ಚುನಾವಣೆ-2024: ಕಾಂಗ್ರೆಸ್‌ ಮೂರನೇ ಪಟ್ಟಿಯಲ್ಲಿ ಮುಖಂಡರ ಬಂಧುಗಳ ದರ್ಬಾರು

ಲೋಕಸಭೆ ಚುನಾವಣೆಯ ಅಭ್ಯರ್ಥಿಗಳ ಮೂರನೇ ಪಟ್ಟಿಯಲ್ಲಿ ಕಾಂಗ್ರೆಸ್ ಪಕ್ಷವು ಪ್ರಮುಖರ ಸಂಬಂಧಿಕರು ಮತ್ತು ಹಾಲಿ ಶಾಸಕರ ಮೇಲೆ ಬಾಜಿ ಕಟ್ಟಿದೆ. ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಹಿಂದಿನ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕಣದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.;

Update: 2024-03-22 10:53 GMT

ಗುರುವಾರ (ಮಾ.21)- ಲೋಕಸಭೆ ಚುನಾವಣೆಯ ಅಭ್ಯರ್ಥಿಗಳ ಮೂರನೇ ಪಟ್ಟಿಯಲ್ಲಿ ಕಾಂಗ್ರೆಸ್ ಪಕ್ಷವು  ಪ್ರಮುಖರ ಸಂಬಂಧಿಕರು ಮತ್ತು ಹಾಲಿ ಶಾಸಕರ ಮೇಲೆ ಬಾಜಿ ಕಟ್ಟಿದೆ. ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಹಿಂದಿನ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕಣದಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.

ಮೂರನೇ ಪಟ್ಟಿಯಲ್ಲಿ 56 ಅಭ್ಯರ್ಥಿಗಳಿದ್ಳದು, ಪಕ್ಷ ರಾಜಸ್ಥಾನದಲ್ಲಿ ಮೈತ್ರಿಯ ವಿಸ್ತರಣೆಯನ್ನುಬಯಸಿದೆ ಮತ್ತು ಮಹಾರಾಷ್ಟ್ರ, ಬಿಹಾರ ಹಾಗೂ ಪಶ್ಚಿಮ ಬಂಗಾಳದಲ್ಲಿ ಇಂಡಿಯ ಒಕ್ಕೂಟದ ಪಾಲುದಾರರೊಂದಿಗೆ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಅಡೆತಡೆಗಳನ್ನು ಎದುರಿಸುತ್ತಿದೆ ಎಂಬುದು ಸ್ಪಷ್ಟವಾಗಿದೆ. 300 ಸ್ಥಾನಗಳಲ್ಲಿ ಈವರೆಗೆ 138 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಅರುಣಾಚಲ ಪ್ರದೇಶದ 2, ಗುಜರಾತ್‌ 11, ಕರ್ನಾಟಕ 17, ಮಹಾರಾಷ್ಟ್ರ 7, ರಾಜಸ್ಥಾನ 6, ಪಾಂಡಿಚೇರಿಯಿಂದ ಏಕೈಕ ಸ್ಥಾನ, ತೆಲಂಗಾಣ 5 ಮತ್ತು ಎಡಪಕ್ಷಗಳೊಂದಿಗೆ ಮೈತ್ರಿ ಮಾತುಕತೆ ನಡೆಯುತ್ತಿರುವ ಬಂಗಾಳದ 8 ಅಭ್ಯರ್ಥಿಗಳ ಹೆಸರು ಪ್ರಕಟಿಸಿದೆ.

