ಲೆ.ಜ. ಉಪೇಂದ್ರ ದ್ವಿವೇದಿ ಸೇನಾ ಮುಖ್ಯಸ್ಥ

Update: 2024-06-12 07:29 GMT

ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರು ಸೇನಾ ಸಿಬ್ಬಂದಿಯ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಸರ್ಕಾರ ಹೇಳಿದೆ.

ದ್ವಿವೇದಿ ಅವರು ಜನರಲ್ ಮನೋಜ್ ಪಾಂಡೆ ಅವರಿಂದ ಅಧಿಕಾರ ವಹಿಸಿಕೊಳ್ಳಲಿದ್ದು, ಪಾಂಡೆ ಅವರು ಜೂನ್ 30 ರಂದು ನಿವೃತ್ತರಾಗಲಿದ್ದಾರೆ. 

ಚೀನಾ ಮತ್ತು ಪಾಕಿಸ್ತಾನದ ಗಡಿಗಳಲ್ಲಿ ಕಾರ್ಯಾಚರಣೆ ಅನುಭವ ಹೊಂದಿರುವ ಲೆಫ್ಟಿನೆಂಟ್ ಜನರಲ್ ದ್ವಿವೇದಿ ಅವರು ಪ್ರಸ್ತುತ ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದ್ವಿವೇದಿ ಅವರ ನೇಮಕದಲ್ಲಿ ಸರ್ಕಾರವು ಹಿರಿತನದ ಮಾನದಂಡವನ್ನು ಅನುಸರಿಸಿದೆ. 

ʻಸರ್ಕಾರ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರನ್ನು ಜೂನ್ 30 ರ ಮಧ್ಯಾಹ್ನದಿಂದ ಜಾರಿಗೆ ಬರುವಂತೆ ಸೇನಾ ಸಿಬ್ಬಂದಿಯ ಮುಖ್ಯಸ್ಥರನ್ನಾಗಿ ನೇಮಿಸಿದೆ,ʼ ಎಂದು ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಊಹಾಪೋಹಕ್ಕೆ ಅಂತ್ಯ: ಅತ್ಯಪರೂಪದ ಕ್ರಮವೊಂದರಲ್ಲಿ ಸರ್ಕಾರವು  ಪಾಂಡೆ ಅವರ ನಿವೃತ್ತಿಗೆ ಆರು ದಿನ ಮೊದಲು, ಅವರ ಅಧಿಕಾರಾವಧಿಯನ್ನು ಒಂದು ತಿಂಗಳು ವಿಸ್ತರಿಸಿತು. ಇದರಿಂದ ಲೆಫ್ಟಿನೆಂಟ್ ಜನರಲ್ ದ್ವಿವೇದಿ ಅವರನ್ನು ಉನ್ನತ ಹುದ್ದೆಗೆ ಪರಿಗಣಿ ಸದೆ ಇರಬಹುದು ಎಂಬ ಊಹಾಪೋಹಕ್ಕೆ ಕಾರಣವಾಯಿತು. 

ಲೆ.ಜ. ದ್ವಿವೇದಿ ನಂತರದ ಅತ್ಯಂತ ಹಿರಿಯ ಅಧಿಕಾರಿ ಎಂದರೆ ದಕ್ಷಿಣ ಸೇನಾ ಕಮಾಂಡರ್ ಲೆ.ಜ.ಅಜಯ್ ಕುಮಾರ್ ಸಿಂಗ್. ಅವರು ಜೂನ್ 30 ರಂದು ನಿವೃತ್ತರಾಗಲಿದ್ದಾರೆ. ಮೂರು ಸೇನೆಗಳ ಮುಖ್ಯಸ್ಥರು 62 ವರ್ಷದವರೆಗೆ ಅಥವಾ ಮೂರು ವರ್ಷ ಕಾಲ ಸೇವೆ ಸಲ್ಲಿಸಬಹುದು. ಲೆಫ್ಟಿನೆಂಟ್ ಜನರಲ್ ಶ್ರೇಣಿಯ ಅಧಿಕಾರಿಗಳ ನಿವೃತ್ತಿ ವಯಸ್ಸು 60 ವರ್ಷ. 

