HMPV ಕೊರೊನಾದಷ್ಟು ಅಪಾಯಕಾರಿಯೇ? ಇಲ್ಲಿದೆ ಎಲ್ಲ ಪಶ್ನೆಗಳಿಗೆ ಉತ್ತರ

HMPV : ಭಾರತದಲ್ಲಿ ಇದುವರೆಗೆ ಮೂರು ಎಚ್ಎಂಪಿವಿ ಪ್ರಕರಣಗಳು ವರದಿಯಾಗಿವೆ. ಕರ್ನಾಟಕದಲ್ಲಿ ಎರಡು ಮತ್ತು ಗುಜರಾತ್‌ನಲ್ಲಿ ಒಂದು ಕೇಸ್‌ ದಾಖಲಾಗಿದೆ. ಕರ್ನಾಟಕದಲ್ಲಿ ವೈರಸ್ ಪತ್ತೆಯಾದ ಎರಡೂ ಶಿಶುಗಳು ಚೇತರಿಸಿಕೊಂಡಿವೆ.;

Update: 2025-01-07 01:30 GMT
HMPV Virus

ಬೆಂಗಳೂರಿನಲ್ಲಿ ಜನವರಿ 6ರಂದು ಹ್ಯೂಮನ್ ಮೆಟಾನ್ಯುಮೊವೈರಸ್‌ (HMPV Virus) ಪ್ರಕರಣಗಳು ಪತ್ತೆಯಾಗಿವೆ. ಮೊದಲಿಗೆ ಎಂಟು ತಿಂಗಳ ಹಸುಳೆಯ ದೇಹದಲ್ಲಿ ಈ ವೈರಸ್‌ ಪತ್ತೆಯಾಗಿದೆ. ಬಳಿಕ ಮತ್ತೊಂದು ಮಗುವಿನಲ್ಲೂ ಕಂಡು ಬಂದಿದೆ. ಚೀನಾದಲ್ಲಿ ಮೊದಲ ಬಾರಿಗೆ ಕಂಡು ಬಂದ ಈ ಸೋಂಕು ಇದೀಗ ಭಾರತದಲ್ಲಿಯೂ ಹರಡಲು ಶುರುವಾಗಿದೆ. ಹೀಗಾಗಿ ಭಾರತದಲ್ಲಿ ಹೊಸ ವೈರಸ್‌ ಬಗ್ಗೆ ಚರ್ಚೆ ಶುರುವಾಗಿದೆ

ಭಾರತದಲ್ಲಿ ಇದುವರೆಗೆ ಮೂರು ಎಚ್ಎಂಪಿವಿ ಪ್ರಕರಣಗಳು ವರದಿಯಾಗಿವೆ. ಕರ್ನಾಟಕದಲ್ಲಿ ಎರಡು ಮತ್ತು ಗುಜರಾತ್‌ನಲ್ಲಿ ಒಂದು ಕೇಸ್‌ ದಾಖಲಾಗಿದೆ. ಕರ್ನಾಟಕದಲ್ಲಿ ವೈರಸ್ ಪತ್ತೆಯಾದ ಎರಡೂ ಶಿಶುಗಳು ಚೇತರಿಸಿಕೊಂಡಿವೆ. ಒಂದು ಮಗು ಆಸ್ಪತ್ರೆಯಿಂದ ಬಿಡುಗಡೆಗೊಂಡಿದೆ. ಆದಾಗ್ಯೂ ಜನರಲ್ಲಿ ಈ ವೈರಸ್‌ ಬಗ್ಗೆ ಕೆಲವೊಂದು ಅನುಮಾನಗಳು ಸೃಷ್ಟಿಯಾಗಿವೆ. ಹೀಗಾಗಿ ವೈರಸ್‌ನಿಂದ ಪ್ರಾಣಾಪಾಯ ಇದೆಯೇ, ಯಾರಿಗೆ ಇದು ಬಾಧಿಸುತ್ತದೆ ಎಂಬೆಲ್ಲ ಪ್ರಶ್ನೆಗಳು ಎದ್ದಿವೆ. ಅದಕ್ಕೆ ಇಲ್ಲಿ ಉತ್ತರ ನೀಡಲಾಗಿದೆ.



HMPV ಎಂದರೇನು?