ಪಟ್ಟಿಯಲ್ಲಿ ಹಾಲಿ ಸಂಸದರು: ಬಂಗಾಳದ ಬಹರಂಪುರದಿಂದ ಅಧೀರ್ ರಂಜನ್ ಚೌಧರಿ , ಪಾಂಡಿಚೇರಿಯಿಂದ ವೆ.ವೈತಿಲಿಂಗಂ ಮತ್ತು ಮಾಲ್ಡಾ ದಕ್ಷಿಣದಿಂದ ಹಾಲಿ ಸಂಸದ ಅಬು ಹಶೆಂ ಖಾನ್ ಚೌಧರಿ ಅವರ ಪುತ್ರ ಇಶಾ ಖಾನ್ ಚೌಧುರಿ ಅವರನ್ನು ಕಣಕ್ಕಿಳಿಸಿದೆ. ಕರ್ನಾಟಕದಿಂದ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ಮಾತ್ರವಲ್ಲದೆ, ಐವರು ಕ್ಯಾಬಿನೆಟ್ ಮಂತ್ರಿಗಳ ಮಕ್ಕಳು, ಹಾಲಿ ಮತ್ತು ಮಾಜಿ ಸಂಸದರು ಹಾಗೂ ಶಾಸಕರ ಸಂಬಂಧಿಕರು ಕಣಕ್ಕೆ ಇಳಿಯಲಿದ್ದಾರೆ.

ಮಹಾರಾಷ್ಟ್ರದಲ್ಲಿ ಪರಿಚಿತ ಮುಖಗಳು: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ ಅವರ ಪುತ್ರಿ, ಮೂರು ಬಾರಿ ಶಾಸಕಿಯಾಗಿ ಆಯ್ಕೆಯಾಗಿರುವ ಪ್ರಣೀತಿ ಶಿಂಧೆ ಅವರನ್ನು ಸೋಲಾಪುರ, ಶಾಸಕ ಬಲವಂತ ವಾಂಖೆಡೆ ಮತ್ತು ವಸಂತರಾವ್ ಬಲವಂತರಾವ್ ಚವಾಣ್ ಅವರನ್ನುಕ್ರಮವಾಗಿ ಅಮರಾವತಿ ಮತ್ತು ನಾಂದೇಡ್ ಕ್ಷೇತ್ರಗಳಿಂದ ಕಣಕ್ಕಿಳಿಸಲಾಗಿದೆ. ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಅವರು ಬಿಜೆಪಿಗೆ ಪಕ್ಷಾಂತರಗೊಂಡ ಬಳಿಕ ನಾಂದೇಡ್ ಕ್ಷೇತ್ರವನ್ನು ಕಸಿದುಕೊಳ್ಳುವುದು ಕಾಂಗ್ರೆಸ್‌ಗೆ ಪ್ರತಿಷ್ಠೆಯ ವಿಷಯವಾಗಿದೆ. ಉದ್ಧವ್ ಠಾಕ್ರೆ ಅವರ ಶಿವಸೇನೆ (ಯುಬಿಟಿ) ಮತ್ತು ಶರದ್ ಪವಾರ್ ಅವರ ಎನ್‌ಸಿಪಿ ಎಸ್ಸಿಯೊಂದಿಗೆ ಕಾಂಗ್ರೆಸ್‌ನ ಸೀಟು ಹಂಚಿಕೆ ಮಾತುಕತೆ ಅಂತ್ಯಗೊಂಡಿಲ್ಲ. ಕೊಲ್ಲಾಪುರ ಕ್ಷೇತ್ರದಲ್ಲಿ ಕೊಲ್ಹಾಪುರ ರಾಜಮನೆತನದ ಛತ್ರಪತಿ ಶಾಹು ಮಹಾರಾಜ್ ಅವರನ್ನು ಕಣಕ್ಕಿಳಿಸಿದೆ. 

