ಹೊಸದಿಲ್ಲಿ, ಮಾ.30- ರಾಮಲೀಲಾ ಮೈದಾನದಲ್ಲಿ ನಡೆಯಲಿರುವ ಇಂಡಿಯ ಒಕ್ಕೂಟದ ʻಲೋಕತಂತ್ರ ಬಚಾವೋ ರ್ಯಾಲಿʼ ವ್ಯಕ್ತಿ ನಿರ್ದಿಷ್ಟವಲ್ಲ; ಬದಲಾಗಿ, ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸುವ ಉದ್ದೇಶ ಹೊಂದಿದೆ ಎಂದು ಕಾಂಗ್ರೆಸ್ ಶನಿವಾರ ಹೇಳಿದೆ.
ಬಿಜೆಪಿ ನೇತೃತ್ವದ ಸರ್ಕಾರದ ʻಸಮಯ ಮುಗಿದಿದೆʼ ಎಂಬ ಸಂದೇಶ ಭಾನುವಾರದ ಸಮಾವೇಶದಿಂದ ಲೋಕ ಕಲ್ಯಾಣ ಮಾರ್ಗ (ಪ್ರಧಾನಿ ನಿವಾಸವಿದೆ)ಕ್ಕೆ ಭಾನುವಾರದ ಸಮಾವೇಶದಿಂದ ರವಾನೆಯಾಗಲಿದೆ ಎಂದು ಹೇಳಿದೆ.
ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಇತರ ಹಿರಿಯ ನಾಯಕರು ಸಭೆಯಲ್ಲಿ ಮಾತನಾಡಲಿದ್ದಾರೆ ಎಂದರು. ʻಇದು ವ್ಯಕ್ತಿ ನಿರ್ದಿಷ್ಟವಲ್ಲ.ಆದ್ದರಿಂದ ಲೋಕತಂತ್ರ ಬಚಾವೋ ಸಮಾವೇಶ ಎಂದು ಕರೆಯಲಾಗಿದೆ. 27-28 ಪಕ್ಷಗಳು ಇದರಲ್ಲಿ ಭಾಗಿಯಾಗಿವೆʼ ಎಂದು ಹೇಳಿದರು.
ಜಾರಿ ನಿರ್ದೇಶನಾಲಯದಿಂದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನವನ್ನು ವಿರೋಧಿಸಿ ಸಮಾವೇಶ ನಡೆಯುತ್ತಿದೆ ಎಂಬ ಆಮ್ ಆದ್ಮಿ ಪಕ್ಷ (ಎಎಪಿ)ದ ಹೇಳಿಕೆ ಹಿನ್ನೆಲೆಯಲ್ಲಿ ಈ ಮಾತು ಮಹತ್ವ ಗಳಿಸಿದೆ.
ಮಾರ್ಚ್ 17 ರಂದು ಮುಂಬೈನಲ್ಲಿ ಇಂಡಿಯನ್ ನ್ಯಾಶನಲ್ ಡೆವಲಪ್‌ಮೆಂಟ್ ಇನ್ಕ್ಲೂಸಿವ್ ಅಲಯನ್ಸ್ (ಇಂಡಿಯಾ) ಚುನಾವಣೆ ಪ್ರಚಾರ ಆರಂಭಿಸಿದೆ ಮತ್ತು ಈ ಸಮಾವೇಶ ಅದರ ಎರಡನೇ ಕರೆ ಆಗಲಿದೆ ಎಂದು ರಮೇಶ್ ಹೇಳಿದರು. ಬೆಲೆ ಏರಿಕೆ, 45 ವರ್ಷಗಳಲ್ಲೇ ಅತ್ಯಧಿಕ ನಿರುದ್ಯೋಗ ಪ್ರಮಾಣ, ಆರ್ಥಿಕ ಅಸಮಾನತೆ, ಸಾಮಾಜಿಕ ಧ್ರುವೀಕರಣ ಮತ್ತು ರೈತರ ಮೇಲಿನ ಅನ್ಯಾಯ, ಕೇಂದ್ರೀಯ ಸಂಸ್ಥೆಗಳ ದುರುಪಯೋಗದ ಮೂಲಕ ಪ್ರತಿಪಕ್ಷಗಳನ್ನು ಗುರಿಯಾಗಿಸುವುದು ಕುರಿತು ಪ್ರತಿಪಕ್ಷ ನಾಯಕರು ಸಮಾವೇಶದಲ್ಲಿ ಪ್ರಸ್ತಾಪಿಸಲಿದ್ದಾರೆ ಎಂದು ರಮೇಶ್ ಹೇಳಿದರು.
ʻವಿರೋಧ ಪಕ್ಷಗಳನ್ನು ಗುರಿಯಾಗಿಸಿ ಇಬ್ಬರು ಮುಖ್ಯಮಂತ್ರಿಗಳು ಮತ್ತು ಹಲವು ಸಚಿವರನ್ನು ಬಂಧಿಸಲಾಗಿದೆ. ಪ್ರತಿಪಕ್ಷಗಳನ್ನು ರಾಜಕೀಯ ಮತ್ತು ಆರ್ಥಿಕವಾಗಿ ದುರ್ಬಲಗೊಳಿಸಲು ಪ್ರಧಾನಿ ಬಯಸುತ್ತಿದ್ದಾರೆ. ಚುನಾವಣಾ ಬಾಂಡ್‌ಗಳ ಮೂಲಕ ʻಸುಲಿಗೆʼ ಮತ್ತು ʻತೆರಿಗೆ ಭಯೋತ್ಪಾದನೆʼ ಕುರಿತು ಪ್ರಸ್ತಾಪಿಸಲಾಗುವುದುʼ ಎಂದು ಹೇಳಿದರು.
ಶುಕ್ರವಾರ ನಮಗೆ ಎರಡು ಆದಾಯ ತೆರಿಗೆ ಇಲಾಖೆ ನೋಟಿಸ್‌ಗಳು ಬಂದಿವೆ ಎಂದು ಅವರು ತಿಳಿಸಿದರು.
ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೆನ್, ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ ರಾಜಾ, ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ಸಮಾಜವಾದಿ ಪಕ್ಷದ ವರಿಷ್ಠ ಅಖಿಲೇಶ್ ಯಾದವ್, ಡಿಎಂಕೆಯ ತಿರುಚಿ ಶಿವ, ಟಿಎಂಸಿಯ ಡೆರೆಕ್ ಒಬಿಯಾನ್ ಮತ್ತಿತರರು ಭಾಗವಹಿಸಲಿದ್ದಾರೆ.