IIM Ahmedabad| ಪಿಎಚ್‌ಡಿ ಪ್ರವೇಶಕ್ಕೆ ಮೀಸಲು

ಐಐಎಂ ಮೀಸಲು ವ್ಯವಸ್ಥೆಯನ್ನು ಹೇಗೆ ಜಾರಿಗೊಳಿಸಲಾಗುತ್ತದೆ ಎಂಬ ವಿವರ ಬಹಿರಂಗಪಡಿಸಿಲ್ಲ.ಕೇಂದ್ರದ ಮಾರ್ಗಸೂಚಿಗಳನ್ನು ಅನುಸರಿಸಲಾಗುತ್ತದೆ ಎಂದು ಆನ್‌ಲೈನ್ ಪ್ರಕಟಣೆ ಸೂಚಿಸಿದೆ.

Update: 2024-09-24 11:30 GMT

ಅಹಮದಾಬಾದಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ಇದೇ ಮೊದಲ ಬಾರಿಗೆ ತನ್ನ ಪಿಎಚ್‌ಡಿ ಕಾರ್ಯಕ್ರಮಗಳಿಗೆ ಪ್ರವೇಶಕ್ಕೆ ಮೀಸಲು ಪರಿಚಯಿಸಿದೆ. 

ಪರಿಶಿಷ್ಟ ಜಾತಿ-ಪಂಗಡ, ಇತರ ಹಿಂದುಳಿದ ವರ್ಗಗಳು ಮತ್ತು ವಿಶೇಷಚೇತನ ಅಭ್ಯರ್ಥಿಗಳಿಗೆ ದೇಶದ ಪ್ರಮುಖ ವ್ಯಾಪಾರ ನಿರ್ವಹಣೆ ಶಾಲೆಯಲ್ಲಿ ಡಾಕ್ಟರೇಟ್ ಪ್ರೋಗ್ರಾಂ(ಅಥವಾ ಮ್ಯಾನೇಜ್ಮೆಂಟ್‌ ಫೆಲೋ ಪ್ರೋಗ್ರಾಂ)ಗೆ ಅರ್ಜಿ ಸಲ್ಲಿಸಲು ಅನುವು ಮಾಡಿಕೊಡುತ್ತದೆ. 

ಮೀಸಲು ಹೇಗೆ?: ಮೀಸಲು ಹೇಗೆ ಕಾರ್ಯಗತಗೊಳಿಸಲಾಗುತ್ತದೆ ಎಂಬ ವಿವರ ಬಹಿರಂಗಪಡಿಸದಿದ್ದರೂ, ಆನ್‌ಲೈನ್ ಪ್ರಕಟಣೆ ʻಪ್ರವೇಶದಲ್ಲಿ ಮೀಸಲು ನೀಡಲು ಭಾರತ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಲಾಗುತ್ತದೆʼ ಎಂದು ಹೇಳಿದೆ. ಜೊತೆಗೆ, ಕಾಯ್ದಿರಿಸಿದ ವರ್ಗಗಳ ಅಭ್ಯರ್ಥಿಗಳಿಗೆ ಅರ್ಹತೆಗೆ ಅಗತ್ಯವಿರುವ ಕನಿಷ್ಠ ಪದವಿ ಅಂಕಗಳಲ್ಲಿ ಶೇ.5 ಅಂಕಗಳ ಸಡಿಲಿಕೆ ನೀಡಲಾಗುತ್ತದೆ. 

ʻಪರಿಶಿಷ್ಟ ಜಾತಿ (ಎಸ್‌ಸಿ) / ಪರಿಶಿಷ್ಟ ಪಂಗಡ (ಎಸ್‌ಟಿ) /ವಿಶೇಷಚೇತನರು(ಪಿ ಡಬ್ಲ್ಯುಡಿ) /ಕೆನೆಪದರವಲ್ಲದ ಇತರ ಹಿಂದುಳಿದ ವರ್ಗಗಳು (ಎನ್ಸಿ-ಒಬಿಸಿ)/ಆರ್ಥಿಕವಾಗಿ ದುರ್ಬಲ ವಿಭಾಗ(ಇಡಬ್ಲ್ಯುಎಸ್‌)ಗಳಿಗೆ ಶೇ.5ರಷ್ಟು ಅಂಕ ವಿನಾಯಿತಿ ನೀಡಲಾಗುತ್ತದೆ,ʼ ಎಂದಿದೆ. 

ಹೈಕೋರ್ಟ್‌ ಮನವಿ: ಐಐಎಂ ಅಹಮದಾಬಾದ್‌ನ ಪಿಎಚ್‌ಡಿ ಕಾರ್ಯಕ್ರಮದಲ್ಲಿ ಮೀಸಲು ಜಾರಿಗೊಳಿಸುವಂತೆ 2021 ರ ಗುಜರಾತ್ ಹೈಕೋರ್ಟ್ ಸಲ್ಲಿಕೆಯಾದ ಅರ್ಜಿಯನ್ನು ಅನುಸರಿಸಿ, ಮೀಸಲು ಪರಿಚಯಿಸಲಾಗಿದೆ. ಐಐಎಂ ಹಳೆಯ ವಿದ್ಯಾರ್ಥಿಗಳ ಸಂಘವಾದ ಗ್ಲೋಬಲ್ ಐಐಎಂ ಅಲುಮ್ನಿ ನೆಟ್‌ವರ್ಕ್ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ದಾಖಲಿಸಿತ್ತು. ಸಂಸ್ಥೆಯು ಕೇಂದ್ರ ಶಿಕ್ಷಣ ಸಚಿವಾಲಯದಿಂದ ಧನಸಹಾಯ ಪಡೆಯುತ್ತಿದ್ದು,ಪ್ರವೇಶ ದಲ್ಲಿ ಮೀಸಲು ನಿಯಮ ಉಲ್ಲಂಘಿಸುತ್ತಿದೆ ಎಂದು ವಾದಿಸಿತ್ತು. 

ಇದಕ್ಕೆ ಪ್ರತಿಕ್ರಿಯಿಸಿದ್ದ ಐಐಎಂ ಅಹಮದಾಬಾದ್, ಪಿಎಚ್‌ಡಿ ಕೋರ್ಸ್‌ನಲ್ಲಿ ಮೀಸಲು ಜಾರಿ ಅನಪೇಕ್ಷಿತ ಪರಿಣಾಮ ಉಂಟುಮಾಡ ಬಹುದು; ಇತರ ಅರ್ಹ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ ಎಂದು ಪ್ರಮಾಣಪತ್ರದಲ್ಲಿ ವಾದಿಸಿತ್ತು. ಆದರೆ, ಅಕ್ಟೋಬರ್ 2023 ರಲ್ಲಿ ಪಿಎಚ್‌ಡಿ ಕಾರ್ಯಕ್ರಮದಲ್ಲಿ ಮೀಸಲು ಜಾರಿಗೆ ತರಲಾಗುತ್ತದೆ ಎಂದು ಗುಜರಾತ್ ಹೈಕೋರ್ಟ್‌ಗೆ ತಿಳಿಸಿತ್ತು. 

1971 ರಲ್ಲಿ ಪ್ರಾರಂಭವಾದ ಐಐಎಂ ಅಹಮದಾಬಾದ್‌ನ ಡಾಕ್ಟರೇಟ್ ಕಾರ್ಯಕ್ರಮದಲ್ಲಿ ಮೀಸಲು ನೀಡುತ್ತಿರಲಿಲ್ಲ.

Tags:    

Similar News