ಕೋಟಾ: ಜೆಇಇ ಆಕಾಂಕ್ಷಿ ನೇಣು ಬಿಗಿದು ಆತ್ಮಹತ್ಯೆ

ಜನವರಿಯಿಂದ ಕೋಟಾದಲ್ಲಿ ಕೋಚಿಂಗ್ ವಿದ್ಯಾರ್ಥಿಗಳ 13ನೇ ಶಂಕಿತ ಆತ್ಮಹತ್ಯೆ ಪ್ರಕರಣ ಇದಾಗಿದೆ. 2023 ರಲ್ಲಿ ಕೋಟಾದಲ್ಲಿ 26 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು.;

Update: 2024-07-04 15:09 GMT

ಕೋಟಾ, ಜು.4 - 16 ವರ್ಷದ ಎಂಜಿನಿಯರಿಂಗ್ ಆಕಾಂಕ್ಷಿಯೊಬ್ಬರು ವಸತಿಗೃಹದ ಕೊಠಡಿಯೊಳಗೆ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಜನವರಿಯಿಂದ ಕೋಟಾದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕಿತ ಹದಿಮೂರನೇ ಪ್ರಕರಣ ಇದಾಗಿದೆ. 2023 ರಲ್ಲಿ ಕೋಟಾದಲ್ಲಿ 26 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. 

ಬಿಹಾರದ ನಳಂದ ಜಿಲ್ಲೆಯ ಸಂದೀಪ್ ಕುಮಾರ್ ಕುರ್ಮಿ, ಕಳೆದ ಎರಡು ವರ್ಷಗಳಿಂದ ಕೋಟಾದಲ್ಲಿ ಜಂಟಿ ಪ್ರವೇಶ ಪರೀಕ್ಷೆ(ಜೆಇಇ)ಗೆ ತರಬೇತಿ ಪಡೆಯುತ್ತಿದ್ದರು. ಮಹಾವೀರ್ ನಗರ -3 ರಲ್ಲಿ ಕೊಠಡಿಯೊಂದರಲ್ಲಿ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 

ಗುರುವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಆತನ ಸಹಪಾಠಿ ಕೋಣೆಗೆ ಹೋಗಿದ್ದಾನೆ. ಯಾವುದೇ ಪ್ರತಿಕ್ರಿಯೆ ಬಾರದ್ದರಿಂದ ಕಿಟಕಿಯಿಂದ ಇಣುಕಿ ನೋಡಿದಾಗ ಕುರ್ಮಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ ಎಂದು ಮಹಾವೀರ್ ನಗರ ಎಸ್‌ಎಚ್‌ಒ ಮಹೇಂದ್ರ ಮಾರು ತಿಳಿಸಿದ್ದಾರೆ. 

ಸಹಪಾಠಿ ಪಿಜಿಯ ವಾರ್ಡನ್‌ ಗೆ ಮಾಹಿತಿ ನೀಡಿದ್ದು, ಅವರು ಪೊಲೀಸರಿಗೆ ವಿಷಯ ತಿಳಿಸಿದರು. ಕೊಠಡಿಯಿಂದ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. 

ಕುರ್ಮಿಯ ಸಹೋದರ ಸಂಜೀತ್, ನೀಟ್‌ಗೆ ತರಬೇತಿ ಪಡೆಯುತ್ತಿದ್ದು, ದಾದಾಬರಿ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಸಹೋದರರು ನಾಲ್ಕು ವರ್ಷಗಳ ಹಿಂದೆ ಪೋಷಕರನ್ನು ಕಳೆದುಕೊಂಡಿದ್ದು, ಅವರ ಚಿಕ್ಕಪ್ಪ ಶಿಕ್ಷಣಕ್ಕೆ ಹಣ ನೀಡುತ್ತಿದ್ದರು ಎಂದು ಹೆಡ್ ಕಾನ್‌ಸ್ಟೆಬಲ್ ಮಹಾವೀರ್ ಪ್ರಸಾದ್ ತಿಳಿಸಿದ್ದಾರೆ. 

ಪೊಲೀಸರ ಪ್ರಕಾರ, ಕುರ್ಮಿ ಇದ್ದ ಕೋಣೆಯ ಸೀಲಿಂಗ್ ಫ್ಯಾನ್‌ನಲ್ಲಿ ಯಾವುದೇ ಆತ್ಮಹತ್ಯೆ ತಡೆ ಸಾಧನವನ್ನು ಅಳವಡಿಸಿರಲಿಲ್ಲ. ಇಂಥ ಪ್ರಕರಣಗಳನ್ನು ತಡೆಗಟ್ಟಲು ಕೋಚಿಂಗ್ ಹಬ್‌ನಲ್ಲಿರುವ ಎಲ್ಲ ಹಾಸ್ಟೆಲ್‌ಗಳು ಮತ್ತು ಪಿಜಿಗಳು ತಮ್ಮ ಕೊಠಡಿಗಳಲ್ಲಿ ಆತ್ಮಹತ್ಯೆ ತಡೆ ಸಾಧನಗಳನ್ನು ಅಳವಡಿಸುವುದನ್ನು ಜಿಲ್ಲಾಡಳಿತ ಕಡ್ಡಾಯಗೊಳಿಸಿದೆ. 

ಗುರುವಾರ ಮರಣೋತ್ತರ ಪರೀಕ್ಷೆ ನಂತರ ಕುರ್ಮಿ ಅವರ ದೇಹವನ್ನು ಸಹೋದರನಿಗೆ ಹಸ್ತಾಂತರಿಸಲಾಯಿತು. ಅಸ್ವಾಭಾವಿಕ ಸಾವು ಪ್ರಕರಣವನ್ನು ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಎಸ್‌ಎಚ್‌ಒ ಹೇಳಿದರು.

ಬಿಹಾರದ ಮೂವರು ಆತ್ಮಹತ್ಯೆ: ಕೋಟಾದಲ್ಲಿ ಇತ್ತೀಚೆಗೆ ಆತ್ಮಹತ್ಯೆ ಇಬ್ಬರು ಬಿಹಾರ ಮೂಲದ ವಿದ್ಯಾರ್ಥಿಗಳಾಗಿದ್ದಾರೆ. ಜೂನ್ 26 ರಂದು ಬಿಹಾರದ ಭಾಗಲ್ಪುರದ ನೀಟ್ ಆಕಾಂಕ್ಷಿ ಹೃಷಿತ್ ಕುಮಾರ್ ಅಗರವಾಲ್ (17) ಹಾಗೂ ಬಿಹಾರದ ಮೋತಿಹಾರಿಯ ಆಯುಷ್ ಜೈಸ್ವಾಲ್ (17) ಕೋಟಾದ ಪಿಜಿ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. 

Tags:    

Similar News