Kolkata rape murder | ಸಿಎಂ ಮಮತಾ ಬ್ಯಾನರ್ಜಿಗೆ ಸಿಬಿಐ ಬಲೆ ಬೀಸಿದೆಯೇ?
ಆರೋಗ್ಯ ಇಲಾಖೆಯಲ್ಲಿನ ಭ್ರಷ್ಟಾಚಾರ ಆರೋಪಗಳು ಮುಖ್ಯಮಂತ್ರಿಯನ್ನು ಗುರಿಯಾಗಿಸಲು ಸಿಬಿಐಗೆ ನೆರವಾಗಬಹುದು ಎಂಬುದು ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನ ದೊಡ್ಡ ಆತಂಕವಾಗಿದೆ.;
ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಡಾ.ಸಂದೀಪ್ ಘೋಷ್ ಅವರ ಬಂಧನದ ಬಗ್ಗೆ ಪ್ರತಿಕ್ರಿಯಿಸಿದ್ದ ಪಶ್ಚಿಮ ಬಂಗಾಳದ ರಾಜ್ಯಪಾಲ ಡಾ.ಸಿ.ವಿ.ಆನಂದ ಬೋಸ್, ʼಇದು ಅಂತ್ಯದ ಆರಂಭʼ ಎಂದು ಹೇಳಿದ್ದರು. ರಾಜ್ಯಪಾಲರು ಹೇಳಿಕೆಯನ್ನು ವಿವರಿಸಲಿಲ್ಲ.
ಆದರೆ, ಸರ್ಕಾರಿ ಆಸ್ಪತ್ರೆಯಲ್ಲಿ ಸಿಬಿಐ ಭ್ರಷ್ಟಾಚಾರದ ತನಿಖೆ ನಡೆಸುತ್ತಿರುವುದರಿಂದ, ಅವರ ಹೇಳಿಕೆಯ ಒಳಾರ್ಥ ಎಲ್ಲರಿಗೂ ಗೊತ್ತಾಗುವಂತೆ ಇದೆ.
ಇದೇ ಮೊದಲ ಬಾರಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಅಧೀನದಲ್ಲಿರುವ ರಾಜ್ಯ ಸರ್ಕಾರದ ಇಲಾಖೆಯಲ್ಲಿ ಕೇಂದ್ರ ಏಜೆನ್ಸಿಗೆ ಭ್ರಷ್ಟಾಚಾರದ ವಾಸನೆ ಸಿಕ್ಕಿದೆ. ಇಲ್ಲಿಯವರೆಗೆ, ಕೇಂದ್ರ ಏಜೆನ್ಸಿಗಳು ಶಿಕ್ಷಣ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಮತ್ತು ನಗರಾಭಿವೃದ್ಧಿ ಮತ್ತು ಪುರಸಭೆ ವ್ಯವಹಾರಗಳ ಇಲಾಖೆಯಲ್ಲಿನ ಆರೋಪಗಳ ತನಿಖೆ ನಡೆಸಿದ್ದವು.
ಹಿಂದಿನ ಬಂಧನ: ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಮತ್ತು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜ್ಯೋತಿಪ್ರಿಯಾ ಮಲ್ಲಿಕ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ. ಆಸ್ಪತ್ರೆಯಲ್ಲಿನ ಹಣಕಾಸಿನ ಅವ್ಯವಹಾರಗಳ ಮೇಲೆ ಡಾ. ಘೋಷ್ ಅವರನ್ನು ಸಿಬಿಐ ಬಂಧಿಸಿತು. ಅವರ ಭದ್ರತಾ ಸಿಬ್ಬಂದಿ ಅಫ್ಸರ್ ಅಲಿ, ಆಸ್ಪತ್ರೆಯ ಮಾರಾಟ ವಿಭಾಗದ ಬಿಪ್ಲವ್ ಸಿಂಘಾ ಮತ್ತು ಸುಮನಾ ಹಜಾರಾ ಅವರನ್ನು ಕೂಡ ಬಂಧಿಸಲಾಗಿದೆ.
