Supreme court CJI | ನೂತನ ಸಿಜೆಐ ನ್ಯಾ.ಸಂಜೀವ್‌ ಖನ್ನಾ; ಮಹತ್ವದ ತೀರ್ಪುಗಳೇನು?

Update: 2024-10-25 07:44 GMT

ಭಾರತದ ಸರ್ವೋಚ್ಛ ನ್ಯಾಯಾಲಯದ 51 ನೇ ಮುಖ್ಯ ನ್ಯಾಯಮೂರ್ತಿಯಾಗಿ(ಸಿಜೆಐ) ನ.11 ರಂದು ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಪದಗ್ರಹಣ ಮಾಡಲಿದ್ದಾರೆ. ನ್ಯಾ.ಸಂಜೀವ್ ಖನ್ನಾ ಅವರನ್ನು ಮುಂದಿನ ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೇಮಕ ಮಾಡಿ ಆದೇಶಿಸಿದ್ದಾರೆ.

ಹಾಲಿ ಸಿಜೆಐ ಡಿ.ವೈ.ಚಂದ್ರಚೂಡ್ ನಂತರ ಸೇವಾ ಹಿರಿತನದಲ್ಲಿ ಎರಡನೇ ಸ್ಥಾನದಲ್ಲಿದ್ದ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ಅ.17 ರಂದು ಕಾನೂನು ಸಚಿವಾಲಯಕ್ಕೆ ಡಿ.ವೈ. ಚಂದ್ರಚೂಡ್ ಅವರು ಶಿಫಾರಸು ಮಾಡಿದ್ದರು.

1960 ರಲ್ಲಿ ಜನಿಸಿರುವ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ದೆಹಲಿಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದರು. 1983 ರಲ್ಲಿ ದೆಹಲಿ ವಕೀಲರ ಸಂಘದಲ್ಲಿ ನೋಂದಣಿಯಾಗಿ ವಕೀಲಿಕೆ ವೃತ್ತಿ ಆರಂಭಿಸಿದ್ದರು.

ನ್ಯಾಯಾಧೀಶರಾಗಿ ಸೇವೆ

ದೆಹಲಿಯ ತೀಸ್ ಹಜಾರಿ ನ್ಯಾಯಾಲಯದಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ ಬಳಿಕ ದೆಹಲಿ ಹೈಕೋರ್ಟ್ ಹಾಗೂ ವಿವಿಧ ನ್ಯಾಯಾಧೀಕರಣಗಳಲ್ಲಿ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು.

ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರನ್ನು 2005 ರಲ್ಲಿ ದೆಹಲಿ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಲಾಯಿತು. 2006 ರಲ್ಲಿ ಅವರನ್ನು ಕಾಯಂಗೊಳಿಸಲಾಯಿತು.

ಸಂಜೀವ್ ಖನ್ನಾ ಅವರು ನೀಡಿದ ತೀರ್ಪು, ಮಹತ್ತರ ಆದೇಶಗಳಿಂದಾಗಿ 2019 ರಲ್ಲಿ ಅವರನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕ ಮಾಡಲಾಯಿತು. ಚುನಾವಣಾ ಬಾಂಡ್ ರದ್ದು, ಜಮ್ಮು ಕಾಶ್ಮೀರದ 370 ನೇ ವಿಧಿ ರದ್ದತಿ ಸೇರಿದಂತೆ ಸುಪ್ರೀಂಕೋರ್ಟ್ ನೀಡಿದ ಹಲವು ಮಹತ್ವದ ತೀರ್ಪುಗಳಲ್ಲಿ ನ್ಯಾ. ಸಂಜೀವ್ ಖನ್ನಾ ಅವರೂ ಇದ್ದರು. ಅವರು 2025 ಮೇ 13 ರಂದು ಸೇವೆಯಿಂದ ನಿವೃತ್ತರಾಗಲಿದ್ದು, ಕೇವಲ ಆರು ತಿಂಗಳು ಮಾತ್ರ ಸಿಜೆಐ ಹುದ್ದೆ ನಿಭಾಯಿಸಲಿದ್ದಾರೆ.

ನ್ಯಾಯಮೂರ್ತಿ ಸಂಜೀವ್‌ ಖನ್ನಾ ಅವರು 1973ರ ಕೇಶವಾನಂದ ಭಾರತಿ ಪ್ರಕರಣದಲ್ಲಿ ಸಂವಿಧಾನದ ಮೂಲ ಸಿದ್ಧಾಂತ ಪ್ರತಿಪಾದಿಸುವ ಮಹತ್ವದ ತೀರ್ಪು ನೀಡಿದ್ದ ದಿವಂಗತ ನ್ಯಾಯಮೂರ್ತಿ ಎಚ್.ಆರ್. ಖನ್ನಾ ಅವರ ಸೋದರಳಿಯ.