ಉದ್ಧವ್ ಠಾಕ್ರೆ ಅವರು ಸಾಂಗ್ಲಿ ಕ್ಷೇತ್ರ ಬಿಟ್ಟುಕೊಡುವುದಿಲ್ಲ ಎನ್ನುವ ಮೂಲಕ ಕಾಂಗ್ರೆಸ್-ಶಿವಸೇನಾ-ಎನ್‌ಸಿಪಿ ಮೈತ್ರಿಕೂಟದಲ್ಲಿ ಕೋಲಾ ಹಲ ಸೃಷ್ಟಿಸಿದ್ದಾರೆ. ಇದು ಕಾಂಗ್ರೆಸ್ ನಾಯಕ ವಿಶಾಲ್ ಪಾಟೀಲ್ ಅವರ ಕ್ಷೇತ್ರ. ವಿಜಯದ ಉತ್ತಮ ಅವಕಾಶವಿದೆ. ಸಾಂಗ್ಲಿಯಂತಹ ಕ್ಷೇತ್ರ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಉದ್ಧವ್‌ ಮನವೊಲಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಕೆಲವು ಕ್ಷೇತ್ರಗಳಲ್ಲಿ ಒಮ್ಮತವನ್ನು ರೂಪಿಸಲು ಸಾಧ್ಯವಾಗಿಲ್ಲ ಎಂದು ಮೂಲಗಳು ಫೆಡರಲ್‌ಗೆ ತಿಳಿಸಿವೆ.

ಚಂದ್ರಾಪುರದ ಸಂದಿಗ್ಧ: ರಾಜ್ಯದ 48 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ 2019ರಲ್ಲಿ ಗೆಲುವು ಸಾಧಿಸಿದ್ದ ಕ್ಷೇತ್ರ ಚಂದ್ರಾಪುರ.ಪಕ್ಷದ ಕೇಂದ್ರ ನಾಯಕತ್ವವು ಪ್ರಬಲ ಕುಣಬಿ ನಾಯಕ ಸುರೇಶ್ 'ಬಾಲುಭಾಯಿ' ಧನೋರ್ಕರ್ ಅವರ ಪತ್ನಿ ಮತ್ತು ಹಾಲಿ ಶಾಸಕಿ ಪ್ರತಿಭಾ ಧನೋರ್ಕರ್ ಅವರನ್ನು ಕಣಕ್ಕಿಳಿಸಲು ಉತ್ಸುಕವಾಗಿದೆ. ಆದರೆ, ವಿಧಾನಸಭೆ ವಿರೋಧ ಪಕ್ಷದ ನಾಯಕ ವಿಜಯ್ ವಾಡೆತ್ತಿವಾರ್, ತಮ್ಮ ಮಗಳನ್ನು ಕಣಕ್ಕೆ ಇಳಿಸಬೇಕೆಂದು ಹಠ ಹಿಡಿದಿದ್ದಾರೆ. ಶರದ್ ಪವಾರ್ ಅವರ ಎನ್‌ಸಿಪಿ ಬಣ ತನಗೆ ಬೇಕೆಂದು ಕೇಳುತ್ತಿರುವ ಭಂಡಾರಾ-ಗೊಂಡಿಯಾ ಕ್ಷೇತ್ರದಿಂದ ಸ್ಪರ್ಧಿಸಬೇಕೆಂದು ರಾಜ್ಯ ಘಟಕದ ಮುಖ್ಯಸ್ಥ ನಾನಾ ಪಟೋಲೆ ಅವರನ್ನು ಮನವೊಲಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಆದರೆ, ಅವರು ಸ್ಪರ್ಧೆಗೆ ಸಿದ್ಧವಿಲ್ಲ. ಎಂವಿಎ/ಇಂಡಿಯ ಒಕ್ಕೂಟದ ಸೀಟು ಹಂಚಿಕೆ ಒಪ್ಪಂದದ ಭಾಗವಾಗಿ ಈ ಎರಡು ಸ್ಥಾನ ಮತ್ತು ಉಳಿದ ಕ್ಷೇತ್ರಗಳ ಬಗ್ಗೆ ಹೆಚ್ಚಿನ ಚರ್ಚೆಗೆ ಕಾಂಗ್ರೆಸ್‌ ನಿರ್ಧರಿಸಿದೆ. 

