Kolkata rape and murder: ಬಿಕ್ಕಟ್ಟಿನಲ್ಲಿ ಆಡಳಿತಾರೂಢ ಟಿಎಂಸಿ; ಹೊಸ ರಾಜಕೀಯ ಶಕ್ತಿಗೆ ಅವಕಾಶ

ಬರ್ಬರ ಘಟನೆಯು ರಾಜಕೀಯವನ್ನು ಮೀರಿದ ನಿರಂತರವಾದ ಸಾಮೂಹಿಕ ಚಳವಳಿಯನ್ನು ಹುಟ್ಟುಹಾಕಿದೆ. ಜನರು ನ್ಯಾಯ ಮತ್ತು ಹೊಣೆಗಾರಿಕೆಯನ್ನು ಬಯಸುತ್ತಿದ್ದು, ನೆಲ ಮಟ್ಟದ ತೀವ್ರತೆ ಮತ್ತು ರಾಜಕೀಯ ಬ್ಯಾನರ್‌ಗಳು ಇಲ್ಲದೆ ಇರುವುದರಿಂದ, ಮಮತಾ ಬ್ಯಾನರ್ಜಿ ಅವರ ವಿರುದ್ಧದ ಅಸಾಧಾರಣ ನಾಗರಿಕ ಚಳವಳಿಯಾಗಿ ಮಾರ್ಪಟ್ಟಿದೆ.;

Update: 2024-09-09 10:13 GMT

ಆರ್‌.ಜಿ. ಕರ್ ಆಸ್ಪತ್ರೆಯಲ್ಲಿ ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಹತ್ಯೆಯಿಂದ ಪಶ್ಚಿಮ ಬಂಗಾಳದಲ್ಲಿ ಭಾರಿ ಸಾರ್ವಜನಿಕ ಆಕ್ರೋಶ ಸೃಷ್ಟಿಯಾಗಿದೆ. ಆಡಳಿತಾರೂಢ ಟಿಎಂಸಿ ಬಿಕ್ಕಟ್ಟಿನಲ್ಲಿ ಸಿಲುಕಿದ್ದು, 2011ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಾಯಕತ್ವಕ್ಕೆ ಸವಾಲೆಸೆದಿದೆ. 

ಈ ಬರ್ಬರ ಘಟನೆಯು ರಾಜಕೀಯವನ್ನು ಮೀರಿದ ನಿರಂತರವಾದ ಸಾಮೂಹಿಕ ಚಳವಳಿಯನ್ನು ಹುಟ್ಟುಹಾಕಿತು. ಜನರು ನ್ಯಾಯ ಮತ್ತು ಹೊಣೆಗಾರಿಕೆಯನ್ನು ಬಯಸುತ್ತಿದ್ದು, ನೆಲ ಮಟ್ಟದ ತೀವ್ರತೆ ಮತ್ತು ರಾಜಕೀಯ ಬ್ಯಾನರ್‌ಗಳು ಇಲ್ಲದೆ ಇರುವುದರಿಂದ, ಮಮತಾ ಬ್ಯಾನರ್ಜಿ ಅವರ ವಿರುದ್ಧದ ಅಸಾಧಾರಣ ನಾಗರಿಕ ಚಳವಳಿಯಾಗಿ ಮಾರ್ಪಟ್ಟಿದೆ. ಅವರ ಆಡಳಿತದಲ್ಲಿ ನಿರ್ವಹಣೆ ಮತ್ತು ಸುರಕ್ಷತೆ ಕೊರತೆ ಬಗ್ಗೆ ಜನರ ಹತಾಶೆಯನ್ನು ಬಹಿರಂಗಗೊಳಿಸಿದೆ. 

