1997ರ ಲಾಕಅಪ್​ ಹಿಂಸೆ ಪ್ರಕರಣ; ಮಾಜಿ ಐಪಿಎಸ್​ ಅಧಿಕಾರಿ ಸಂಜೀವ್ ಭಟ್​ ಖುಲಾಸೆ

ಈ ಹಿಂದೆ 1990ರಲ್ಲಿ ಜಾಮ್​ನಗರದಲ್ಲಿ ನಡೆದ ಪ್ರಕರಣದಲ್ಲಿ ಭಟ್ ಅವರಿಗೆ ಜೀವಾವಧಿ ಶಿಕ್ಷೆ ಹಾಗೂ 1996ರಲ್ಲಿ ಪಾಲನ್ಪುರದಲ್ಲಿ ವಕೀಲರನ್ನು ಸಿಲುಕಿಸಲು ಮಾದಕ ದ್ರವ್ಯಗಳನ್ನು ಇಟ್ಟ ಪ್ರಕರಣದಲ್ಲಿ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.;

Update: 2024-12-08 07:13 GMT
ಸಂಜೀವ್ ಭಟ್​

1997ರಲ್ಲಿ ಪೊಲೀಸ್​ ಕಸ್ಟಡಿಯಲ್ಲಿ ಚಿತ್ರಹಿಂಸೆ ನೀಡಿದ ಪ್ರಕರಣದಲ್ಲಿ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರನ್ನು ಗುಜರಾತ್ ನ ಪೋರ್​ಬಂದರ್ ನ್ಯಾಯಾಲಯ ಖುಲಾಸೆಗೊಳಿಸಿದೆ.ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಖೇಶ್ ಪಾಂಡ್ಯ ಶನಿವಾರ ಆಗಿನ ಪೊಲೀಸ್ ವರಿಷ್ಠಾಧಿಕಾರಿ ಆಗಿದ್ದ ಸಂಜೀವ್​ ಭಟ್ ಅವರನ್ನು ಖುಲಾಸೆಗೊಳಿಸಿದ್ದಾರೆ. ಆರೋಪಿ ಸಂಜೀವ್​ ಭಟ್​​ ಅನುಮಾನದ ಆಧಾರದ ಮೇಲೆ ವ್ಯಕ್ತಿಯೊಬ್ಬರಿಗೆ ಚಿತ್ರಹಿಂಸೆ ನೀಡಿದ್ದರು ಎಂಬ ಆರೋಪವನ್ನು ಹೊತ್ತಿದ್ದಾರೆ.

ಸಂಜೀವ್ ಭಟ್​​ ಈ ಹಿಂದೆ ಜಾಮ್​​ನಗರದಲ್ಲಿ 1990ರಲ್ಲಿ ನಡೆದ 'ಲಾಕ್​ ಅಪ್​ ಡೆತ್' ​ ಪ್ರಕರಣದಲ್ಲಿ ಭಟ್ ಅವರಿಗೆ ಜೀವಾವಧಿ ಶಿಕ್ಷೆ ಮತ್ತು ಪಾಲನ್ಪುರದಲ್ಲಿ ರಾಜಸ್ಥಾನ ಮೂಲದ ವಕೀಲರನ್ನು ಸಿಲುಕಿಸಲೆಂದು ಮಾದಕವಸ್ತುಗಳನ್ನು ಇಟ್ಟ ಪ್ರಕಣಕ್ಕೆ ಸಂಬಂಧಿಸಿ 20 ವರ್ಷ ಜೈಲು ಶಿಕ್ಷೆಗೆ ಒಳಗಾಗಿದ್ದಾರೆ. ಈ ಪ್ರಕರಣ 1996 ರಲ್ಲಿ ನಡೆದಿತ್ತು. ಪ್ರಸ್ತುತ ಅವರನ್ನು ರಾಜ್ಕೋಟ್ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ.

ದೂರುದಾರರನ್ನೇ ಅಪರಾಧ ಮಾಡುವಂತೆ ಒತ್ತಾಯಿಸಲಾಗಿದೆ. ಅಪಾಯಕಾರಿ ಆಯುಧಗಳು ಹಿಡಿದು ಬೆದರಿಕೆ ಹಾಕಿ ಶರಣಾಗುವಂತೆ ಮಾಡಲಾಗಿದೆ ಎಂಬ ಸಂಜೀವ್​ ಭಟ್ ಮೇಲಿನ ಆರೋಪವನ್ನು ಸಾಬೀತುಪಡಿಸಲು ತನಿಖಾಧಕಾರಿಗಳ ಬಳಿ ಸಾಕ್ಷ್ಯಗಳು ಇಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಆದಾಗ್ಯೂ ಆ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದ ಸಂಜೀವ್ ಭಟ್​ ಆರೋಪಿಯನ್ನು ವಿಚಾರಣೆಗೆ ಒಳಪಡಿಸಲು ಅಗತ್ಯ ಅನುಮತಿ ಈ ಪ್ರಕರಣದಲ್ಲಿ ಪಡೆದಿಲ್ಲ ಎಂಬುದನ್ನು ಕೋರ್ಟ್​ ಗಮನಿಸಿದೆ.

