ಸುಪ್ರೀಂ ಕೋರ್ಟ್‌ನ 52ನೇ ಮುಖ್ಯ ನ್ಯಾಯಮೂರ್ತಿಯಾಗಿ ಬಿ.ಆರ್. ಗವಾಯಿ ಪ್ರಮಾಣ ವಚನ ಸ್ವೀಕಾರ
ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೂತನ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.;
ನ್ಯಾಯಮೂರ್ತಿಯಾಗಿ ಬಿ.ಆರ್. ಗವಾಯಿ ಪ್ರಮಾಣ ವಚನ ಸ್ವೀಕರಿಸಿದರು.
ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಇಂದು ಸುಪ್ರೀಂ ಕೋರ್ಟ್‌ನ 52ನೇ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದರು.
ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೂತನ ಮುಖ್ಯ ನ್ಯಾಯಮೂರ್ತಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ನ್ಯಾಯಮೂರ್ತಿ ಗವಾಯಿ ಅವರು ಹಿಂದಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಈ ಹುದ್ದೆಯಲ್ಲಿ ಅವರು ಈ ವರ್ಷದ ನವೆಂಬರ್ 23ರವರೆಗೆ ಇರಲಿದ್ದಾರೆ.
ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ನಂತರ ಈ ಉನ್ನತ ಸ್ಥಾನವನ್ನು ಅಲಂಕರಿಸಿದ ದಲಿತ ಸಮುದಾಯದ ಎರಡನೇ ನ್ಯಾಯಾಧೀಶ ಎಂಬ ಹೆಗ್ಗಳಿಕೆಗೆ ಬಿ.ಆರ್. ಗವಾಯಿ ಪಾತ್ರರಾಗಿದ್ದಾರೆ. ನಿನ್ನೆ ನಿವೃತ್ತರಾದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರ ಸ್ಥಾನಕ್ಕೆ ನ್ಯಾಯಮೂರ್ತಿ ಗವಾಯಿ ಅವರನ್ನು ನೇಮಿಸಲಾಗಿದೆ.
1960ರ ನವೆಂಬರ್ 24ರಂದು ಜನಿಸಿದ ಜಸ್ಟಿಸ್ ಗವಾಯಿ ಅವರು 1985ರಲ್ಲಿ ವಕೀಲ ವೃತ್ತಿಯನ್ನು ಪ್ರಾರಂಭಿಸಿದರು. ಆರಂಭದಲ್ಲಿ ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠದಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದ ಅವರು, 2003ರಲ್ಲಿ ಬಾಂಬೆ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ನಂತರ 2005ರಲ್ಲಿ ಕಾಯಂ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದರು. 2019ರಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ಉನ್ನತಿಗೆ ಏರಿದರು.
ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು ಈ ಹಿಂದೆ ವಿವಿಧ ರಾಜ್ಯಗಳ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದ ಆರ್.ಎಸ್. ಗವಾಯಿ ಅವರ ಪುತ್ರರಾಗಿದ್ದಾರೆ. ಇಂದು ಅವರು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ್ದು, ನ್ಯಾಯಾಂಗ ಕ್ಷೇತ್ರದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದ್ದಾರೆ.