ಎಚ್ಎಂಪಿವಿ ಉಸಿರಾಟದ ವ್ಯವಸ್ಥೆಗೆ ಬಾಧಿಸುವ ವೈರಸ್‌. 2001ರಲ್ಲಿ ಮೊದಲ ಬಾರಿಗೆ ಈ ವೈರಸ್‌ ಪತ್ತೆಯಾಗಿತ್ತು. ಇದು ಪ್ಯಾರಾಮೈಕ್ಸೊವಿರಿಡೇ ವರ್ಗಕ್ಕೆ ಸೇರಿದೆ. ರೆಸ್ಪಿರೇಟರಿ ಸಿನ್ಸಿಟಿಯಲ್ ವೈರಸ್ (ಆರ್‌ಎಸ್‌ವಿ)ಗೆ ಸಂಬಂಧ ಹೊಂದಿದೆ. ಕೆಮ್ಮು ಅಥವಾ ಸೀನುವಾಗ ಉಸಿರಾಟದ ಹನಿಗಳ ಮೂಲಕ ಎಚ್ಎಂಪಿವಿ ಮತ್ತೊಬ್ಬರ ದೇಹ ಪ್ರವೇಶಿಸುತ್ತದೆ. ಅಶುಚಿ ವಸ್ತುಗಳನ್ನು ಸ್ಪರ್ಶಿಸುವ ಮೂಲಕ ಅಥವಾ ಸೋಂಕಿತ ವ್ಯಕ್ತಿಗಳೊಂದಿಗೆ ನೇರ ಸಂಪರ್ಕಕ್ಕೆ ಬಂದರೂ ಸೋಂಕು ಹರಡುತ್ತದೆ.

ಈ ವೈರಸ್ ಉಸಿರಾಟದ ಅಸ್ವಸ್ಥತೆಯಿಂದ ಹಿಡಿದು ತೀವ್ರ ಕಾಯಿಲೆಗಳನ್ನು ಉಂಟುಮಾಡಬಲ್ಲದು. ಶಿಶುಗಳು, ವಯಸ್ಕರು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಈ ಸೋಂಕಿಗೆ ಬೇಗ ಒಳಗಾಗುತ್ತಾರೆ. ಚಳಿಗಾಲದ ಕೊನೆಯಲ್ಲಿ ಮತ್ತು ಸಮಶೀತೋಷ್ಣ ಪ್ರದೇಶಗಳಲ್ಲಿ ಇದರ ಹಾವಳಿ ಹೆಚ್ಚು. ಆದಾಗ್ಯೂ ಇದು ಕೆಲವು ಪ್ರದೇಶಗಳಲ್ಲಿ ವರ್ಷಪೂರ್ತಿ ಕಂಡು ಬರುತ್ತದೆ. 



HMPV ರೋಗ ಲಕ್ಷಣಗಳೇನು?

ವ್ಯಕ್ತಿಯ ವಯಸ್ಸು, ದೈಹಿಕ ಆರೋಗ್ಯ ಮತ್ತು ರೋಗನಿರೋಧಕ ಶಕ್ತಿ ಅವಲಂಬಿಸಿ ಎಚ್ಎಂಪಿವಿಯ ರೋಗಲಕ್ಷಣಗಳು ಕಂಡು ಬರುತ್ತವೆ. ಕಡಿಮೆ ತೀವ್ರತೆಯ ಪ್ರಕರಣಗಳಲ್ಲಿ ಮೂಗು ಸೋರುವಿಕೆ, ಗಂಟಲು ನೋವು, ಕೆಮ್ಮು ಮತ್ತು ಜ್ವರ ಕಾಣಿಸಿಕೊಳ್ಳುತ್ತವೆ. ಇದು ಸಾಮಾನ್ಯ ಶೀತದಂತೆಯೇ ಇರುತ್ತದೆ. ಮಧ್ಯಮ ತೀವ್ರತೆಯಲ್ಲಿ ನಿರಂತರ ಕೆಮ್ಮು, ಉಬ್ಬಸ ಮತ್ತು ಆಯಾಸ ಕಂಡು ಬರುತ್ತದೆ.

ಗಂಭೀರ ಅನಾರೋಗ್ಯ, ಶಿಶುಗಳು, ವಯಸ್ಕರು ಮತ್ತು ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವವರಲ್ಲಿ ಕಂಡು ಬರುತ್ತದೆ. ಎಚ್ಎಂಪಿವಿ ಬ್ರಾಂಕೈಟಿಸ್, ಬ್ರಾಂಕಿಯೋಲಿಟಿಸ್ ಅಥವಾ ನ್ಯುಮೋನಿಯಾದಂತಹ ಸಮಸ್ಯೆ ಉಂಟಾಗುತ್ತದೆ.