ಬಿಹಾರದಲ್ಲಿ ಲಾಲು ಯಾದವ್ ಅವರ ಆರ್‌ಜೆಡಿಯೊಂದಿಗೆ ಸೀಟು ಹಂಚಿಕೆ ಒಪ್ಪಂದ ಆಗಬೇಕಿದೆ ಎಂದು ಪಕ್ಷದ ಮೂಲಗಳು ಹೇಳಿವೆ; ಬಂಗಾಳದಲ್ಲಿ ಎಡರಂಗದೊಡನೆ ಮಾತುಕತೆ ಪ್ರಗತಿಯಾಗಿಲ್ಲ. ಬಿಹಾರದಲ್ಲಿ ಕಾಂಗ್ರೆಸ್ 9 ಮತ್ತು ಎಡಪಕ್ಷಗಳು ಐದು ಸ್ಥಾನ ಕೇಳುತ್ತಿವೆ. ಆರ್‌ಜೆಡಿ ಇದಕ್ಕೆ ಸಿದ್ಧವಿಲ್ಲ:

ವಿವರಿಸಲಾಗದ ನಡೆ:  ಎಡ ಪಕ್ಷವನ್ನುಓಲೈಸಲು ಕಾಂಗ್ರೆಸ್‌ ಆಶ್ಚರ್ಯಕರ ಮಾತ್ರವಲ್ಲದೆ ವಿವರಿಸಲು ಸಾಧ್ಯವಿಲ್ಲದ ಕೆಲಸವನ್ನು ಮಾಡಿತು. ಅದೆಂದರೆ, ರಾಜಸ್ಥಾನದ ಸಿಕರ್ ಕ್ಷೇತ್ರವನ್ನು ಎಡಪಕ್ಷಕ್ಕೆ ಬಿಟ್ಟುಕೊಡಲು ಮುಂದಾಯಿತು. ಕಾಂಗ್ರೆಸ್ ಇಲ್ಲಿ ರಾಜ್ಯ ಘಟಕದ ಮುಖ್ಯಸ್ಥ ಗೋವಿಂದ್ ಸಿಂಗ್ ದೋತಾಸ್ರಾ ಅವರನ್ನುಇಳಿಸಲು ನಿರ್ಧರಿಸಿತ್ತು.ಆದರೆ, ಅವರು ಪ್ರಸ್ತಾಪವನ್ನು ನಿರಾಕರಿಸಿದರು. ರಾಜಸ್ಥಾನದಲ್ಲಿ ಇಂಡಿಯ ಒಕ್ಕೂಟವನ್ನು ವಿಸ್ತರಿಸಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್, ಜಾಟ್ ನಾಯಕ ಮತ್ತು ರಾಷ್ಟ್ರೀಯ ಲೋಕತಾಂತ್ರಿಕ್ ಪಾರ್ಟಿ (ಆರ್‌ಎಲ್‌ಪಿ) ಸಂಸ್ಥಾಪಕ ಹನುಮಾನ್ ಬೇನಿವಾಲ್ ಮತ್ತು ರಾಜ್‌ಕುಮಾರ್ ರಾವುತ್‌ ಅವರ ಭಾರತ್ ಆದಿವಾಸಿ ಪಕ್ಷದೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. 

