ಕೆನಡಾದಲ್ಲಿ ಭಾರತೀಯ ಮೂಲದ ಉದ್ಯಮಿಯನ್ನುಗುಂಡಿಕ್ಕಿ ಕೊಂದ ಲಾರೆನ್ಸ್ ಬಿಷ್ನೋಯ್ ಗ್ಯಾಂಗ್
ಅಮೆರಿಕದಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸಕ್ರಿಯ ಸದಸ್ಯ ಜಗ್ಗಾ ಅವರನ್ನು ರಾಜಸ್ಥಾನದಲ್ಲಿ ಪೊಲೀಸರು ಬಂಧಿಸಿದ ಒಂದು ದಿನದ ನಂತರ ಈ ಘಟನೆ ನಡೆದಿದೆ.
ಲಾರೆನ್ಸ್ ಬಿಷ್ಣೋಯಿ
ಕೆನಡಾದ ಅಬಾಟ್ಸ್‌ಫೋರ್ಡ್ ಮೂಲದ 68 ವರ್ಷದ ಭಾರತೀಯ ಮೂಲದ ಕೈಗಾರಿಕೋದ್ಯಮಿ ದರ್ಶನ್ ಸಿಂಗ್ ಸಹಸಿ ಅವರನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯರು ಗುಂಡಿಕ್ಕಿ ಕೊಲೆ ಮಾಡಿದ್ದಾರೆ.
ಬೆದರಿಕೆಗೆ ಹೆದರಿ ಹಣ ನೀಡಲು ನಿರಾಕರಿಸಿದ ಕಾರಣಕ್ಕೆ ಈ ಹತ್ಯೆ ನಡೆಸಲಾಗಿದೆ ಎಂದು ಗ್ಯಾಂಗ್‌ನ ಪ್ರಮುಖ ಸದಸ್ಯ ಗೋಲ್ಡಿ ಧಿಲ್ಲನ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ಹತ್ಯೆಯ ಹೊಣೆ ಹೊತ್ತುಕೊಂಡಿದ್ದಾನೆ.
ಈ ಘಟನೆ ಸೋಮವಾರ (ಅಕ್ಟೋಬರ್ 27) ಬ್ರಿಟಿಷ್ ಕೊಲಂಬಿಯಾದ ಅಬಾಟ್ಸ್‌ಫೋರ್ಡ್‌ನಲ್ಲಿರುವ ಸಹಸಿ ಅವರ ನಿವಾಸದ ಹೊರಗೆ ನಡೆದಿದೆ. ಅಮೆರಿಕದಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸಕ್ರಿಯ ಸದಸ್ಯ ಜಗ್ಗಾ ಅವರನ್ನು ರಾಜಸ್ಥಾನದಲ್ಲಿ ಪೊಲೀಸರು ಬಂಧಿಸಿದ ಒಂದು ದಿನದ ನಂತರ ಈ ಘಟನೆ ನಡೆದಿದೆ.
ಹಣ ನೀಡಲು ನಿರಾಕರಣೆ: ಕೊಲೆ
ಗ್ಯಾಂಗ್ ಸಹಸಿ ಅವರು ಮಾದಕವಸ್ತು ವ್ಯವಹಾರದಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ ಅವರಿಂದ ಹಣಕ್ಕಾಗಿ ಬೇಡಿಕೆ ಇಟ್ಟಿತ್ತು. ಸಹಸಿ ಅವರು ಹಣ ನೀಡಲು ನಿರಾಕರಿಸಿದಾಗ, ಗ್ಯಾಂಗ್ ಅವರನ್ನು ಹತ್ಯೆ ಮಾಡಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಸೋಮವಾರ ಬೆಳಿಗ್ಗೆ ಸಹಸಿ ತಮ್ಮ ಮನೆಯಿಂದ ಹೊರಬಂದು ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಕಾರಿನೊಳಗೆ ಹತ್ತಲು ಪ್ರಯತ್ನಿಸುತ್ತಿದ್ದಾಗ, ಅಲ್ಲಿ ಕಾಯುತ್ತಿದ್ದ ಹಂತಕನು ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡ ಸಹಸಿ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ.
ಯಾರು ದರ್ಶನ್ ಸಿಂಗ್ ಸಹಸಿ?
