ಕಾಂಗ್ರೆಸ್‌ನಿಂದ ಮತಗಳ್ಳತನ ವರದಿ ಬಿಡುಗಡೆ: ಬೆಂಗಳೂರು ಸೆಂಟ್ರಲ್​ನಲ್ಲಿ 1,00,250 ಮತಗಳ ಆಕ್ರಮ ಆರೋಪ

ಈ ವರದಿಯು ಕರ್ನಾಟಕ, ಮಹಾರಾಷ್ಟ್ರದನಿರ್ದಿಷ್ಟ ಕ್ಷೇತ್ರಗಳಲ್ಲಿ ನಡೆದಿರುವ ಅಕ್ರಮಗಳ ಮೇಲೆ ಬೆಳಕು ಚೆಲ್ಲಿದ್ದು, ಅಕ್ರಮ ನಡೆದಿದೆ ಎಂಬ ಕುರಿತು ಮಾಹಿತಿಗಳನ್ನು ಬಿಡುಗಡೆ ಮಾಡಿದೆ.;

Update: 2025-08-07 10:36 GMT

2024ರ ಸಾರ್ವತ್ರಿಕ ಚುನಾವಣೆಗಳಲ್ಲಿ "ಬೃಹತ್​​ ಅಕ್ರಮ" ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಲೋಕಸಭೆಯಲ್ಲಿ ಪ್ರತಿಪಕ್ಷಗಳ ನಾಯಕ ರಾಹುಲ್​ ಗಾಂಧಿ 'ವೋಟ್ ಚೋರಿ' (ಮತಗಳ್ಳತನ) ಎಂಬ ಶೀರ್ಷಿಕೆಯಡಿಯಲ್ಲಿ ತನಿಖಾ ವರದಿಯೊಂದನ್ನು ಬಿಡುಗಡೆ ಮಾಡಿದೆ.

ಬಿಜೆಪಿ ಚುನಾವಣಾ ಆಯೋಗವನ್ನು ಬಳಸಿಕೊಂಡು ವ್ಯವಸ್ಥಿತವಾಗಿ ಈ ಅಕ್ರಮಗಳನ್ನು ನಡೆಸಿದೆ ಎಂದು ವರದಿಯು ಗಂಭೀರವಾಗಿ ಆರೋಪಿಸಿದೆ. ಈ ವರದಿಯು ಕರ್ನಾಟಕ, ಮಹಾರಾಷ್ಟ್ರದನಿರ್ದಿಷ್ಟ ಕ್ಷೇತ್ರಗಳಲ್ಲಿ ನಡೆದಿರುವ ಅಕ್ರಮಗಳ ಮೇಲೆ ಬೆಳಕು ಚೆಲ್ಲಿದೆ. "ಚುನಾವಣಾ ಆಯೋಗವು ಇನ್ನು ಪ್ರಜಾಪ್ರಭುತ್ವದ ಕಾವಲುಗಾರನಾಗಿ ಉಳಿದಿಲ್ಲ, ಅದು ಕಾರ್ಯಾಂಗದ ಕೈಗೊಂಬೆಯಾಗಿದೆ" ಎಂದು ವರದಿಯಲ್ಲಿ ಬರೆಯಲಾಗಿದೆ.

ಬೆಂಗಳೂರು ಸೆಂಟ್ರಲ್: ಲಕ್ಷಾಂತರ 'ಕದ್ದ ಮತಗಳ' ಪತ್ತೆ?

ಕಾಂಗ್ರೆಸ್ ಪಕ್ಷವು ತಾನು ಸ್ವತಃ ನಡೆಸಿದ ತನಿಖೆಯಲ್ಲಿ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಮಹದೇವಪುರ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯನ್ನು ಪರಿಶೀಲಿಸಿದೆ. ಈ ತನಿಖೆಯ ಪ್ರಕಾರ, ಸುಮಾರು 1,00,250 "ಕದ್ದ ಮತಗಳು" ಪತ್ತೆಯಾಗಿರುವುದಾಗಿ ವರದಿ ಹೇಳಿದೆ. ನಕಲಿ ಮತದಾರರು, ಅಸ್ತಿತ್ವದಲ್ಲಿಲ್ಲದ ವಿಳಾಸಗಳು, ಒಂದೇ ಮನೆಯ ವಿಳಾಸದಲ್ಲಿ ಹತ್ತಾರು ಮತದಾರರ ನೋಂದಣಿ (ಉದಾಹರಣೆಗೆ, ಒಂದು ಬೂತ್​ನ ವಿಳಾಸದಲ್ಲಿ 68 ಮತದಾರರು ನೋಂದಣಿ) ಮತ್ತು ಹೊಸ ಮತದಾರರ ನೋಂದಣಿಗಾಗಿ ಬಳಸುವ ಫಾರ್ಮ್-6 ರ ದುರ್ಬಳಕೆಯಂತಹ ಹಲವು ಅಕ್ರಮಗಳನ್ನು ವರದಿಯು ಪಟ್ಟಿ ಮಾಡಿದೆ. ಲೊಕಸಭಾ ಚುನಾವಣೆ ವೇಳೆ ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಕೇವಲ 10 ನಿಮಿಷಗಳಲ್ಲಿ 65,000 ಮತಗಳು ಚಲಾವಣೆಯಾಗಿವೆ.

