ಜಾರ್ಖಂಡ್: ಹೇಮಂತ್‌ ಸೊರೆನ್‌ ಹಕ್ಕು ಮಂಡನೆ

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಐದು ತಿಂಗಳು ಸೆರೆವಾಸ ಅನುಭವಿಸಿದ್ದ ಹೇಮಂತ್‌ ಸೊರೆನ್‌, ಹೈಕೋರ್ಟ್ ಜಾಮೀನು ನೀಡಿದ ನಂತರ ಜೂನ್ 28 ರಂದು ಜೈಲಿನಿಂದ ಬಿಡುಗಡೆಯಾಗಿದ್ದರು.

Update: 2024-07-04 09:33 GMT

ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೆನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರನ್ನು ಭೇಟಿ ಮಾಡಿರುವ ಜೆಎಂಎಂ ನಾಯಕ ಹೇಮಂತ್ ಸೊರೆನ್ ಅವರು ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ.

ಇದಕ್ಕೂ ಮುನ್ನ ಚಂಪೈ ಸೊರೆನ್ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಮೈತ್ರಿಕೂಟದ ನಾಯಕರು ಮತ್ತು ಶಾಸಕರು ಹೇಮಂತ್ ಸೊರೆನ್ ಅವರನ್ನು ಜೆಎಂಎಂ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲು ಸರ್ವಾನುಮತದಿಂದ ನಿರ್ಧರಿಸಿದರು. 

ʻಜೆಎಂಎಂ ನೇತೃತ್ವದ ಮೈತ್ರಿಕೂಟದ ನಿರ್ಧಾರದಂತೆ, ನಾನು ರಾಜೀನಾಮೆ ನೀಡಿದ್ದೇನೆ. ನಮ್ಮ ಮೈತ್ರಿ ಪ್ರಬಲವಾಗಿದೆ,ʼ ಎಂದು ರಾಜಭವನದಿಂದ ಹೊರಬಂದ ನಂತರ ಚಂಪೈ ಸೊರೆನ್ ಹೇಳಿದರು. 

ʻಹೇಮಂತ್ ಸೋರೆನ್ ಅವರಿಗೆ ಏನು ಮಾಡಲಾಯಿತು ಎಂಬುದು ಎಲ್ಲರಿಗೂ ತಿಳಿದಿದೆ. ನನಗೆ ಮೈತ್ರಿಕೂಟ ಜವಾಬ್ದಾರಿಯನ್ನು ವಹಿಸಿತ್ತು. ಈಗ ಮೈತ್ರಿಕೂಟವು ಹೇಮಂತ್ ಸೊರೆನ್ ಅವರ ಪರವಾಗಿ ನಿರ್ಧರಿಸಿದೆ,ʼ ಎಂದು ಹೇಳಿದರು.

ಸುಮಾರು ಐದು ತಿಂಗಳು ಸೆರೆಮನೆಯಲ್ಲಿದ್ದ ಹೇಮಂತ್‌ ಸೊರೆನ್‌ ಅವರಿಗೆ ಹೈಕೋರ್ಟ್ ಜಾಮೀನು ನೀಡಿದ ನಂತರ, ಜೂನ್ 28 ರಂದು ಬಿಡುಗಡೆಗೊಂಡರು. ಅವರು ಜನವರಿ 31ರಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

Tags:    

Similar News