ದೋಡಾದಲ್ಲಿ ಗುಂಡಿನ ಚಕಮಕಿ, ಅಧಿಕಾರಿ ಸೇರಿದಂತೆ 4 ಸೇನಾ ಸಿಬ್ಬಂದಿ ಸಾವು
ದೋಡಾದ ದೇಸಾ ಅರಣ್ಯ ವಲಯದ ಧಾರಿ ಗೋಟೆ ಉರರಬಾಗಿಯಲ್ಲಿ ಶೋಧ ಕಾರ್ಯಾಚರಣೆ ವೇಳೆ ಗುಂಡಿನ ಚಕಮಕಿ ನಡೆದಿದೆ.;
ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಮಂಗಳವಾರ (ಜುಲೈ 16) ಮುಂಜಾನೆ ನಡೆದ ಶಸ್ತ್ರಸಜ್ಜಿತ ಭಯೋತ್ಪಾದಕರೊಂದಿಗಿನ ಗುಂಡಿನ ಚಕಮಕಿಯಲ್ಲಿ ಅಧಿಕಾರಿ ಸೇರಿದಂತೆ ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ.
ಸೋಮವಾರ ತಡ ರಾತ್ರಿ ದೋಡಾ ಪಟ್ಟಣದಿಂದ ಸುಮಾರು 55 ಕಿಮೀ ದೂರದಲ್ಲಿರುವ ದೇಸಾ ಅರಣ್ಯ ವಲಯದ ಧರಿ ಗೋಟೆ ಉರರಬಾಗಿಯಲ್ಲಿ ರಾಷ್ಟ್ರೀಯ ರೈಫಲ್ಸ್ ಮತ್ತು ಜಮ್ಮು-ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆ ಪಡೆಗಳು ಜಂಟಿ ಶೋಧ ಕಾರ್ಯಾಚರಣೆ ಆರಂಭಿಸಿದಾಗ, ಚಕಮಕಿ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಂಡಿನ ವಿನಿಮಯದ ನಂತರ, ಭಯೋತ್ಪಾದಕರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ, ಅಧಿಕಾರಿ ನೇತೃತ್ವದ ಪಡೆ ಅವರನ್ನು ಬೆನ್ನಟ್ಟಿತು. ರಾತ್ರಿ 9 ಗಂಟೆ ಸುಮಾರಿಗೆ ಅರಣ್ಯ ಪ್ರದೇಶದಲ್ಲಿ ಮತ್ತೊಂದು ಗುಂಡಿನ ಚಕಮಕಿ ನಡೆ ಯಿತು. ಚಕಮಕಿಯಲ್ಲಿ ಐವರು ಸೈನಿಕರು ಮತ್ತು ಅಧಿಕಾರಿ ಗಾಯಗೊಂಡರು ಎಂದು ಸೇನೆ ತಿಳಿಸಿದೆ.
ಹೆಚ್ಚುವರಿ ಪಡೆಗಳನ್ನು ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಭಯೋತ್ಪಾದಕರ ಉಪಸ್ಥಿತಿ ಮಾಹಿತಿ ಮೇರೆಗೆ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.