ಮಹಾರಾಷ್ಟ್ರದಲ್ಲಿ ಆರೋಪ

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣದ ಅಸಹಜ ಏರಿಕೆಯನ್ನು ವರದಿಯು ಎತ್ತಿ ತೋರಿಸಿದೆ. ಸಂಜೆ 5 ಗಂಟೆಗೆ ಶೇ. 58.22 ರಷ್ಟಿದ್ದ ಮತದಾನ, ಅಂತಿಮವಾಗಿ ಶೇ. 66.05 ಕ್ಕೆ ಏರಿದೆ. ಅಂದರೆ, ಕೊನೆಯ ಕೆಲವು ಗಂಟೆಗಳಲ್ಲಿ ಸುಮಾರು 76 ಲಕ್ಷ ಹೆಚ್ಚುವರಿ ಮತಗಳು ಚಲಾವಣೆಯಾಗಿವೆ. ಈ ಹೆಚ್ಚುವರಿ ಮತದಾನವು ಬಿಜೆಪಿ ದುರ್ಬಲವಾಗಿದ್ದ 85 ವಿಧಾನಸಭಾ ಕ್ಷೇತ್ರಗಳಲ್ಲಿಯೇ ಹೆಚ್ಚಾಗಿ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಬಗ್ಗೆ ಪ್ರಶ್ನಿಸಿದಾಗ, ಚುನಾವಣಾ ಆಯೋಗವು ಸಿಸಿಟಿವಿ ದೃಶ್ಯಾವಳಿಗಳನ್ನು 45 ದಿನಗಳ ನಂತರ ನಾಶಪಡಿಸುವಂತೆ ನಿಯಮಗಳನ್ನು ಬದಲಾಯಿಸಿದೆ. ಇದು ಸಾಕ್ಷ್ಯ ನಾಶದ ಪ್ರಯತ್ನ ಎಂದು ಕಾಂಗ್ರೆಸ್ ಹೇಳಿದೆ.

ರಾಷ್ಟ್ರವ್ಯಾಪಿ ಹೋರಾಟಕ್ಕೆ ಕರೆ

ಈ ಅಕ್ರಮಗಳು ಕೇವಲ ಕೆಲವು ಕ್ಷೇತ್ರಗಳಿಗೆ ಸೀಮಿತವಾಗಿಲ್ಲ, ಬದಲಿಗೆ ರಾಷ್ಟ್ರಮಟ್ಟದಲ್ಲಿ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಿವೆ ಎಂದು ಕಾಂಗ್ರೆಸ್ ವಾದಿಸಿದೆ. ರಾಷ್ಟ್ರಮಟ್ಟದಲ್ಲಿ, ಬಿಜೆಪಿ 33,000ಕ್ಕಿಂತ ಕಡಿಮೆ ಮತಗಳ ಅಂತರದಿಂದ 25 ಲೋಕಸಭಾ ಸ್ಥಾನಗಳನ್ನು ಗೆದ್ದಿದ್ದು, ಇಂತಹ ಸಣ್ಣ ಅಂತರದ ಗೆಲುವಿಗೆ ಈ ಅಕ್ರಮಗಳೇ ಕಾರಣ ಎಂದು ವರದಿಯು ಹೇಳಿದೆ. ಇದು ಕೇವಲ ಮತಗಳ ಕಳ್ಳತನವಲ್ಲ, ಇದು ಭಾರತದ ಸಂವಿಧಾನದ ಮೇಲಿನ ಹಲ್ಲೆ ಎಂದು ಕಾಂಗ್ರೆಸ್ ಹೇಳಿದೆ. ಈ ವಂಚನೆಯನ್ನು ಜನರ ಮುಂದಿಟ್ಟು, ಸಂಸತ್ತಿನಿಂದ ಹಿಡಿದು ಜನರ ನ್ಯಾಯಾಲಯದವರೆಗೆ ಹೋರಾಡುವುದಾಗಿ ಕಾಂಗ್ರೆಸ್ ಘೋಷಿಸಿದೆ.

Tags:    

Similar News