ರಾಜಸ್ಥಾನದಲ್ಲಿ 2014 ಮತ್ತು 2019 ರ ಸೋಲಿನ ಸೇಡು ತೀರಿಸಿಕೊಳ್ಳಲು ತನಗೆ ಅವಕಾಶವಿದೆ ಎಂದು ಕಾಂಗ್ರೆಸ್ ‌ ನಂಬಿದೆ. ಆದರೆ, ಪಕ್ಷ ರಾಜ್ಯದ 25 ಲೋಕಸಭಾ ಸ್ಥಾನಗಳಲ್ಲಿ ಒಂದರಲ್ಲೂ ಗೆದ್ದಿಲ್ಲ. ಬಿಜೆಪಿ ಸಂಸದ ರಾಹುಲ್ ಕಸ್ವಾನ್ ಅವರ ಇತ್ತೀಚಿನ ಸೇರ್ಪಡೆ(ಚುರುದಿಂದ ಕಾಂಗ್ರೆಸ್ ಅಭ್ಯರ್ಥಿ)ಯಿಂದ ಪಕ್ಷದಲ್ಲಿ ವಿಶ್ವಾಸ ಹೆಚ್ಚಿದೆ. ಗುರುವಾರ ಕೋಟಾದ ಬಿಜೆಪಿ ಪ್ರಬಲ ನಾಯಕ ಪ್ರಹ್ಲಾದ್ ಗುಂಜಾಲ್ ಕೂಡ ಕಾಂಗ್ರೆಸ್‌ ಸೇರಿದ್ದಾರೆ. ಮುಂದಿನ ಸುತ್ತಿನಲ್ಲಿ ಗುಂಜಾಲ್ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗುವ ಸಾಧ್ಯತೆಯಿದೆ. ಕಳೆದ ವಾರ ಆರ್‌ಎಲ್‌ಪಿ ತೊರೆದು ಕಾಂಗ್ರೆಸ್‌ ಸೇರಿದ್ದ ಉಮ್ಮೆದಾ ರಾಮ್ ಬೇನಿವಾಲ್ ಅವರೀಗ ಬಾರ್ಮರ್‌ ನಿಂದ ಪಕ್ಷದ ಅಭ್ಯರ್ಥಿ. ಮಾಜಿ ಕೇಂದ್ರ ಸಚಿವ ಜಸ್ವಂತ್ ಸಿಂಗ್ ಅವರ ಪುತ್ರ ಮಾನವೇಂದ್ರ ಸಿಂಗ್‌ ಜಸೋಲ್ ಹೋಳಿ ನಂತರ ಕಾಂಗ್ರೆಸ್‌ ತೊರೆದು ಕೇಸರಿ ಪಕ್ಷಕ್ಕೆ ಮರಳುವ ಸಾಧ್ಯತೆ ಇದೆ. ಇದರಿಂದ ಸ್ವಲ್ಪ ಹಿನ್ನಡೆಯಾಗಲಿದೆ.

ಇನ್ನಷ್ಟು ಅಭ್ಯರ್ಥಿಗಳ ಆಯ್ಕೆ: ಕಾಂಗ್ರೆಸ್‌ನ ಚುನಾವಣಾ ಸಮಿತಿಯು ಅಭ್ಯರ್ಥಿಗಳ ಆಯ್ಕೆಗೆ ಮಂಗಳವಾರದಿಂದ ಸಭೆ ಆರಂಭಿಸಿದೆ. ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷದೊಂದಿಗಿನ ಮೈತ್ರಿಯ ಭಾಗವಾಗಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಹಿಂದಿನ ಕ್ಷೇತ್ರಗಳಾದ ರಾಯ್ಬರೇಲಿ ಮತ್ತು ಅಮೇಥಿ ಸೇರಿದಂತೆ ಯುಪಿಯ 17 ಸ್ಥಾನಗಳ ಬಗ್ಗೆ ಪಕ್ಷ ಅಂತಿಮ ತೀರ್ಮಾನ ತೆಗೆದುಕೊಳ್ಳಬಹುದು ಎಂದು ಮೂಲಗಳು ತಿಳಿಸಿವೆ. ಪಕ್ಷದ ಯುಪಿ ಘಟಕವು ಅಮೇಥಿಯಿಂದ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಅವರು ರಾಯ್ ಬರೇಲಿಯಿಂದ ಚುನಾವಣೆ ಕಣಕ್ಕೆ ಇಳಿಯಬೇಕು ಎಂದು ಹಠ ಹಿಡಿದಿವೆ.