ತೀವ್ರ ಉಸಿರಾಟದ ಕಾಯಿಲೆ ಬಂದರೆ ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಮಾತ್ರ ಇದು ಅನ್ವಯಿಸುತ್ತದೆ.

ಮುಂಜಾಗ್ರತಾ ಕ್ರಮವೇನು?

ಎಚ್ಎಂಪಿವಿ ವರ್ತನೆ ಉಸಿರಾಟಕ್ಕೆ ಸಂಬಂಧಿಸಿದ ಇತರ ವೈರಸ್‌ಗಳಂತೆಯೇ ಇರುತ್ತದೆ. ಸೋಂಕಿತ ವ್ಯಕ್ತಿಗಳಿಂದ ಉಸಿರಾಟದ ಹನಿಗಳ ಮೂಲಕ ಅಥವಾ ಕಲುಷಿತ ಪ್ರದೇಶದ ಸಂಪರ್ಕದಿಂದ ವೈರಸ್‌ ಹರಡುತ್ತದೆ. ಎಚ್‌ಎಂಪಿವಿ ಹರಡುವುದನ್ನು ತಡೆಗಟ್ಟಲು ನೀರಿನಿಂದ ಆಗಾಗ್ಗೆ ಕೈ ತೊಳೆಯುವುದಕ್ಕಿಂತ ಉತ್ತಮ ಮಾರ್ಗ ಇನ್ನೊಂದಿಲ್ಲ. ನೈರ್ಮಲ್ಯ ಕಾಪಾಡಿಕೊಳ್ಳುವ ಅಭ್ಯಾಸ ಹೆಚ್ಚು ಪರಿಣಾಮಕಾರಿ.

ಸೀನುವಾಗ ಅಥವಾ ಕೆಮ್ಮುವಾಗ ಬಾಯಿ ಮತ್ತು ಮೂಗು ಮುಚ್ಚಿಕೊಳ್ಳುವುದು ಮತ್ತು ಮಾಸ್ಕ್ ಧರಿಸುವುದು ಎಲ್ಲರ ಸಾಮಾಜಿಕ ಜವಾಬ್ದಾರಿ. ಸೋಂಕಿತ ವ್ಯಕ್ತಿಗಳೊಂದಿಗೆ ನಿಕಟ ಸಂಪರ್ಕ ತಪ್ಪಿಸುವುದು ಮತ್ತು ಆಗಾಗ ಮುಟ್ಟುವ ವಸ್ತುಗಳನ್ನು ಸ್ಯಾನಿಟೈಸ್‌ ಮಾಡುವುದು ಅತ್ಯುತ್ತಮ.


 



HMPV ಸೋಂಕು ಎಷ್ಟು ದಿನ ಇರುತ್ತದೆ?

ಎಚ್ಎಂಪಿವಿಯ ಸಾಮಾನ್ಯ ಪ್ರಕರಣಗಳು ಒಂದೆರಡು ದಿನಗಳಿಂದ ಶುರುವಾಗಿ ಒಂದು ವಾರದವರೆಗೆ ಇರುತ್ತದೆ. ಗಂಭೀರ ಪ್ರಕರಣಗಳಲ್ಲಿಸುಧಾರಿಸಿಕೊಳ್ಳುವುದಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಕೆಮ್ಮಿನಂತಹ ದೀರ್ಘಕಾಲದ ರೋಗಲಕ್ಷಣಗಳು ನಿವಾರಣೆಯಾಗಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು.

HMPV ಸೋಂಕು ಪತ್ತೆ ಹಚ್ಚುವುದು ಹೇಗೆ?