ನಿರಂತರ ಚಳವಳಿ: ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ಟಿಎಂಸಿ ಮತ್ತು ವಿರೋಧ ಪಕ್ಷವಾದ ಬಿಜೆಪಿ ಮತ್ತು ಸಿಪಿಐ(ಎಂ) ಬಗ್ಗೆ ಭ್ರಮನಿರಸನದಿಂದ ಜನಸಾಮಾನ್ಯರು, ವಿದ್ಯಾರ್ಥಿಗಳು ಹೊಸ ರಾಜಕೀಯ ಪಕ್ಷಕ್ಕೆ ಫಲವತ್ತಾದ ನೆಲವನ್ನು ಸೃಷ್ಟಿಸಿದ್ದಾರೆ ಎಂದು ರಾಜಕೀಯ ವೀಕ್ಷಕರು ನಂಬುತ್ತಾರೆ. 

ʻ ಸಾಂಪ್ರದಾಯಿಕ ರಾಜಕೀಯ ಬ್ಯಾನರ್‌ಗಳಿಂದ ಮುಕ್ತವಾಗಿರುವುದು ಆಂದೋಲನದ ಶಕ್ತಿಯಾಗಿದೆ. ನ್ಯಾಯ, ಪಾರದರ್ಶಕತೆ ಮತ್ತು ಪರಿಣಾಮಕಾರಿ ಆಡಳಿತಕ್ಕಾಗಿ ಬೇಡಿಕೆ ಇಟ್ಟಿದೆ. ಅಸ್ತಿತ್ವದಲ್ಲಿರುವ ವಿರೋಧ ಪಕ್ಷಗಳಲ್ಲಿ ನಾಯಕತ್ವದ ನಿರ್ವಾತವನ್ನು ಬಹಿರಂಗಪಡಿಸಿದೆ. ಹೊಸ ಪಕ್ಷ ಪ್ರತಿಭಟನಾಕಾರರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬಹುದು,ʼ ಎಂದು ರಾಜಕೀಯ ವಿಜ್ಞಾನಿ ಮೈದುಲ್ ಇಸ್ಲಾಂ ಹೇಳಿದರು.

ತೀವ್ರ ಸಾರ್ವಜನಿಕ ಪ್ರತಿಕ್ರಿಯೆ: ವೈದ್ಯೆ ಹತ್ಯೆಗೆ ಸಾರ್ವಜನಿಕ ಪ್ರತಿಕ್ರಿಯೆ ತೀವ್ರವಾಗಿತ್ತು. ಸಾವಿರಾರು ವೈದ್ಯಕೀಯ ವೃತ್ತಿಪರರು, ವಿದ್ಯಾರ್ಥಿ ಗಳು, ಕಾರ್ಯಕರ್ತರು ಮತ್ತು ಜನಸಾಮಾನ್ಯರು ಕೋಲ್ಕತ್ತಾ ಮತ್ತು ಇತರ ನಗರಗಳ ಬೀದಿಗಳಲ್ಲಿ ದುಃಖ ಮತ್ತು ಕೋಪದಿಂದ ಪ್ರತಿಭಟನೆಗೆ ಮುಂದಾದರು. 

ಆರಂಭದಲ್ಲಿ ಟಿಎಂಸಿ ಪ್ರತಿಕ್ರಿಯೆ ʻವಿಳಂಬ ಮತ್ತು ವಿವಾದಾತ್ಮಕʼವಾಗಿತ್ತು; ಪ್ರಕರಣದ ನಿರ್ವಹಣೆ ಅಸಮರ್ಪಕ ಮತ್ತು ಪ್ರತಿಕ್ರಿಯಾತ್ಮಕವಾಗಿತ್ತು ಎಂದು ವ್ಯಾಪಕ ಟೀಕೆ ವ್ಯಕ್ತವಾಗಿದೆ. ಸಿಎಂ ಅವರಿಂದ ಪ್ರಕರಣದ ಸಾರ್ವಜನಿಕ ಖಂಡನೆ ಮತ್ತು ತ್ವರಿತ ನ್ಯಾಯದ ಭರವಸೆಗಳು ಸಾರ್ವಜನಿಕ ಕೋಪವನ್ನು ತಣಿಸಲು ಅಥವಾ ಅವರ ಆಡಳಿತವು ನಾಗರಿಕರನ್ನು ರಕ್ಷಿಸುತ್ತದೆ ಎಂಬ ನಂಬಿಕೆಯನ್ನು ಪುನಃಸ್ಥಾಪಿಸಲು ವಿಫಲವಾಗಿವೆ. 

