ಸಂಸತ್ ಭವನದಲ್ಲಿ 'ಸೋರಿಕೆ' | 'ಹೊರಗೆ ಪ್ರಶ್ನೆಪತ್ರಿಕೆ ಸೋರಿಕೆ, ಒಳಗೆ ನೀರು ಸೋರಿಕೆ': ಪ್ರತಿಪಕ್ಷಗಳಿಂದ ವಾಗ್ದಾಳಿ

Update: 2024-08-01 13:12 GMT

ಹೊಸದಿಲ್ಲಿ, ಆ.1: ಹೊಸ ಸಂಸತ್ ಭವನದ ಮೊಗಸಾಲೆಯಲ್ಲಿ ನೀರು ಸೋರಿಕೆಯಾಗುತ್ತಿರುವ ಕುರಿತು ಗುರುವಾರ ವಿರೋಧ ಪಕ್ಷದ ನಾಯಕರು ಮೋದಿ ಸರಕಾರವನ್ನು ತರಾಟೆಗೆ ತೆಗೆದುಕೊಂಡರು. ಹಳೆಯ ಸಂಸತ್ತಿನ ʻಬಲಿಷ್ಟʼ ಕಟ್ಟಡವನ್ನು ಶ್ಲಾಘಿಸಿದರು.

ಕಾಂಗ್ರೆಸ್‌ ಸಂಸದ ಮಾಣಿಕ್ಕಂ ಟ್ಯಾಗೋರ್ ಅವರು ಹೊಸ ಸಂಸತ್ ಕಟ್ಟಡದ ಮೊಗಸಾಲೆಯಲ್ಲಿ ನೀರು ಸೋರಿಕೆಯಾಗುತ್ತಿರುವ ಮತ್ತು ಅದನ್ನು ಸಂಗ್ರಹಿಸಲು ಇರಿಸಿದ ಬಕೆಟ್‌ನ ವಿಡಿಯೋ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಲೋಕಸಭೆ ಯಲ್ಲಿ ಈ ವಿಷಯದ ಬಗ್ಗೆ ಚರ್ಚಿಸಲು ಅವರು ನೋಟಿಸ್ ನೀಡಿದರು. 

ವಿಡಿಯೋ ಹಂಚಿಕೊಂಡ ಟ್ಯಾಗೋರ್, ʻಹೊರಗೆ ಪ್ರಶ್ನೆಪತ್ರಿಕೆ ಸೋರಿಕೆ, ಒಳಗೆ ನೀರಿನ ಸೋರಿಕೆ. ಮೊಗಸಾಲೆಯಲ್ಲಿನ ಸೋರಿಕೆಯು ಹೊಸ ಕಟ್ಟಡದ ಸಮಸ್ಯೆಗಳನ್ನು ಎತ್ತಿ ತೋರಿಸುತ್ತದೆ. ಕಟ್ಟಡ ಪೂರ್ಣಗೊಂಡು ಕೇವಲ ಒಂದು ವರ್ಷ ಆಗಿದೆ,ʼ.

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ಈ ಬಗ್ಗೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ʻಹೊಸ ಸಂಸತ್‌ ಭವನಕ್ಕಿಂತ ಹಳೆಯ ಕಟ್ಟಡ ಉತ್ತಮವಾಗಿದೆ.ಅಲ್ಲಿ ಮಾಜಿ ಸಂಸದರು ಕೂಡ ಬಂದು ಭೇಟಿಯಾಗ ಬಹುದು.ಹೊಸ ಸಂಸತ್ ಭವನದಲ್ಲಿ ನೀರು ಸೋರಿಕೆ ನಿಲ್ಲುವವರೆಗೆ ಹಳೆಯ ಸಂಸತ್ ಕಟ್ಟಡಕ್ಕೆ ಏಕೆ ಹಿಂತಿರುಗಬಾರದು?,ʼ ಎಂದು ಎಕ್ಸ್‌ನಲ್ಲಿ ಬರೆದಿದ್ದು, ವಿಡಿಯೋ ಹಂಚಿಕೊಂಡಿದ್ದಾರೆ. 