ಸಹಸಿ ಅವರು 1991 ರಲ್ಲಿ ಕೆನಡಾಕ್ಕೆ ವಲಸೆ ಬಂದವರು. ಆರಂಭದಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಿದ್ದ ಅವರು, ನಂತರ ಕಷ್ಟದಲ್ಲಿದ್ದ ಜವಳಿ ಮರುಬಳಕೆ ಘಟಕವನ್ನು ಸ್ವಾಧೀನಪಡಿಸಿಕೊಂಡು ಅದನ್ನು ಯಶಸ್ವಿ ಜಾಗತಿಕ ಕಂಪನಿಯಾಗಿ ಪರಿವರ್ತಿಸಿದರು. ಅವರು ಲೋಕೋಪಕಾರಿ ಚಟುವಟಿಕೆಗಳಲ್ಲಿಯೂ ಸಕ್ರಿಯರಾಗಿದ್ದರು. ಈ ಹತ್ಯೆಯು ಅಬಾಟ್ಸ್‌ಫೋರ್ಡ್ ಮತ್ತು ಕೆನಡಾದಲ್ಲಿರುವ ಪಂಜಾಬಿ ಸಮುದಾಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಮುದಾಯದ ಮುಖಂಡರು ಇದನ್ನು ಕೆನಡಾದಲ್ಲಿರುವ ಭಾರತೀಯ ವಲಸಿಗರ ಸುರಕ್ಷತೆಗೆ ಗಂಭೀರ ಬೆದರಿಕೆ ಎಂದು ಬಣ್ಣಿಸಿ, ತಕ್ಷಣ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ.
ಗಾಯಕನ ಮನೆ ಹೊರಗೂ ಗುಂಡಿನ ದಾಳಿ
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಪಂಜಾಬಿ ಗಾಯಕ ಚನ್ನಿ ನಟ್ಟನ್ ಅವರ ನಿವಾಸದ ಹೊರಗೆ ನಡೆದ ಗುಂಡಿನ ದಾಳಿಯ ಹೊಣೆಯನ್ನೂ ಹೊತ್ತುಕೊಂಡಿದೆ. ಗೋಲ್ಡಿ ಧಿಲ್ಲೋನ್ ಅವರ ಹೇಳಿಕೆಯ ಪ್ರಕಾರ, ನಟ್ಟನ್ ಅವರು ಗಾಯಕ ಸರ್ದಾರ್ ಖೇರಾ ಅವರೊಂದಿಗೆ ನಿಕಟ ಸಂಬಂಧ ಹೊಂದಿರುವುದರಿಂದ ಗುಂಡಿನ ದಾಳಿ ನಡೆಸಲಾಗಿದೆ. ಗ್ಯಾಂಗ್‌ಗೆ ನಟ್ಟನ್ ಜೊತೆ ವೈಯಕ್ತಿಕ ದ್ವೇಷವಿಲ್ಲವಾದರೂ, ಖೇರಾ ಅವರೊಂದಿಗೆ ಕೆಲಸ ಮಾಡುವ ಯಾವುದೇ ಗಾಯಕರು ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಗ್ಯಾಂಗ್ ಎಚ್ಚರಿಸಿತ್ತು.
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಎಂದರೆ ಯಾರು
ಕೆನಡಾದಲ್ಲಿ ಭಯೋತ್ಪಾದಕ ಸಂಘಟನೆಯಾಗಿ ಪಟ್ಟಿ ಮಾಡಲಾದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ವಿಶ್ವದ 700 ಕ್ಕೂ ಹೆಚ್ಚು ಶೂಟರ್‌ಗಳೊಂದಿಗೆ ಸಂಪರ್ಕ ಹೊಂದಿದೆ ಎನ್ನಲಾಗಿದೆ. ಇದು ರ‍್ಯಾಪರ್ ಮತ್ತು ರಾಜಕಾರಣಿ ಸಿಧು ಮೂಸೆವಾಲಾ ಅವರ ಹತ್ಯೆ ಸೇರಿದಂತೆ ಹಲವಾರು ಉನ್ನತ ಮಟ್ಟದ ಕೊಲೆಗಳಲ್ಲಿ ಭಾಗಿಯಾಗಿದೆ. ಇದು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಸಹ ಬೆದರಿಸಿದೆ ಮತ್ತು ಖಲಿಸ್ತಾನ್ ಪರ ಚಳುವಳಿಯೊಂದಿಗೆ ಸಂಪರ್ಕ ಹೊಂದಿದೆ ಎಂದು ಆರೋಪಿಸಲಾಗಿದೆ.