ಏಪ್ರಿಲ್ 8- ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣದಲ್ಲಿ ಯುಟ್ಯೂಬರ್ ಎ ಸತ್ತೈ ದುರೈಮುರುಗನ್ ಅವರಿಗೆ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ಮರುಸ್ಥಾಪಿಸಿದೆ.
ಮದ್ರಾಸ್ ಹೈಕೋರ್ಟಿನ ಜಾಮೀನು ರದ್ದು ಆದೇಶವನ್ನು ದುರೈಮುರುಗನ್ ಪ್ರಶ್ನಿಸಿದ್ದರು. ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು,ʻಯುಟ್ಯೂಬ್‌ನಲ್ಲಿ ಆರೋಪ ಮಾಡುವ ಪ್ರತಿಯೊಬ್ಬರನ್ನು ಜೈಲಿಗೆ ಕಳಿಸಲು ಆರಂಭಿಸಿದರೆ, ಎಷ್ಟು ಜನರನ್ನು ಜೈಲಿಗೆ ಹಾಕಬೇಕಾಗುತ್ತದೆ ಎಂದು ಊಹಿಸಿ?ʼ ಎಂದು ಕೋರ್ಟ್ ಕೇಳಿತು.
ʻಪ್ರತಿಭಟಿಸುವ ಮೂಲಕ ಮತ್ತು ಅಭಿಪ್ರಾಯವನ್ನು ವ್ಯಕ್ತಪಡಿಸುವ ಮೂಲಕ ಮನವಿದಾರನು ತನಗೆ ನ್ಯಾಯಾಲಯ ನೀಡಿದ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಂಡಿದ್ದಾನೆ ಎಂದು ನಾವು ಭಾವಿಸುವುದಿಲ್ಲ. ದೋಷಾರೋಪದಲ್ಲಿ ಉಲ್ಲೇಖಿಸಿರುವ ಆಧಾರಗಳು ಜಾಮೀನು ರದ್ದುಗೊಳಿಸಲು ಆಧಾರವಾಗುವುದಿಲ್ಲʼ ಎಂದು ಪೀಠ ಹೇಳಿತು.
ತಮಿಳುನಾಡು ರಾಜ್ಯವನ್ನು ಪ್ರತಿನಿಧಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು, ಯುಟ್ಯೂಬರ್ ʻಹಗರಣʼ ಹೇಳಿಕೆ ನೀಡಬಾರದು ಎಂಬ ಷರತ್ತು ವಿಧಿಸುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದರು. ಪ್ರತಿಕ್ರಿಯಿಸಿದ ನ್ಯಾಯಾಲಯ, ʻಯಾವುದು ಹಗರಣ ಮತ್ತು ಯಾವುದು ಅಲ್ಲ ಎಂಬುದನ್ನು ಈ ನ್ಯಾಯಾಲಯ ನಿರ್ಧರಿಸುತ್ತದೆʼ ಎಂದು ಹೇಳಿದೆ.
2021 ರಲ್ಲಿ ಯುಟ್ಯೂಬ್ ವಿಡಿಯೋಗಳಲ್ಲಿ ಸ್ಟಾಲಿನ್ ಮತ್ತು ಇತರರನ್ನು ಟೀಕಿಸಿದ್ದ ದುರೈಮುರುಗನ್ ಅವರನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದರು. ಜಾಮೀನಿನಲ್ಲಿ ಇರುವಾಗ ಅವಹೇಳನಕಾರಿ ಹೇಳಿಕೆ ನೀಡಬಾರದು ಅಥವಾ ಅಪರಾಧದಲ್ಲಿ ತೊಡಗಬಾರದು ಎಂಬ ಷರತ್ತಿನ ಮೇಲೆ ಮದ್ರಾಸ್ ಹೈಕೋರ್ಟ್ ,ಆಗಸ್ಟ್ 2021ರಲ್ಲಿ ಅವರಿಗೆ ಜಾಮೀನು ನೀಡಿತ್ತು. ಆದರೆ, ದುರೈಮುರುಗನ್ ಟೀಕಿಸುವುದನ್ನು ಮುಂದುವರಿಸಿದ್ದರಿಂದ, ಹೈಕೋರ್ಟ್ ಜೂನ್ 2022 ರಲ್ಲಿ ಅವರ ಜಾಮೀನು ರದ್ದುಗೊಳಿಸಿತು.