ಕೇವಲ ರೋಗಲಕ್ಷಣಗಳ ಆಧಾರದ ಮೇಲೆ ಎಚ್ಎಂಪಿವಿಯನ್ನು ಪತ್ತೆಹಚ್ಚುವುದು ಸವಾಲಿನ ಸಂಗತಿ. ಏಕೆಂದರೆ ಇದು ಇತರ ಉಸಿರಾಟದ ಸೋಂಕುಗಳಂತೆಯೇ ಇರುತ್ತದೆ. ಆರ್‌ಟಿಪಿಸಿಆರ್‌ ಪರೀಕ್ಷೆ ಮೂಲಕ ಮಾತ್ರ ವೈರಸ್‌ ಪತ್ತೆ ಸಾಧ್ಯ. ಆಂಟಿಜೆನ್‌ ಪರೀಕ್ಷೆಯ ಮೂಲಕವೂ ತಕ್ಷಣದಲ್ಲೇ ಪತ್ತೆ ಹಚ್ಚಬಹುದು.

ಭಾರತದಲ್ಲಿ ಇಂಡಿಯನ್‌ ಕೌನ್ಸಿಲ್‌ ಆಫ್‌ ಮೆಡಿಕಲ್‌ ರೀಸರ್ಚ್‌ (ICMR) ಈ ರೀತಿಯ ಸೋಂಕುಗಳನ್ನು ಹರಡುವ ವೈರಸ್‌ಗಳ ಮೇಲೆ ಕಣ್ಗಾವಲು ಇಟ್ಟಿದೆ. ಎಚ್ಎಂಪಿವಿ ಸೇರಿದಂತೆ ಉಸಿರಾಟದ ವೈರಸ್‌ಗಳನ್ನು ನಿಯಮಿತವಾಗಿ ಪರೀಕ್ಷಿಸುತ್ತದೆ.

HMPV ಸೋಂಕಿಗೆ ಚಿಕಿತ್ಸೆ ಏನು?

ಸದ್ಯಕ್ಕೆ ಎಚ್ಎಂಪಿವಿಗೆ ಯಾವುದೇ ನಿರ್ದಿಷ್ಟ ಆಂಟಿವೈರಲ್ ಔಷಧಿ ಅಥವಾ ಲಸಿಕೆ ಲಭ್ಯವಿಲ್ಲ. ಚಿಕಿತ್ಸೆಯು ಸೋಂಕಿನ ತೀವ್ರತೆ ಅವಲಂಬಿಸಿರುತ್ತದೆ. ಸೌಮ್ಯ ಪ್ರಕರಣಗಳಿಗೆ, ವಿಶ್ರಾಂತಿ, ಸಾಕಷ್ಟು ನೀರು ಕುಡಿಯುವುದು ಮತ್ತು ಜ್ವರ ಮತ್ತು ಮೂಗು ಕಟ್ಟುವುದನ್ನು ಕಡಿಮೆ ಮಾಡುವ ಔಷಧಗಳು ಸಾಕು.

ತೀವ್ರ ಪ್ರಕರಣಗಳಲ್ಲಿ, ವಿಶೇಷವಾಗಿ ನ್ಯುಮೋನಿಯಾ ಅಥವಾ ಬ್ರಾಂಕಿಯೋಲಿಟಿಸ್ ಇದ್ದವರಿಗೆ ಆಮ್ಲಜನಕ ಪೂರೈಕೆ ಮಾಡಲು ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ. ಗಮನಾರ್ಹ ಉಸಿರಾಟದ ತೊಂದರೆ ಅನುಭವಿಸುವ ರೋಗಿಗಳಿಗೆ ಲೈಫ್‌ ಸಪೋರ್ಟ್‌ ಬೇಕಾಗುತ್ತದೆ. ಚಿಕಿತ್ಸೆಗಳು ಮತ್ತು ಲಸಿಕೆಗಳನ್ನು ಅಭಿವೃದ್ಧಿಪಡಿಸಲು ಸಂಶೋಧನೆ ನಡೆಯುತ್ತಿದೆ. ಹೀಗಾಗಿ ತಡೆಗಟ್ಟುವ ಕ್ರಮಗಳು ಮತ್ತು ಆರಂಭಿಕ ವೈದ್ಯಕೀಯ ನೆರವಿನಿಂದ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಭಾರತದಲ್ಲಿ ಮೇಲ್ವಿಚಾರಣೆ ಮಾಡುವವರು ಯಾರು?

