ಹೊಸದಿಲ್ಲಿ: ಕೇರಳದಲ್ಲಿ 2017ರಲ್ಲಿ ನಡೆದ ನಟಿ ಮೇಲಿನ ಹಲ್ಲೆ ಪ್ರಕರಣದ ಪ್ರಮುಖ ಆರೋಪಿ ಸುನೀಲ್ ಎನ್. ಎಸ್. ಗೆ ಸುಪ್ರೀಂ ಕೋರ್ಟ್ ಮಂಗಳವಾರ ಜಾಮೀನು ನೀಡಿದೆ.
ಈ ಪ್ರಕರಣದಲ್ಲಿ ನಟ ದಿಲೀಪ್ ಕೂಡ ಆರೋಪಿ. ತಮ್ಮ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ಕೇರಳ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುನೀಲ್ ಅಲಿಯಾಸ್ ಪಲ್ಸರ್ ಸುನೀಲ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎ.ಎಸ್. ಓಕಾ ಮತ್ತು ಪಂಕಜ್ ಮಿಥಾಲ್ ಅವರ ಪೀಠ ವಿಚಾರಣೆ ನಡೆಸುತ್ತಿದೆ.
ಸುನಿಲ್ ಏಳು ವರ್ಷದಿಂದ ಸೆರೆಯಲ್ಲಿರುವುದನ್ನು ಮತ್ತು ಪ್ರಕರಣದ ವಿಚಾರಣೆ ಶೀಘ್ರದಲ್ಲೇ ಮುಕ್ತಾಯಗೊಳ್ಳುವ ಸಾಧ್ಯತೆಯಿಲ್ಲದೆ ಇರುವುದನ್ನು ಪೀಠ ಪರಿಗಣಿಸಿದೆ. ಸುನಿಲ್ ಬಿಡುಗಡೆಗೆ ಜಾಮೀನು ಷರತ್ತು ವಿಧಿಸಲು ಒಂದು ವಾರದೊಳಗೆ ವಿಚಾರಣೆ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಪ್ರಕರಣದ ವಿವರ: ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರಗಳ ನಟಿಯನ್ನು ಫೆಬ್ರವರಿ 17, 2017 ರಂದು ರಾತ್ರಿ ಅಪಹರಿಸಿ, ಕಾರಿನಲ್ಲಿ ಎರಡು ಗಂಟೆ ಕಾಲ ಕಿರುಕುಳ ನೀಡಲಾಗಿತ್ತು. ಇಡೀ ಕೃತ್ಯವನ್ನು ಚಿತ್ರೀಕರಿಸಿ, ಆಕೆಯನ್ನು ಬ್ಲ್ಯಾಕ್ ಮೇಲ್ ಮಾಡಲು ಪ್ರಯತ್ನಿಸಲಾಗಿತ್ತು.ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದಿಲೀಪ್ ಸೇರಿದಂತೆ ಹಲವರನ್ನು ಬಂಧಿಸಿದ್ದರು. ದಿಲೀಪ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.ಕೇರಳ ಹೈಕೋರ್ಟ್ ಜೂನ್ 3 ರಂದು ಜಾಮೀನು ವಜಾಗೊಳಿಸಿ, 25,000 ರೂ.ದಂಡ ವಿಧಿಸಿತ್ತು.