ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಅಧಿಕಾರಾವಧಿ ವಿಸ್ತರಣೆ; ಇದಕ್ಕೊಂದು ಕಾರಣವಿದೆ
64 ವರ್ಷದ ಜನರಲ್ ಚೌಹಾಣ್ ಅವರು ಸಿಡಿಎಸ್ ಮುಖ್ಯಸ್ಥರಾಗಿ ಮಾತ್ರವಲ್ಲದೆ, ಸೇನಾ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯಾಗಿಯೂ ಮುಂದುವರಿಯಲಿದ್ದಾರೆ.
ಭಾರತದ ರಕ್ಷಣಾ ಪಡೆಗಳ ಮುಖ್ಯಸ್ಥ (CDS) ಜನರಲ್ ಅನಿಲ್ ಚೌಹಾಣ್ ಅವರ ಅಧಿಕಾರಾವಧಿಯನ್ನು 2026ರ ಮೇ 30ರವರೆಗೆ ವಿಸ್ತರಿಸಿ ಕೇಂದ್ರ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಅವರ ಪ್ರಸ್ತುತ ಅಧಿಕಾರಾವಧಿ ಸೆಪ್ಟೆಂಬರ್ 30ಕ್ಕೆ ಕೊನೆಗೊಳ್ಳಲಿದ್ದ ಹಿನ್ನೆಲೆಯಲ್ಲಿ, ಪ್ರಧಾನಿ ನೇತೃತ್ವದ ಕ್ಯಾಬಿನೆಟ್ ನೇಮಕಾತಿ ಸಮಿತಿಯು (ACC) ಈ ವಿಸ್ತರಣೆಗೆ ಅನುಮೋದನೆ ನೀಡಿದೆ.
64 ವರ್ಷದ ಜನರಲ್ ಚೌಹಾಣ್ ಅವರು ಸಿಡಿಎಸ್ ಮುಖ್ಯಸ್ಥರಾಗಿ ಮಾತ್ರವಲ್ಲದೆ, ಸೇನಾ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯಾಗಿಯೂ ಮುಂದುವರಿಯಲಿದ್ದಾರೆ. ಸೇನಾ ನಿಯಮಗಳ ಪ್ರಕಾರ, ಸಶಸ್ತ್ರ ಪಡೆಗಳ ಮುಖ್ಯಸ್ಥರಿಗೆ 62 ವರ್ಷ ವಯಸ್ಸು ಅಥವಾ 3 ವರ್ಷಗಳ ಸೇವೆ ನಿವೃತ್ತಿ ಮಾನದಂಡವಾದರೆ, ಸಿಡಿಎಸ್ ಹುದ್ದೆಗೆ 65 ವರ್ಷಗಳವರೆಗೆ ಸೇವೆ ಸಲ್ಲಿಸಲು ಅವಕಾಶವಿದೆ. ಈ ನಿಯಮದ ಅನ್ವಯ, ಜನರಲ್ ಚೌಹಾಣ್ ಅವರ ಸೇವೆಯನ್ನು ವಿಸ್ತರಿಸಲಾಗಿದೆ.
2022ರ ಸೆಪ್ಟೆಂಬರ್ 30ರಂದು ದೇಶದ ಎರಡನೇ ಸಿಡಿಎಸ್ ಆಗಿ ಅಧಿಕಾರ ವಹಿಸಿಕೊಂಡಿದ್ದ ಜನರಲ್ ಚೌಹಾಣ್, ಜನರಲ್ ಬಿಪಿನ್ ರಾವತ್ ಅವರ ಅಕಾಲಿಕ ನಿಧನದ ನಂತರ ತೆರವಾಗಿದ್ದ ಈ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಅಂದಿನಿಂದ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗಳ ನಡುವೆ ಸಮನ್ವಯ ಮತ್ತು ಕಾರ್ಯಾಚರಣೆಗಳಲ್ಲಿ ಸಹಯೋಗ ಹೆಚ್ಚಿಸಲು ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ನಡೆದ 'ಆಪರೇಷನ್ ಸಿಂಧೂರ್' ಕಾರ್ಯಾಚರಣೆಯ ಯಶಸ್ಸಿನಲ್ಲಿ ಮೂರು ಸೇನೆಗಳ ಸಹಕಾರದಲ್ಲು ಅವರ ಪಾತ್ರ ಮಹತ್ವದ್ದಾಗಿತ್ತು.
2019ರಲ್ಲಿ ಪಾಕಿಸ್ತಾನದ ಬಾಲಾಕೋಟ್ ಮೇಲೆ ಭಾರತೀಯ ವಾಯುಪಡೆ ನಡೆಸಿದ ದಾಳಿಯ ಸಂದರ್ಭದಲ್ಲಿ, ಜನರಲ್ ಚೌಹಾಣ್ ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರಾಗಿ (DGMO) ಕಾರ್ಯನಿರ್ವಹಿಸಿದ್ದರು ಮತ್ತು ಆ ಕಾರ್ಯಾಚರಣೆಗೆ ಪ್ರಮುಖ ಸಲಹೆ, ಮಾಹಿತಿಗಳನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ತಮ್ಮ ನಾಲ್ಕು ದಶಕಗಳ ಸುದೀರ್ಘ ಸೇನಾ ವೃತ್ತಿಜೀವನದಲ್ಲಿ ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ಭಾರತದಲ್ಲಿನ ದಂಗೆ-ನಿಗ್ರಹ ಕಾರ್ಯಾಚರಣೆಗಳಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಸೇನೆಯಲ್ಲಿ ಸಲ್ಲಿಸಿದ ಅನುಪಮ ಸೇವೆಗಾಗಿ ಅವರಿಗೆ ಪರಮ ವಿಶಿಷ್ಟ ಸೇವಾ ಪದಕ, ಉತ್ತಮ ಯುದ್ಧ ಸೇವಾ ಪದಕ ಸೇರಿದಂತೆ ಹಲವು ಶೌರ್ಯ ಪ್ರಶಸ್ತಿಗಳು ಸಂದಿವೆ.