ಅಕ್ರಮ ಗಣಿಗಾರಿಕೆ ಪ್ರಕರಣ: ಜನಾರ್ದನ ರೆಡ್ಡಿಗೆ 7 ವರ್ಷ ಜೈಲು ಶಿಕ್ಷೆ; ಶಾಸಕ ಸ್ಥಾನಕ್ಕೂ ಕುತ್ತು?

ಜನಾರ್ದನ ರೆಡ್ಡಿ, ಓಬಳಾಪುರಂ ಮೈನಿಂಗ್ ಕಂಪನಿಯ ಮುಖ್ಯಸ್ಥರಾಗಿದ್ದು ಹಾಗೂ ಅಕ್ರಮ ಗಣಿಗಾರಿಕೆಯಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂದು ಸಿಬಿಐ ಆರೋಪಿಸಿತ್ತು.;

Update: 2025-05-06 11:11 GMT

ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಶಾಸಕ ಹಾಗೂ ಗಣಿಗಾರಿಕೆ ಉದ್ಯಮಿ ಜನಾರ್ದನ ರೆಡ್ಡಿಗೆ ಸಿಬಿಐ ವಿಶೇಷ ಕೋರ್ಟ್ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಮಂಗಳವಾರ ಈ ತೀರ್ಪನ್ನು ನೀಡಿದೆ. ಈ ಶಿಕ್ಷೆಯಿಂದಾಗಿ ಅವರು ಮತ್ತೆ ಜೈಲಿಗೆ ಹೋಗಬೇಕಾಗುತ್ತದೆ ಹಾಗೂ ಶಾಸಕ ಸ್ಥಾನಕ್ಕೂ ಕುತ್ತು ಬರುವ ಸಾಧ್ಯತೆಗಳಿವೆ.

ಈ ಪ್ರಕರಣವು ಓಬಳಾಪುರಂ ಮೈನಿಂಗ್ ಕಂಪನಿಯ (Obalapuram Mining Company) ಗಣಿಗಾರಿಕೆ ಚಟುವಟಿಕೆಗಳಿಗೆ ಸಂಬಂಧಿಸಿದ್ದಾಗಿದೆ. 2008ರಿಂದ 2013ರ ಅವಧಿಯಲ್ಲಿ ನಡೆದ ಅಕ್ರಮ ಗಣಿಗಾರಿಕೆ ಮಾಡಿರುವ ಆರೋಪಗಳು ಅವರ ಮೇಲಿದೆ. ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿಭಾಗದಲ್ಲಿ ಗಣಿಗಾರಿಕೆ ನಡೆಸುತ್ತಿದ್ದ ಓಬಳಾಪುರಂ ಕಂಪನಿಯು ಕಾನೂನುಬಾಹಿರವಾಗಿ ಗಣಿಗಾರಿಕೆ ನಡೆಸಿದೆ ಎಂದು ಆರೋಪಿಸಲಾಗಿತ್ತು. ಈ ಅಕ್ರಮ ಚಟುವಟಿಕೆಗಳು ಪರಿಸರ ನಾಶ, ಸರ್ಕಾರ ಬೊಕ್ಕಷಕ್ಕೆ ನಷ್ಟ ಮಾಡಿತ್ತು.

ಜನಾರ್ದನ ರೆಡ್ಡಿ, ಓಬಳಾಪುರಂ ಮೈನಿಂಗ್ ಕಂಪನಿಯ ಮುಖ್ಯಸ್ಥರಾಗಿದ್ದು ಹಾಗೂ ಅಕ್ರಮ ಗಣಿಗಾರಿಕೆಯಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂದು ಸಿಬಿಐ ಆರೋಪಿಸಿತ್ತು. ಈ ಪ್ರಕರಣದಲ್ಲಿ ರೆಡ್ಡಿ ಜೊತೆಗೆ ಇತರ ಕೆಲವು ವ್ಯಕ್ತಿಗಳು ಮತ್ತು ಕಂಪನಿಗಳ ವಿರುದ್ಧವೂ ಆರೋಪಗಳನ್ನು ದಾಖಲಿಸಲಾಗಿತ್ತು.

ಅನಂತಪುರ ಜಿಲ್ಲೆಯ ಕರ್ನಾಟಕದ ಗಡಿಯಲ್ಲಿರುವ(ಬಳ್ಳಾರಿ) ಓಬಳಾಪುರಂನಲ್ಲಿ ನಡೆದ ಅಕ್ರಮ ಗಣಿಗಾರಿಕೆ ಪ್ರಕರಣವನ್ನು ಸಿಬಿಐ ತನಿಖೆ ನಡೆಸಿದೆ. ಈ ಪ್ರಕರಣದಲ್ಲಿ ಒಟ್ಟು ಒಂಬತ್ತು ಆರೋಪಿಗಳಿದ್ದಾರೆ. ಆರೋಪಿಯಾಗಿರುವ ಐಎಎಸ್ ಅಧಿಕಾರಿ ಶ್ರೀಲಕ್ಷ್ಮಿ ಅವರನ್ನು ಹೈಕೋರ್ಟ್ ಈಗಾಗಲೇ ಖುಲಾಸೆಗೊಳಿಸಿದೆ. ಈ ಆರೋಪಿಗಳಲ್ಲಿ ಒಬ್ಬ (ಲಿಂಗರೆಡ್ಡಿ) ಸಾವನ್ನಪ್ಪಿದ್ದಾನೆ. ಉಳಿದ ಏಳು ಜನರಲ್ಲಿ ಇಬ್ಬರಿಗೆ ಸಿಬಿಐ ನ್ಯಾಯಾಲಯ ಇದೀಗ ಕ್ಲೀನ್ ಚಿಟ್ ನೀಡಿದ್ದು, ಉಳಿದ ಐದು ಜನರನ್ನು ದೋಷಿಗಳು ಎಂದು ತೀರ್ಪು ನೀಡಿತು. ನ್ಯಾಯಾಲಯವು ಎಲ್ಲಾ 5 ಅಪರಾಧಿಗಳಿಗೆ 7 ವರ್ಷ ಜೈಲು ಶಿಕ್ಷೆ ಪ್ರಕಟಿಸಿದೆ.

ಶಾಸಕ ಜನಾರ್ದನ ರೆಡ್ಡಿಗೆ 7 ವರ್ಷ ಜೈಲು ಶಿಕ್ಷೆ ಪ್ರಕಟವಾಗಿದ್ದು, 3 ವರ್ಷಕ್ಕಿಂತ ಹೆಚ್ಚು ಶಿಕ್ಷೆ ಆಗಿರುವುದರಿಂದ ಜೈಲು ಸೇರುವುದು ಖಚಿತವಾಗಿದೆ. ಜಾಮೀನಿಗಾಗಿ ಹೈದರಾಬಾದ್​ನ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಬೇಕು. ಹೈಕೋರ್ಟ್ ಜಾಮೀನು ನೀಡುವವರೆಗೆ ಜೈಲಿನಲ್ಲಿರಬೇಕು.

Tags:    

Similar News