ಮುಚ್ಚಿಡುವಿಕೆ ಪ್ರಯತ್ನ: ʻಕೋಲ್ಕತ್ತಾ ಪೊಲೀಸರು ಪ್ರಮುಖ ಆರೋಪಿಯನ್ನು 24 ಗಂಟೆಗಳ ಒಳಗೆ ಬಂಧಿಸಿದರು. ಆದರೆ, ಆಡಳಿತಾತ್ಮಕ ತಪ್ಪು ಹೆಜ್ಜೆಗಳು ಮತ್ತು ಸಂತ್ರಸ್ತೆಯ ಪೋಷಕರ ಆರೋಪಗಳು ಸರ್ಕಾರ ಏನನ್ನೋ ಮುಚ್ಚಿಡುತ್ತಿದೆ ಎಂದು ಸಾರ್ವಜನಿಕರು ಭಾವಿಸಲು ಕಾರಣವಾಯಿತು,ʼ ಎಂದು ಹಿರಿಯ ಟಿಎಂಸಿ ನಾಯಕರೊಬ್ಬರು ಹೇಳಿದರು.

ಟಿಎಂಸಿ ವಕ್ತಾರ ಕೃಷನು ಮಿತ್ರಾ, ಪಕ್ಷ ʻನ್ಯಾಯ ದೊರಕಿಸಿಕೊಡಲು ಬದ್ಧವಾಗಿದೆ. ಬಿಜೆಪಿ ಆಡಳಿತದ ರಾಜ್ಯಗಳಿಗಿಂತ ಭಿನ್ನವಾಗಿ ಪಶ್ಚಿಮ ಬಂಗಾಳದಲ್ಲಿ ಆಂದೋಲನಕ್ಕೆ ಸ್ಥಳವಿದೆ ಎಂಬುದನ್ನು ಪ್ರತಿಭಟನೆಗಳು ಸಾಬೀತುಪಡಿಸುತ್ತವೆ,ʼ ಎಂದು ಹೇಳಿದರು. 

ಆದರೆ, ಪ್ರಕರಣವು ಟಿಎಂಸಿಯನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದೆ. ಪಕ್ಷಕ್ಕೆ ಬೆಂಬಲದ ಹೊರತಾಗಿಯೂ, ದುರಂತದ ಲಾಭ ಪಡೆಯಲು ವಿರೋಧ ಶಕ್ತಿಗಳು ಕೆಲಸ ಮಾಡುತ್ತಿವೆ ಎಂದು ಹೇಳಿದರು.

ಟಿಎಂಸಿಯಲ್ಲಿ ಅಭಿಪ್ರಾಯಭೇದ: ಘಟನೆಯು ಆಡಳಿತಾರೂಢ ಟಿಎಂಸಿಯೊಳಗಿನ ಭಿನ್ನಾಭಿಪ್ರಾಯವನ್ನೂ ಹೊರ ತಂದಿದೆ. ರಾಜ್ಯಸಭೆ ಟಿಎಂಸಿ ಉಪನಾಯಕ ಸುಖೇಂದು ಶೇಖರ್ ರೇ ಅವರು 'ರಿಕ್ಲೇಮ್ ದಿ ನೈಟ್' ಕಾರ್ಯಕ್ರಮವನ್ನು ಸಾರ್ವಜನಿಕವಾಗಿ ಬೆಂಬಲಿಸಿದ್ದರಿಂದ ಹಾಗೂ ಆರ್‌.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಮತ್ತು ಕೋಲ್ಕತ್ತಾ ಪೊಲೀಸ್ ಕಮಿಷನರ್ ವಿನೀತ್ ಗೋಯಲ್ ಅವರನ್ನು ಪ್ರಶ್ನಿಸಬೇಕೆಂದು ಸಿಬಿಐಗೆ ಹೇಳಿದ್ದರಿಂದ, ಪಕ್ಷದಿಂದ ಟೀಕೆ ಎದುರಿಸಬೇಕಾಯಿತು. ಅವರ ಸಹೋದ್ಯೋಗಿ ಜವಾಹರ್ ಸರ್ಕಾರ್ ಅವರು ರಾಜ್ಯಸಭೆಗೆ ರಾಜೀನಾಮೆ ಘೋಷಿಸಿದರು.

