ಐವರು ಸೈನಿಕರ ಹತ್ಯೆಗೆ ಪ್ರತೀಕಾರ: ಸರ್ಕಾರ
ದಾಳಿಯ ಹೊಣೆ ಹೊತ್ತಿರುವ ಭಯೋತ್ಪಾದಕರ ಬೇಟೆಗೆ ಈಗಾಗಲೇ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಸೇನೆ ಹೇಳಿದೆ.
ಜಮ್ಮು-ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಐವರು ಸೇನಾ ಸಿಬ್ಬಂದಿ ಹತ್ಯೆಗೀಡಾಗಿದ್ದು, ಪ್ರತೀಕಾರ ತೆಗೆದು ಕೊಳ್ಳಲಾಗುತ್ತದೆ ಮತ್ತು ಘಟನೆ ಹಿಂದಿರುವ ದುಷ್ಟ ಶಕ್ತಿಗಳನ್ನು ಭಾರತ ಸೋಲಿಸುತ್ತದೆ ಎಂದು ರಕ್ಷಣಾ ಕಾರ್ಯದರ್ಶಿ ಗಿರಿಧರ್ ಅರಮನೆ ಮಂಗಳವಾರ (ಜುಲೈ 9) ಹೇಳಿದ್ದಾರೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೈನಿಕರ ಹತ್ಯೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸಶಸ್ತ್ರ ಪಡೆಗಳು ಈ ಪ್ರದೇಶದಲ್ಲಿ ಶಾಂತಿಯನ್ನು ತರಲು ನಿರ್ಧರಿಸಿವೆ ಎಂದು ಹೇಳಿದರು.
ಸೋಮವಾರ (ಜುಲೈ 8) ಕಥುವಾದಲ್ಲಿನ ಬದ್ನೋಟಾ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ರಕ್ಷಣಾ ಪಡೆ ಮೇಲೆ ಶಸ್ತ್ರಸಜ್ಜಿತ ಭಯೋತ್ಪಾದಕರ ಗುಂಪು ಹೊಂಚುದಾಳಿ ನಡೆಸಿದ್ದು, ಐವರು ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ.
ಶೋಧ ಕಾರ್ಯಾಚರಣೆ: ಭಯೋತ್ಪಾದಕರ ಬೇಟೆಗೆ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ.
ʻಭಯೋತ್ಪಾದಕ ದಾಳಿಯಲ್ಲಿ ಐವರು ವೀರ ಸೈನಿಕರನ್ನು ಕಳೆದುಕೊಂಡಿದ್ದರಿಂದ ದುಃಖಿತನಾಗಿದ್ದೇನೆ,ʼ ಎಂದು ರಕ್ಷಣಾ ಸಚಿವರು ಎಕ್ಸ್‌ನಲ್ಲಿ ಹೇಳಿದ್ದಾರೆ.
ʻಮೃತ ಸೈನಿಕರ ಕುಟುಂಬಗಳಿಗೆ ನನ್ನ ಸಂತಾಪ ಸಲ್ಲಿಸುತ್ತೇನೆ. ಈ ಕಷ್ಟದ ಸಮಯದಲ್ಲಿ ರಾಷ್ಟ್ರ ಅವರೊಂದಿಗೆ ದೃಢವಾಗಿ ನಿಂತಿದೆ. ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆ ನಡೆಯುತ್ತಿದೆ ಮತ್ತು ನಮ್ಮ ಸೈನಿಕರು ಈ ಪ್ರದೇಶದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ತರಲು ನಿರ್ಧರಿಸಿದ್ದಾರೆ,ʼ ಎಂದು ಹೇಳಿದರು.
ʻದಾಳಿಯಲ್ಲಿ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ,ʼ ಎಂದು ಸಿಂಗ್ ಹೇಳಿದರು.
ರಕ್ಷಣಾ ಕಾರ್ಯದರ್ಶಿ ಅರಮನೆ ಕೂಡ ದಾಳಿಯಲ್ಲಿ ಸೈನಿಕರ ಸಾವಿಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ ಮತ್ತು ಅವರ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.
ʻದೇಶಕ್ಕೆ ಅವರ ನಿಸ್ವಾರ್ಥ ಸೇವೆಯನ್ನು ಸ್ಮರಿಸಲಾಗುತ್ತದೆ ಮತ್ತು ಅವರ ಸಾವಿಗೆ ಪ್ರತೀಕಾರ ತೆಗೆದುಕೊಳ್ಳಲಾಗುವುದು.ದಾಳಿಯ ಹಿಂದಿನ ದುಷ್ಟ ಶಕ್ತಿಗಳನ್ನು ಭಾರತ ಸೋಲಿಸುತ್ತದೆ,ʼ ಎಂದು ಎಕ್ಸ್ ನಲ್ಲಿ ಹೇಳಿದ್ದಾರೆ.