ಭಾರತದ 51ನೇ ಮುಖ್ಯ ನ್ಯಾಯಮೂರ್ತಿಯಾಗಿ ಸಂಜೀವ್ ಖನ್ನಾ ಪ್ರಮಾಣ ವಚನ ಸ್ವೀಕಾರ
ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ಅಧ್ಯಕ್ಷ ದ್ರೌಪದಿ ಮುರ್ಮು ಪ್ರಮಾಣ ವಚನ ಬೋಧಿಸಿದರು;
ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಸೋಮವಾರ (ನವೆಂಬರ್ 11ರಂದು) ಭಾರತದ 51ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನ್ಯಾಯಮೂರ್ತಿ ಖನ್ನಾ ಅವರಿಗೆ ಪ್ರಮಾಣ ವಚನ ಬೋಧಿಸಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಿತು. ಆರು ತಿಂಗಳಿಗೂ ಹೆಚ್ಚು ಕಾಲ ಸಿಜೆಐ ಆಗಿ ಸೇವೆ ಸಲ್ಲಿಸಲಿರುವ ನ್ಯಾಯಮೂರ್ತಿ ಖನ್ನಾ ಅವರು ಮೇ 13, 2025 ರಂದು ಅಧಿಕಾರದಿಂದ ನಿವೃತ್ತರಾಗಲಿದ್ದಾರೆ.
ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಭಾನುವಾರ (ನವೆಂಬರ್ 10) ತಮ್ಮ 65 ನೇ ವಯಸ್ಸಿನಲ್ಲಿ ನಿವೃತ್ತಿ ಹೊಂದಿದ್ದರು.
ನ್ಯಾಯಮೂರ್ತಿ ಖನ್ನಾ ಅವರ ಬಗ್ಗೆ
ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಮೇ 14, 1960 ರಂದು ಜನಿಸಿದ್ದಾರೆ. ಅವರು ದೆಹಲಿ ವಿಶ್ವವಿದ್ಯಾಲಯದ ಕ್ಯಾಂಪಸ್ ಲಾ ಸೆಂಟರ್‌ನಲ್ಲಿ ಕಾನೂನು ಅಭ್ಯಾಸ ಮಾಡಿದ್ದರು. ದೆಹಲಿ ಹೈಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಳ್ಳುವ ಮೊದಲು ಅವರು ವಕೀಲರಾಗಿ ಸೇವೆ ಸಲ್ಲಿಸಿದ್ದರು. ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ (ನಲ್ಸಾ) ಕಾರ್ಯನಿರ್ವಾಹಕ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದರು.
ನ್ಯಾಯಮೂರ್ತಿ ಖನ್ನಾ ಅವರನ್ನು 2019ರ ಜನವರಿಯಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಕೊಲಿಜಿಯಂ ನೇಮಕ ಮಾಡಿತ್ತು. ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರಾಗಿ ಅವರು ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಮುಖಂಡ ಮತ್ತು ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಜಾಮೀನು ಅರ್ಜಿಗಳ ವಿಚಾರಣೆ ನಡೆಸಿದ್ದರು. ಇದೇ ರೀತಿ ಹಲವಾರು ರಾಜಕೀಯ ಸೂಕ್ಷ್ಮ ಪ್ರಕರಣಗಳನ್ನು ನಿರ್ವಹಿಸಿದ್ದರು.
ಖನ್ನಾ ಅವರಿದ್ದ ಪೀಠವು ಮೇ ತಿಂಗಳಲ್ಲಿ ಕೇಜ್ರಿವಾಲ್ ಅವರಿಗೆ ಮಧ್ಯಂತರ ಜಾಮೀನು ನೀಡಿತು. ಸಂವಿಧಾನ ಪೀಠದ ಭಾಗವಾಗಿಯೂ ಹಲವಾರು ಪ್ರಕರಣಗಳಲ್ಲಿ, ನ್ಯಾಯಮೂರ್ತಿ ಖನ್ನಾ ಅವರು ತೀರ್ಪು ನೀಡಿದ್ದರು. ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370 ನೇ ವಿಧಿಯನ್ನು ಹಿಂತೆಗೆದುಕೊಳ್ಳುವುದು ಪ್ರಮುಖವಾಗಿತ್ತು. ಅಲ್ಲದೇ ಚುನಾವಣಾ ಬಾಂಡ್‌ಗಳ ಪ್ರಕರಣ ಸೇರಿದಂತೆ ಹಲವಾರು ತೀರ್ಪುಗಳನ್ನು ನೀಡಿದ್ದರು.
ನ್ಯಾಯಮೂರ್ತಿ ಖನ್ನಾ ಅವರ ಪೀಠವು ವಿದ್ಯುನ್ಮಾನ ಮತದಾನ ಯಂತ್ರಗಳು (ಇವಿಎಂ) ಮತ್ತು ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರಯಲ್ಸ್ (ವಿವಿಪ್ಯಾಟ್) ಗೆ ಪ್ರಕರಣದಲ್ಲೂ ಕೋರ್ಟ್ ತೀರ್ಪಿನ ಭಾಗವಾಗಿದ್ದರು.