ವೈದ್ಯೆ ಅತ್ಯಾಚಾರ ಮತ್ತು ಕೊಲೆ: ಆಗಸ್ಟ್ 9 ರ ದುರದೃಷ್ಟಕರ ಘಟನೆಯು ಆಡಳಿತ ಪಕ್ಷದ ನಾಯಕರು ಮತ್ತು ಅಧಿಕಾರಕ್ಕೆ ಹತ್ತಿರವಿರುವ ಜನರನ್ನು ಒಳಗೊಂಡ ಉತ್ತರ ಬಂಗಾಳದ ಲಾಬಿಯ ಭ್ರಷ್ಟಾಚಾರವನ್ನು ಬಯಲುಗೊಳಿಸಿದೆ.
ಶವಗಳ ಅಕ್ರಮ ಮಾರಾಟ, ಬಯೋಮೆಡಿಕಲ್ ತ್ಯಾಜ್ಯದ ಸಾಗಣೆ, ಔಷಧ ಮತ್ತು ವೈದ್ಯಕೀಯ ಉಪಕರಣಗಳ ಪೂರೈಕೆದಾರರಿಂದ ಕಮಿಷನ್ ಪಡೆದ ಆರೋಪವನ್ನು ಡಾ ಘೋಷ್ ಎದುರಿಸುತ್ತಿದ್ದಾರೆ. ಈ ಸಂಬಂಧ ಅವರ ಸಹೋದ್ಯೋಗಿ ಡಾ.ಅಖ್ತರ್ ಅಲಿ 2023 ರಲ್ಲಿ ರಾಜ್ಯ ಜಾಗೃತ ಆಯೋಗಕ್ಕೆ ಲಿಖಿತ ದೂರು ಸಲ್ಲಿಸಿದ್ದರು.
ಅಪರಾಧ ಮತ್ತು ಭ್ರಷ್ಟಾಚಾರ: ಆನಂತರ ಡಾ. ಘೋಷ್ ಅವರನ್ನು ಆಸ್ಪತ್ರೆಯಿಂದ ವರ್ಗಾಯಿಸಲಾಯಿತು. ಆದರೆ, ಶೀಘ್ರವೇ ಅವರು ಆಸ್ಪತ್ರೆಗೆ ವಾಪಸಾದರು. ಅತ್ಯಾಚಾರ-ಕೊಲೆ ನಂತರ ಅಕ್ರಮಗಳು ಬಯಲಿಗೆ ಬಂದಿದ್ದು, ಕಿರಿಯ ವೈದ್ಯರು ಅಪರಾಧದಲ್ಲಿ ಡಾ. ಘೋಷ್ ಅವರ ಸಂಭವನೀಯ ಪಾತ್ರವನ್ನು ತನಿಖೆ ಮಾಡಬೇಕೆಂದು ಒತ್ತಾಯಿಸಲಾರಂಭಿಸಿದರು.
ರಾಜ್ಯ ಸರ್ಕಾರ ಕಳೆದ ತಿಂಗಳು ಡಾ.ಅಲಿ ಅವರ ಆರೋಪಗಳನ್ನು ಪರಿಶೀಲಿಸಲು ವಿಶೇಷ ತನಿಖಾ ತಂಡ (ಎಸ್‌ಐಟಿ)ವನ್ನು ರಚಿಸಿತು. ಡಾ. ಅಲಿ ಅವರು ಇಡಿ ತನಿಖೆಯನ್ನು ಕೋರಿ ಕಲ್ಕತ್ತಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.
ಹೈಕೋರ್ಟ್ ಮಧ್ಯಪ್ರವೇಶ: ಹೈಕೋರ್ಟ್ ಒಂದು ವರ್ಷದ ಹಿಂದೆ ಸಲ್ಲಿಸಿದ ದೂರು ಆಧರಿಸಿ ಆಗಸ್ಟ್ 16, 2024 ರಂದು ಎಸ್‌ಐಟಿ ರಚಿಸಿದ್ದನ್ನು ಪ್ರಶ್ನಿಸಿ, ಸಿಬಿಐ ತನಿಖೆಗೆ ಆದೇಶಿಸಿತು. ಡಾ. ಅಲಿ ಅವರು ಡಾ. ಘೋಷ್ ಒಳಗೊಂಡ ಭ್ರಷ್ಟಾಚಾರದ 15 ನಿದರ್ಶನಗಳನ್ನು ಉಲ್ಲೇಖಿಸಿದ್ದಾರೆ. ಸಿಬಿಐಗೆ ನಂಬಲರ್ಹ ಪುರಾವೆಗಳು ಸಿಕ್ಕಿದ್ದು, ಘೋಷ್ ಅವರನ್ನು ಬಂಧಿಸಿತು.