ಲೆ.ಜ. ಉಪೇಂದ್ರ ದ್ವಿವೇದಿ ಯಾರು?: ಲೆ.ಜ. ದ್ವಿವೇದಿ ಅವರು ಫೆಬ್ರವರಿ 19 ರಂದು ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. ಅದಕ್ಕಿಂತ ಮೊದಲು ಅವರು, 2022-2024 ರವರೆಗೆ ಉತ್ತರ ಕಮಾಂಡ್‌ನ ಜನರಲ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಆಗಿ ಸೇವೆ ಸಲ್ಲಿಸುತ್ತಿದ್ದರು. 

ಜುಲೈ 1, 1964 ರಂದು ಜನಿಸಿದ ಅವರು ರೇವಾದ ಸೈನಿಕ್ ಶಾಲೆಯ ಹಳೆಯ ವಿದ್ಯಾರ್ಥಿ. ಡಿಸೆಂಬರ್ 15, 1984 ರಂದು ಭಾರತೀಯ ಸೇನೆಯ 18 ಜಮ್ಮು ಮತ್ತು ಕಾಶ್ಮೀರ ರೈಫಲ್ಸ್‌ಗೆ ನಿಯೋಜಿಸಲ್ಪಟ್ಟರು. ಆನಂತರ ಆ ಘಟಕದ ಕಮಾಂಡರ್ ಆಗಿದ್ದರು. ಅವರ ಕಮಾಂಡ್ ನೇಮಕಗಳಲ್ಲಿ ಕಮಾಂಡ್ ಆಫ್ ರೆಜಿಮೆಂಟ್ (18 ಜಮ್ಮು ಮತ್ತು ಕಾಶ್ಮೀರ ರೈಫಲ್ಸ್), ಬ್ರಿಗೇಡ್ (26 ಸೆಕ್ಟರ್ ಅಸ್ಸಾಂ ರೈಫಲ್ಸ್), ಇನ್‌ಸ್ಪೆಕ್ಟರ್ ಜನರಲ್, ಅಸ್ಸಾಂ ರೈಫಲ್ಸ್ (ಪೂರ್ವ) ಮತ್ತು 9 ಕಾರ್ಪ್ಸ್ ಸೇರಿವೆ. ಅವರು ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ ಮತ್ತು ಮೂರು ಜಿಒಸಿ ಇನ್‌ ಸಿ ಶ್ಲಾಘನೆ ಫಲಕಕ್ಕೆ ಪಾತ್ರರಾಗಿದ್ದಾರೆ. 

ಚೀನಾದೊಂದಿಗೆ ಮಾತುಕತೆ: ಗಡಿ ಸಮಸ್ಯೆಯನ್ನು ಪರಿಹರಿಸುವಲ್ಲಿ ಚೀನಾದೊಂದಿಗೆ ನಡೆಯುತ್ತಿರುವ ಮಾತುಕತೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಸೇನೆಯ ಅತಿ ದೊಡ್ಡ ಕಮಾಂಡ್‌ನ ಆಧುನೀಕರಣ ಮತ್ತು ಸಜ್ಜುಗೊಳಿಸುವಿಕೆಯಲ್ಲಿ ತೊಡಗಿಸಿಕೊಂಡಿದ್ದರು. ನ್ಯಾಷನಲ್ ಡಿಫೆನ್ಸ್ ಕಾಲೇಜ್ ಮತ್ತು ಅಮೆರಿಕದ ಆರ್ಮಿ ವಾರ್ ಕಾಲೇಜಿನ ವಿದ್ಯಾರ್ಥಿಯಾದ ಅವರು, ರಕ್ಷಣೆ ಮತ್ತು ನಿರ್ವಹಣೆ ಅಧ್ಯಯನದಲ್ಲಿ ಎಂ.ಫಿಲ್., ಮತ್ತು ಸ್ಟ್ರಾಟೆಜಿಕ್ ಸ್ಟಡೀಸ್ ಮತ್ತು ಮಿಲಿಟರಿ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

Tags:    

Similar News