ಭಾರತದ ಸಂಬಾರ ಪದಾರ್ಥಗಳನ್ನು ನಿಷೇಧಿಸಿಲ್ಲ: ಸಚಿವೆ ಅನುಪ್ರಿಯಾ ಪಟೇಲ್

Update: 2024-08-06 13:13 GMT

ನವದೆಹಲಿ: ಸಿಂಗಾಪುರ ಮತ್ತು ಹಾಂಕಾಂಗ್‌ ಮತ್ತಿತರ ದೇಶಗಳು ಭಾರತೀಯ ಸಂಬಾರ ಪದಾರ್ಥಗಳನ್ನು ನಿಷೇಧಿಸಿಲ್ಲ ಎಂದು ವಾಣಿಜ್ಯ ಸಚಿವಾಲಯ ಮಂಗಳವಾರ ರಾಜ್ಯಸಭೆಗೆ ತಿಳಿಸಿದೆ. 

ಭಾರತದಿಂದ ರಫ್ತಾದ ಕೆಲವು ಮಸಾಲೆ ಮಿಶ್ರಣಗಳ ನಿರ್ದಿಷ್ಟ ಬ್ಯಾಚ್‌ಗಳನ್ನು ಹಾಂಗ್ಕಾಂಗ್ ಮತ್ತು ಸಿಂಗಾಪುರದ ಆಹಾರ ಸುರಕ್ಷತಾ ಅಧಿಕಾರಿಗಳು ಅನುಮತಿಸಿದ ಮಿತಿಗಿಂತ ಹೆಚ್ಚಿನ ಎಥಿಲೀನ್ ಆಕ್ಸೈಡ್ (ಇಟಿಒ) ಇರುವ ಕಾರಣ ಹಿಂಪಡೆದಿದ್ದಾರೆ ಎಂದು ಆರೋಗ್ಯ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. 

ದೇಶದ ಆಮದು ಸರ್ವೇಕ್ಷಣೆ ನೀತಿ ಪ್ರಕಾರ, ಸಿಂಗಾಪುರ ಫುಡ್ ಏಜೆನ್ಸಿಯು ಸಂಬಂಧಿಸಿದ ಬ್ರಾಂಡ್‌ಗಳ ಮಸಾಲೆ ಪದಾರ್ಥಗಳನ್ನು ಒಂದು ತಿಂಗಳ ಅವಧಿಗೆ ನಿಲ್ಲಿಸು-ಪರೀಕ್ಷಿಸು ಅಡಿಯಲ್ಲಿ ಇರಿಸಿತು ಎಂದು ಹೇಳಿದರು.

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿರುವ ಮಸಾಲೆ ಮಂಡಳಿಯು ಆಮದು ಮಾಡಿಕೊಳ್ಳುವ ದೇಶಗಳಲ್ಲಿನ ಇಟಿಒ ಮಿತಿಗಳಿಗೆ ಅನುಗುಣವಾಗಿ ಉತ್ಪನ್ನ ನೀಡಲು ವಿವಿಧ ಕ್ರಮಗಳನ್ನು ತೆಗೆದುಕೊಂಡಿದೆ. ರಫ್ತಾಗುವ ಮಸಾಲೆಗಳ ರವಾನೆಪೂರ್ವ ಕಡ್ಡಾಯ ಪರೀಕ್ಷೆ, ಕಚ್ಚಾ ವಸ್ತುಗಳ ಸಂಗ್ರಹ, ಪ್ಯಾಕಿಂಗ್ ಮತ್ತು ಸಾಗಣೆಯ ಎಲ್ಲ ಹಂತಗಳಲ್ಲಿ ಇಟಿಒ ಮಾಲಿನ್ಯವನ್ನು ತಡೆಗಟ್ಟಲು ರಫ್ತುದಾರರು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ನೀಡಲಾಗಿದೆ ಎಂದು ಪಟೇಲ್ ಹೇಳಿದರು. 

ಗ್ರಾಹಕರಿಗೆ ಸುರಕ್ಷಿತ ಆಹಾರ: ಇದಲ್ಲದೆ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಗ್ರಾಹಕರಿಗೆ ಸುರಕ್ಷಿತ ಆಹಾರ ಉತ್ಪನ್ನಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ ಎಂದು ಹೇಳಿದರು.

ಪ್ರಾಧಿಕಾರವು  ರಾಜ್ಯ-ಕೇಂದ್ರಾಡಳಿತ ಪ್ರದೇಶಗಳಲ್ಲಿನ ಪ್ರಾದೇಶಿಕ ಕಚೇರಿಗಳ ಮೂಲಕ ಡೇರಿ ಉತ್ಪನ್ನಗಳು, ಮಸಾಲೆ ಪದಾರ್ಥ ಸೇರಿದಂತೆ ವಿವಿಧ ಆಹಾರ ಉತ್ಪನ್ನಗಳ ಕಣ್ಗಾವಲು, ಮೇಲ್ವಿಚಾರಣೆ, ತಪಾಸಣೆ ಮಾಡುತ್ತಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಎಫ್‌ಎಸ್‌ಎಸ್) ಕಾಯಿದೆ 2006 ಮತ್ತು ಅದರ ಅಡಿಯಲ್ಲಿ ನಿಯಮಗಳನ್ನು ರೂಪಿಸಲಾಗಿದೆ. ಒಂದು ವೇಳೆ ಶಾಸನಬದ್ಧ ಅವಶ್ಯಕತೆಗಳನ್ನು ಅನುಸರಿಸದೆ ಇದ್ದಲ್ಲಿ, ಕಾಯಿದೆಯಡಿ ಆಹಾರ ವ್ಯಾಪಾರ ನಿರ್ವಾಹಕ (ಎಫ್‌ಬಿಒ)ರಿಗೆ ದಂಡ ವಿಧೀಸಲಾಗುತ್ತದೆ. ಪ್ರಾಧಿಕಾರದ ವರದಿ ವಿವರ fssai.gov.in/cms/national-surveys.php ಲಭ್ಯವಿದೆ ಎಂದು ಸಚಿವೆ ಹೇಳಿದರು.

ಹಾಲು ಮತ್ತು ಹಾಲಿನ ಉತ್ಪನ್ನಗಳ ಕ್ಷಿಪ್ರ ಪರೀಕ್ಷೆಗೆ 'ಫುಡ್ ಸೇಫ್ಟಿ ಆನ್ ವೀಲ್ಸ್' ನಿಯೋಜಿಸಲು ಪ್ರಾಧಿಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಕೇಳಿದೆ. 2022 ರಲ್ಲಿ ಮಸಾಲೆಗಳ ಮೇಲೆ ದೇಶಾದ್ಯಂತ ಕಣ್ಗಾವಲು ನಡೆಸಿದೆ. ಬಲವರ್ಧಿತ ಅಕ್ಕಿ ಕುರಿತು ಫೋರ್ಟ್ರೇಸ್ (ಫೋರ್ಟಿಫೈಡ್ ರೈಸ್ ಟ್ರೇಸಬಿಲಿಟಿ) ಎಂಬ ಪೋರ್ಟಲ್ ಪ್ರಾರಂಭಿಸಿದೆ ಎಂದು ಪಟೇಲ್ ಅವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. 

Tags:    

Similar News