ವಾರಾಣಸಿಯಿಂದ ಪ್ರಧಾನಿ ವಿರುದ್ಧ ಯುಪಿ ಘಟಕದ ಮುಖ್ಯಸ್ಥ ಅಜಯ್ ರೈ ಅವರನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಬುಧವಾರ ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಅಮ್ರೋಹಾ ಸಂಸದ ಡ್ಯಾನಿಶ್ ಅಲಿ ಅವರಿಗೆ ಅದೇ ಕ್ಷೇತ್ರದಿಂದ ಟಿಕೆಟ್ ಖಚಿತವಾಗಿದೆ. ಮಧ್ಯಪ್ರದೇಶದ ಹತ್ತಕ್ಕೂ ಹೆಚ್ಚು ಸೀಟುಗಳಿಗೆ ನಾಲ್ಕನೇ ಪಟ್ಟಿಯಲ್ಲಿ ಅಭ್ಯರ್ಥಿಗಳ ಹೆಸರು ಘೋಷಿಸುವ ನಿರೀಕ್ಷೆಯಿದೆ.  ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಅವರನ್ನು ರಾಜ್‌ಗಢದಿಂದ ಸ್ಪರ್ಧಿಸುವಂತೆ ಮನವೊಲಿಸುವಲ್ಲಿ ಕಾಂಗ್ರೆಸ್ ನಾಯಕತ್ವ ಯಶಸ್ವಿಯಾಗಿದೆ ಎಂದು ತಿಳಿದುಬಂದಿದೆ. ಮಾಜಿ ಕೇಂದ್ರ ಸಚಿವ ಅರುಣ್ ಯಾದವ್ ಅವರು ಗುಣಾದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ವಿರುದ್ಧ ಸ್ಪರ್ಧಿಸುವ ಸಾಧ್ಯತೆ ಇದೆ.

ಸಿಂಧ್ಯಾ ವಿರುದ್ಧ ಯಾರು?: 2019 ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ, ಸಿಂಧಿಯಾ ಅವರನ್ನು ಸೋಲಿಸಿದ್ದ ಸಂಸದ ಕೆ.ಪಿ. ಸಿಂಗ್ ಯಾದವ್ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಬೇಕೆಂದು ಮಾತುಕತೆ ನಡೆದಿತ್ತು. ಆದರೆ, ಮಾಜಿ ಉಪ ಮುಖ್ಯಮಂತ್ರಿ ಸುಭಾಷ್ ಯಾದವ್ ಅವರ ಪುತ್ರ ಅರುಣ್ ಯಾದವ್ ಅವರು ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ. ಅರುಣ್ ಅವರ ತವರು ಖಾಂಡ್ವಾ ಆಗಿದ್ದರೂ, 2009ರಲ್ಲಿ ಒಮ್ಮೆ ಗೆಲುವು ಸಾಧಿಸಿದ್ದ ಅವರು, 2014 ಮತ್ತು 2019 ರಲ್ಲಿ ಬಿಜೆಪಿಯ ನಂದಕುಮಾರ್ ಸಿಂಗ್ ಚೌಹಾಣ್ ವಿರುದ್ಧ ಸೋಲುಂಡಿದ್ದರು. ಗುಣಾದಲ್ಲಿ ಯಾದವ್ ಮತ್ತು ಇತರ ಒಬಿಸಿ ಸಮುದಾಯಗಳ ಗಣನೀಯ ಮತ ಇದೆ. ಕ್ಷೇತ್ರದಲ್ಲಿ ಸಹಕಾರಿ ಚಳವಳಿಯ ಪ್ರಭಾವಿ ನಾಯಕರು ಅರುಣ್‌ ಅವರ ತಂದೆ ಸುಭಾಷ್ ಯಾದವ್ ಅವರಿಗೆ ನಿಕಟವಾಗಿದ್ದರು. 

Tags:    

Similar News