ʻಈ ಘಟನೆ ಪಕ್ಷಕ್ಕೆ ದೊಡ್ಡ ಸವಾಲಾಗಿದೆ. ಏಕೆಂದರೆ ಇದು ರಾಜಕೀಯೇತರ ಶಕ್ತಿಯಿಂದ ಬರುತ್ತಿದೆ,ʼ ಎಂದು ಟಿಎಂಸಿ ನಾಯಕರೊಬ್ಬರು ಹೇಳಿದರು. 

ವಿರೋಧ ಪಕ್ಷಗಳಿಂದ ಟೀಕೆ: ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಸಿಪಿಐ(ಎಂ), ಟಿಎಂಸಿಯನ್ನು ಟೀಕಿಸಲು ದುರಂತವನ್ನು ಬಳಸಿಕೊಂಡಿವೆ. ಮಹಿಳೆಯರಿಗೆ ಸುರಕ್ಷತೆ ನೀಡುವಲ್ಲಿ ಆಡಳಿತ ಪಕ್ಷ ವಿಫಲವಾಗಿದೆ ಎಂದು ಆರೋಪಿಸಿದವು. ʻಮಹಿಳೆಯರಿಗೆ ಸುರಕ್ಷಿತ ವಾತಾವರಣ ಕಲ್ಪಿಸುವಲ್ಲಿ ಟಿಎಂಸಿ ವಿಫಲವಾಗಿದೆ. ಗೃಹ ಸಚಿವರೂ ಆಗಿರುವ ಬ್ಯಾನರ್ಜಿ ತಕ್ಷಣವೇ ರಾಜೀನಾಮೆ ನೀಡಬೇಕು,ʼ ಎಂದು ಬಿಜೆಪಿಯ ಹಿರಿಯ ನಾಯಕ ಸುವೇದು ಅಧಿಕಾರಿ ಮೆರವಣಿಗೆಯಲ್ಲಿ ಹೇಳಿದರು. ಸಿಪಿಐ(ಎಂ), ಆಡಳಿತ ವೈಫಲ್ಯಗಳನ್ನು ಒತ್ತಿ ಹೇಳಿದೆ.

ಹೊಸ ರಾಜಕೀಯ ಶಕ್ತಿಗೆ ಅವಕಾಶ: ನಾಗರಿಕ ಸಮಾಜ, ಜನಸಾಮಾನ್ಯರು ಮತ್ತು ವೈದ್ಯರು ಆಯೋಜಿಸಿದ ಸಾಮೂಹಿಕ ಚಳವಳಿಗಳಲ್ಲಿ ರಾಜಕೀಯ ಪಕ್ಷಗಳು ಪ್ರವೇಶಿಸುವಲ್ಲಿ ವಿಫಲವಾಗಿವೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. 

ʻಘಟನೆ ನಾಗರಿಕ ಸಮಾಜದ ಶಕ್ತಿಯನ್ನು ಮತ್ತೆ ಮುನ್ನೆಲೆಗೆ ತಂದಿದೆ. ಕಳೆದ 13 ವರ್ಷಗಳ ಟಿಎಂಸಿ ಆಡಳಿತದಲ್ಲಿ ಇದು ಗೈರುಹಾಜರಾಗಿತ್ತು. ಬಿಜೆಪಿ ಮತ್ತು ಸಿಪಿಐ(ಎಂ) ಮುನ್ನಡೆ ಸಾಧಿಸಲು ವಿಫಲವಾಗಿವೆ. ಜನಾಂದೋಲನದಲ್ಲಿ ಜನರು ಟಿಎಂಸಿಗೆ ಸವಾಲು ಹಾಕಲು ಹೊಸ ರಾಜಕೀಯ ಶಕ್ತಿಗಾಗಿ ಹಾತೊರೆಯುತ್ತಿದ್ದಾರೆ,ʼ ಎಂದು ರಾಜಕೀಯ ವಿಜ್ಞಾನಿ ಬಿಸ್ವನಾಥ್ ಚಕ್ರವರ್ತಿ ಹೇಳುತ್ತಾರೆ.