ಎಚ್ಎಂಪಿವಿ ಹೊಸ ವೈರಸ್‌ ಅಲ್ಲ. ಪ್ರಕರಣಗಳು ಈಗಾಗಲೇ ವಿಶ್ವಾದ್ಯಂತ ವರದಿಯಾಗಿವೆ. ಭಾರತದಲ್ಲಿ, ಐಸಿಎಂಆರ್ ಮತ್ತು ಐಡಿಎಸ್‌ಪಿಯಂತಹ ವ್ಯವಸ್ಥೆಗಳು ಎಚ್‌ಎಂಪಿವಿ ಸೇರಿದಂತೆ ಉಸಿರಾಟದ ಸೋಂಕುಗಳನ್ನು ತರುವ ವೈರಸ್‌ ಬಗ್ಗೆ ನಿಗಾ ವಹಿಸಿವೆ. ಸರ್ಕಾರವು ತನ್ನ ಆರೋಗ್ಯ ಮೂಲಸೌಕರ್ಯ ಹೆಚ್ಚಿಸುವುದಾಗಿ ಹೇಳಿದೆ. ಹೀಗಾಗಿ ತುರ್ತು ಪರಿಸ್ಥಿತಿಯನ್ನು ಎದುರಿಸುವುದಕ್ಕೂ ಸಜ್ಜಾಗಿದೆ.

ಎಚ್‌ಎಂಪಿವಿ ಮತ್ತು ಕೋವಿಡ್-19 ನಡುವಿನ ಹೋಲಿಕೆಗಳು

ಎಚ್ಎಂಪಿವಿ ಮತ್ತು ಕೋವಿಡ್-19 ಎರಡೂ ಉಸಿರಾಟದ ಸಮಸ್ಯೆ ತರುವ ಸಾರ್ಸ್-ಕೋವ್-2 ವೈರಸ್‌ನಿಂದ ಉಂಟಾಗುತ್ತದೆ. ಆದಾಗ್ಯೂ ಅವುಗಳ ವೈರಾಲಜಿ, ಪ್ರಸರಣಮತ್ತು ಆರೋಗ್ಯದ ಮೇಲಿನ ಪರಿಣಾಮ ಗಮನಾರ್ಹ ವ್ಯತ್ಯಾಸ ಹೊಂದಿದೆ.

ಎರಡೂ ಸೋಂಕುಗಳು ಉಸಿರಾಟದ ಹನಿಗಳು, ಸೋಂಕಿತರಿಂದ ನೇರ ಸಂಪರ್ಕ ಮತ್ತು ಕಲುಷಿತ ವಸ್ತುಗಳಿಂದ ಹರಡುತ್ತದೆ. ಇವೆರಡೂ ಕೆಮ್ಮು, ಜ್ವರ ಮತ್ತು ಉಸಿರಾಟದ ತೊಂದರೆಯಂತಹ ಸೌಮ್ಯ ಮತ್ತು ತೀವ್ರ ಉಸಿರಾಟದ ರೋಗಲಕ್ಷಣಗಳನ್ನು ತೋರಿಸುತ್ತದೆ. ಎರಡೂ ಸೋಂಕುಗಳು ಶಿಶುಗಳು, ವಯಸ್ಕರು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಹೆಚ್ಚು ಬಾಧಿಸುತ್ತದೆ.

ಕೋವಿಡ್-19 ರೋಗಲಕ್ಷಣಗಳ ವಿಶಾಲ ವ್ಯಾಪ್ತಿ ಹೊಂದಿದೆ. ಅಲ್ಲಿ ರುಚಿ ಮತ್ತು ವಾಸನೆಯ ಶಕ್ತಿ ನಷ್ಟವಾಗುತ್ತದೆ. ರಕ್ತ ಹೆಪ್ಪುಗಟ್ಟುವಿಕೆ ಮತ್ತು ಬಹು ಅಂಗಾಂಗ ವೈಫಲ್ಯದಂತಹ ಸಮಸ್ಯೆ ಕಂಡು ಬರುತ್ತದೆ.

ಕೋವಿಡ್-19ಗೆ ಲಸಿಕೆಗಳು ಮತ್ತು ಆಂಟಿವೈರಲ್ ಚಿಕಿತ್ಸೆಗಳು ಲಭ್ಯವಿದೆ. ಎಚ್ಎಂಪಿವಿಗೆ ಪ್ರಸ್ತುತ ಯಾವುದೇ ನಿರ್ದಿಷ್ಟ ಆಂಟಿವೈರಲ್ ಅಥವಾ ಲಸಿಕೆ ಲಭ್ಯವಿಲ್ಲ.

Tags:    

Similar News