್ಯದರ್ಶಿ ಆದರು. ಅಷ್ಟರಲ್ಲಿ ಮಾರ್ಕ್ಸ್‌ವಾದಿಗಳು ತಮ್ಮ ಒಂದು ಕಾಲದ ಭದ್ರಕೋಟೆಯಲ್ಲಿ ಸೋಲುಂಡಿದ್ದರು.

ಬಿ.ವಿ.ರಾಘವಲು: ಪಾಲಿಟ್‌ಬ್ಯುರೊದ ಮತ್ತೊಬ್ಬ ಸದಸ್ಯ, ವಿವಾದಾತ್ಮಕ ವ್ಯಕ್ತಿ. ತುರ್ತು ಪರಿಸ್ಥಿತಿ ವೇಳೆ ರಾಜಕೀಯಕ್ಕೆ ಬಂದು, ಕೆಲಕಾಲ ಭೂಗತರಾಗಿದ್ದರು. ಏಕೀಕೃತ ಆಂಧ್ರಪ್ರದೇಶದಲ್ಲಿ ಪಕ್ಷದ ಕೊನೆಯ ಕಾರ್ಯದರ್ಶಿ. ದುರಾಡಳಿತದ ಆರೋಪದಿಂದ ಪಕ್ಷದ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಆದರೆ, ಅವರು ಪೊಲಿಟ್ ಬ್ಯೂರೋ ಸದಸ್ಯರಾಗಿ ಉಳಿದಿದ್ದಾರೆ.

Tags:    

Similar News