ಇಂಥದ್ಧೇ ಅಭಿಪ್ರಾಯ ವ್ಯಕ್ತಪಡಿಸುವ ರಾಜಕೀಯ ವಿಶ್ಲೇಷಕ ಸುಮನ್ ಭಟ್ಟಾಚಾರ್ಯ, ಟಿಎಂಸಿಯ ನಗರ ಪ್ರದೇಶದ ಮಹಿಳಾ ಮತಗಳ ಮೇಲೆ ಪರಿಣಾಮವಾಗಿದ್ದರೂ, ಇದರಿಂದ ಸಿಪಿಐ(ಎಂ) ಮತ್ತು ಬಿಜೆಪಿಗೆ ಲಾಭವಾಗುವ ಸಾಧ್ಯತೆಯಿಲ್ಲ,ʼ ಎಂದು ಹೇಳಿದರು.

ʻಟಿಎಂಸಿಯನ್ನು ಮಣಿಸಲು ಹೊಸ ರಾಜಕೀಯ ಪಕ್ಷದ ಅಗತ್ಯವಿದೆ. ಬಿಜೆಪಿ ಬಗ್ಗೆ ನಿರಾಸಕ್ತ ಉದಾರವಾದಿ ಮತದಾರರು ಮತ್ತು ಟಿಎಂಸಿಯಿಂದ ಭ್ರಮನಿರಸನಗೊಂಡ ಮತದಾರರಿಗೆ ಪರ್ಯಾಯ ಆಗಬಹುದು,ʼ ಎಂದರು.

ಹೊಸ ರಾಜಕೀಯ ಶಕ್ತಿಯೊಂದನ್ನು ಹುಟ್ಟುಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ. ಆದರೆ, ಈ ಪ್ರಯತ್ನ ಯಶಸ್ವಿಯಾಗುತ್ತದೆಯೇ ಎಂದು ಕಾಯ್ದು ನೋಡಬೇಕಿದೆ.

ಮಹಿಳಾ ಸ್ವಾತಂತ್ರ್ಯಕ್ಕೆ ಹೋರಾಟ: 'ರಿಕ್ಲೇಮ್ ದಿ ನೈಟ್' ಉಪಕ್ರಮವನ್ನು ಪ್ರಾರಂಭಿಸಿದ ರಿಮ್‌ಜಿಮ್ ಸಿನ್ಹಾ, ಇದು ಮಹಿಳಾ ಸ್ವಾತಂತ್ರ್ಯಕ್ಕಾಗಿ ಹೊಸ ಹೋರಾಟ ಎಂದು ಬಣ್ಣಿಸಿದರು. 

ʻನಾನು ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ. ಆದರೆ, ಎಲ್ಲಾ ರಾಜಕೀಯ ಪಕ್ಷಗಳು ಮಹಿಳೆಯರ ಹಕ್ಕುಗಳಿಗೆ ಹೋರಾಡುವಲ್ಲಿ ವಿಫಲವಾಗಿವೆ. ಪಕ್ಷಗಳು ಮಹಿಳೆಯರ ಹಕ್ಕುಗಳಿಗೆ ಹೋರಾಡುವ ಬಗ್ಗೆ ಗಂಭೀರವಾಗಿರದಿದ್ದರೆ, ನಾವೇ ಹೋರಾಡುತ್ತೇವೆ,ʼ ಎಂದು ಹೇಳಿದರು. 


Tags:    

Similar News