ʻಬಿಜೆಪಿ ಸರ್ಕಾರ ನಿರ್ಮಿಸಿದ ಪ್ರತಿಯೊಂದು ಚಾವಣಿಯಿಂದಲೂ ನೀರು ತೊಟ್ಟಿಕ್ಕುವುದು ಅವರ ಉತ್ತಮ ವಿನ್ಯಾಸದ ಭಾಗವೇ ಅಥವಾ .. ಎಂದು ಜನರು ಕೇಳುತ್ತಿದ್ದಾರೆ,ʼ ಎಂದು ಯಾದವ್ ವಾಗ್ದಾಳಿ ನಡೆಸಿದರು.

ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ʻಹೊಸ ಸಂಸತ್ತಿನ ಮೊಗಸಾಲೆಯಲ್ಲಿ ನೀರು ಸೋರಿಕೆ ಆಗುತ್ತಿದೆ. ಈ ಕಟ್ಟಡ ನರೇಂದ್ರ ಮೋದಿಯವರ ಅಹಂಕಾರದ ಗುರುತಾಗಿರುವುದರಿಂದ, 2024 ರ ಲೋಕಸಭೆ ಫಲಿತಾಂಶದ ನಂತರ ಅದು ಅಲುಗಾಡಿದೆ,ʼ ಎಂದು ಎಕ್ಸ್‌ ನಲ್ಲಿ ಬರೆದಿದ್ದಾರೆ.

ಟಿಎಂಸಿ ಸಂಸದೆ ಸಾಗರಿಕಾ ಘೋಷ್, ʻಹೊಸ ಸಂಸತ್  ಕಟ್ಟಡ ಮುಖಮಂಟಪ ಮತ್ತು ಕಡಿದಾದ ಮೆಟ್ಟಿಲುಗಳನ್ನು ಹೊಂದಿಲ್ಲ.ಕಳೆದ ರಾತ್ರಿ ದೆಹಲಿಯಲ್ಲಿ ಮೇಘಸ್ಫೋಟ ಸಂಭವಿಸಿದಾಗ, ಗಟ್ಟಿಮುಟ್ಟಾದ ಹಳೆಯ ಸಂಸತ್ತಿನ ಕಟ್ಟಡ ನಮಗೆ ಆಶ್ರಯ ನೀಡಿತು,ʼ ಎಂದು ಹೇಳಿದ್ದಾರೆ.

ಕೆಲವು ಗಂಟೆಗಳ ಮಳೆ ನಂತರ ದಿಲ್ಲಿಯ ಸ್ಥಿತಿ ಹದಗೆಟ್ಟಿದೆ ಎಂದು ಕಾಂಗ್ರೆಸ್‌ನ ರಾಜ್ಯಸಭೆ ಸದಸ್ಯ ಸೈಯದ್ ನಸೀರ್ ಹುಸೇನ್ ಹೇಳಿದ್ದಾರೆ. ʻಸಂಸತ್‌ನಿಂದ ಹಿಡಿದು ಎಲ್ಲ ರಸ್ತೆಗಳು ಜಲಾವೃತವಾಗಿವೆ. 100 ವರ್ಷಗಳ ಹಿಂದೆ ನಿರ್ಮಿಸಿದ ಹಳೆಯ ಸಂಸತ್ತಿನ ಕಟ್ಟಡ ಸೋರಿಲ್ಲ. ಆದರೆ, ಒಂದು ವರ್ಷದ ಹಿಂದೆ ನಿರ್ಮಿಸಿದ ಹೊಸ ಕಟ್ಟಡದಲ್ಲಿ ಸೋರಿಕೆ ಆರಂಭವಾಗಿದೆ,ʼ ಎಂದು ಎಕ್ಸ್‌ ನಲ್ಲಿ ಬರೆದಿದ್ದಾರೆ.

Tags:    

Similar News