ನ್ಯಾಯಮೂರ್ತಿ ಖನ್ನಾ ಅವರು ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರೂ ಕೂಡ ಆಗಿದ್ದಾರೆ. ಜೊತೆಗೆ ಮಧ್ಯಪ್ರದೇಶದ ಭೋಪಾಲ್ನಲ್ಲಿರುವ ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿಯ ಆಡಳಿತ ಮಂಡಳಿಯ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಹಾಲಿ ಸಿಜೆಐ ಡಿ.ವೈ. ಚಂದ್ರಚೂಡ್‌ ಅವರು ನ.10 ರಂದು ಸೇವೆಯಿಂದ ನಿವೃತ್ತಿಯಾಗುತ್ತಿದ್ದು, 11 ರಂದು ಸಂಜೀವ್‌ ಖನ್ನಾ ಅವರು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಗಮನಾರ್ಹ ತೀರ್ಪುಗಳು

ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಸುಪ್ರೀಂಕೋರ್ಟ್ನಲ್ಲಿ ಕೆಲವು ಗಮನಾರ್ಹ ತೀರ್ಪುಗಳಲ್ಲಿ ಭಾಗಿಯಾಗಿದ್ದಾರೆ.

2019ರ ಆರ್‌ಟಿಐ ತೀರ್ಪು ಖನ್ನಾ ಅವರ ಮಹತ್ವದ ತೀರ್ಪಿನಲ್ಲಿ ಒಂದು. ನ್ಯಾಯಾಂಗದ ಸ್ವಾತಂತ್ರ್ಯವು ಮಾಹಿತಿ ಹಕ್ಕಿಗೆ ವಿರುದ್ಧವಾಗಿಲ್ಲ ಎಂದು ತೀರ್ಪು ಕೊಡುವ ಮೂಲಕ ನ್ಯಾಯಾಂಗದೊಳಗೆ ಹೊಣೆಗಾರಿಕೆಯನ್ನು ಬಲಗೊಳಿಸಿದರು.

2023ರಲ್ಲಿ ಶಿಲ್ಪಾ ಶೈಲೇಶ್ ವರ್ಸಸ್ ವರುಣ್ ಶ್ರೀನಿವಾಸನ್ ಪ್ರಕರಣದಲ್ಲಿ ಸಂವಿಧಾನದ 142 ನೇ ವಿಧಿಯಡಿ ವಿಚ್ಛೇದನ ನೀಡುವ ಸುಪ್ರೀಂಕೋರ್ಟ್ ಅಧಿಕಾರವನ್ನು ನ್ಯಾಯಮೂರ್ತಿ ಖನ್ನಾ ಅವರು ದೃಢಪಡಿಸಿದ್ದರು.

2023ರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸುವ ಕೇಂದ್ರದ 2019 ರ ನಿರ್ಧಾರವನ್ನು ಎತ್ತಿಹಿಡಿದ ಐವರು ನ್ಯಾಯಮೂರ್ತಿಗಳ ಪೀಠದಲ್ಲಿ ಖನ್ನಾ ಅವರು ಇದ್ದರು.

2024ರಲ್ಲಿ ವಿದ್ಯುನ್ಮಾನ ಮತಯಂತ್ರಗಳ ಬಳಕೆಯನ್ನು ಎತ್ತಿಹಿಡಿಯುವ ಹಾಗೂ ವಿವಿ ಪ್ಯಾಟ್ ಪರಿಶೀಲನೆಗಾಗಿ ಮಾಡಿದ ಮನವಿಯನ್ನು ವಜಾಗೊಳಿಸಿದ್ದರು.

ರಾಜಕೀಯ ಪಕ್ಷಗಳು ದೇಣಿಗೆ ಸ್ವೀಕರಿಸಲು ಜಾರಿಗೆ ತಂದಿದ್ದ ಚುನಾವಣಾ ಬಾಂಡ್ ಯೋಜನೆಯನ್ನು ಅಸಂವಿಧಾನಿಕ ಎಂದು ಘೋಷಿಸಿದ ಐವರು ನ್ಯಾಯಮೂರ್ತಿಗಳ ಪೀಠದ ಭಾಗವಾಗಿದ್ದರು.

ದೆಹಲಿ ಅಬಕಾರಿ ನೀತಿ ಹಗರಣದ ಪ್ರಮುಖ ಆರೋಪಿಯಾಗಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಲೋಕಸಭೆ ಚುನಾವಣೆ ಪ್ರಚಾರಕ್ಕಾಗಿ ಮಧ್ಯಂತರ ಜಾಮೀನು ನೀಡಿದ್ದರು.

Tags:    

Similar News