ಸಿಬಿಐ ಈಗ ಡಾ. ಘೋಷ್ ಅವರನ್ನು ರಕ್ಷಿಸುತ್ತಿರುವ ʻಅದೃಶ್ಯ ಕೈʼಗಳನ್ನುಹುಡುಕಲು ಪ್ರಯತ್ನಿಸುತ್ತಿದೆ. ಡಾ. ಅಲಿ ತಮ್ಮ ದೂರಿನಲ್ಲಿ ಟಿಎಂಸಿ ಶಾಸಕ ಡಾ ಸುದೀಪ್ತ ರಾಯ್ ಅವರನ್ನು ಹೆಸರಿಸಿದ್ದಾರೆ.
ಮಮತಾ ಸಂಕಷ್ಟದಲ್ಲಿ?: ಮುಖ್ಯಮಂತ್ರಿಗೆ ಹತ್ತಿರವಿರುವ ಇನ್ನೊಬ್ಬ ಅರ್ಥೋಪೀಡಿಕ್ ವೈದ್ಯ ಕೂಡ ಸಿಬಿಐ ಮಸೂರದಡಿ ಇದ್ದಾರೆ. ತೃಣಮೂಲ ಕಾಂಗ್ರೆಸ್‌ಗೆ ಇರುವ ದೊಡ್ಡ ಆತಂಕವೆಂದರೆ, ಸಿಬಿಐ ಆರೋಗ್ಯ ಇಲಾಖೆಯಲ್ಲಿನ ಆರೋಪಗಳನ್ನು ಬಳಸಿಕೊಂಡು ಮುಖ್ಯಮಂತ್ರಿಯನ್ನು ಗುರಿಯಾಗಿಸಬಹುದು ಎಂಬುದು. ಈ ಹಿನ್ನೆಲೆಯಲ್ಲಿ ರಾಜ್ಯಪಾಲರ ಹೇಳಿಕೆಗೆ ಹೆಚ್ಚಿನ ಮಹತ್ವ ಬಂದಿದೆ.
ʻಮಮತಾ ಬ್ಯಾನರ್ಜಿಯವರನ್ನು ಸಿಬಿಐ ಸಮೀಪಿಸಿದ ನಿಕಟ ಪ್ರಸಂಗ ಇದಾಗಿದೆ. ಸಿಎಂ ಅಧೀನದಲ್ಲಿರುವ ಇಲಾಖೆಯು ಸಿಬಿಐ ಸ್ಕ್ಯಾನರ್ ನಡಿ ಇರುವುದು ಟಿಎಂಸಿಗೆ ಅನುಕೂಲಕರ ಬೆಳವಣಿಗೆಯಲ್ಲ,ʼ ಎಂದು ರಾಜಕೀಯ ವ್ಯಾಖ್ಯಾನಕಾರ ಮತ್ತು ಲೇಖಕ ಅಮಲ್ ಸರ್ಕಾರ್ ಹೇಳುತ್ತಾರೆ.
ಅಂತಹ ಯಾವುದೇ ಕ್ರಮ ಮಮತಾ ಅವರ ಕ್ಲೀನ್ ಇಮೇಜ್ ಗೆ ಧಕ್ಕೆ ತರುತ್ತದೆ ಮತ್ತು ಸಂಕಷ್ಟದಲ್ಲಿರುವ ಟಿಎಂಸಿಗೆ ಬೇಡವಾದ ಬೆಳವಣಿಗೆ ಇದಾಗಿದೆ.