ಭಯೋತ್ಪಾದಕ ಮತ್ತು ವಿಧ್ವಂಸಕ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಟಾಡಾ) ಮತ್ತು ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣದಲ್ಲಿ ತಪ್ಪೊಪ್ಪಿಗೆ ಪಡೆಯಲು ಪೊಲೀಸ್ ಕಸ್ಟಡಿಯಲ್ಲಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿದ ಆರೋಪದ ಮೇಲೆ ಭಟ್ ಮತ್ತು ಕಾನ್​​ಸ್ಟೆಬಲ್​ ವಜುಭಾಯಿ ಚೌ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 330 (ತಪ್ಪೊಪ್ಪಿಗೆ ಪಡೆಯಲು ನೋವುಂಟು ಮಾಡುವುದು) ಮತ್ತು 324 (ಅಪಾಯಕಾರಿ ಆಯುಧಗಳಿಂದ ಗಾಯಗೊಳಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು .

1997ರ ಜುಲೈ 6ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಜಾಧವ್ ದೂರು ನೀಡಿದ್ದರು. ಬಳಿಕ ನ್ಯಾಯಾಲಯದ ನಿರ್ದೇಶನದ ಮೇರೆಗೆ ಭಟ್ ಮತ್ತು ಚೌ ವಿರುದ್ಧ 2013ರ ಏಪ್ರಿಲ್ 15ರಂದು ಪೋರ್ ಬಂದರ್ ನಗರ ಬಿ-ವಿಭಾಗೀಯ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಲಾಗಿತ್ತು. 1994ರ ಶಸ್ತ್ರಾಸ್ತ್ರ ಹೊಂದಿದ ಪ್ರಕರಣದ 22 ಆರೋಪಿಗಳಲ್ಲಿ ಜಾಧವ್ ಕೂಡ ಒಬ್ಬರಾಗಿದ್ದರು.

ಪ್ರಾಸಿಕ್ಯೂಷನ್ ಪ್ರಕಾರ, ಪೋರ್​ಬಂದರ್​ ಪೊಲೀಸರ ತಂಡವು 1997 ರ ಜುಲೈ 5 ರಂದು ಅಹಮದಾಬಾದ್​ನ ಸಬರಮತಿ ಕೇಂದ್ರ ಕಾರಾಗೃಹದಿಂದ ವರ್ಗಾವಣೆ ವಾರಂಟ್ ಮೇಲೆ ಜಾಧವ್ ಅವರನ್ನು ಕರೆದುಕೊಂಡು ಸಂಜೀವ್​ ಭಟ್ ಅವರ ನಿವಾಸಕ್ಕೆ ಕರೆದೊಯ್ದಿದ್ದರು.

ಜಾಧವ್ ಅವರ ಖಾಸಗಿ ಅಂಗಗಳು ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ವಿದ್ಯುತ್ ಶಾಕ್​ ನೀಡಲಾಗಿತ್ತು. ಅವರ ಮಗನಿಗೂ ವಿದ್ಯುತ್ ಶಾಕ್ ಕೊಡಲಾಗಿತ್ತು. ದೂರುದಾರರು ಚಿತ್ರಹಿಂಸೆಯ ಬಗ್ಗೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು. ಸಾಕ್ಷ್ಯಾಧಾರಗಳ ಆಧಾರದ ಮೇಲೆ ನ್ಯಾಯಾಲಯವು ಡಿಸೆಂಬರ್ 31, 1998 ರಂದು ಪ್ರಕರಣ ದಾಖಲಿಸಿತ್ತು. ಭಟ್ ಮತ್ತು ಚೌ ಅವರಿಗೆ ಸಮನ್ಸ್ ಜಾರಿ ಮಾಡಿತ್ತು.

ಏಪ್ರಿಲ್ 15, 2013 ರಂದು ನ್ಯಾಯಾಲಯವು ಭಟ್ ಮತ್ತು ಚೌ ವಿರುದ್ಧ ಎಫ್ಐಆರ್ ದಾಖಲಿಸಲು ಆದೇಶಿಸಿತ್ತು. 

Tags:    

Similar News